Advertisement
ಜಿಲ್ಲೆಯಲ್ಲಿ ವಸತಿ ರಹಿತ ಹಾಗೂ ನಿವೇಶನ ರಹಿತ ಕುಟುಂಬಗಳ ಸಮೀಕ್ಷಾ ವರದಿ ಪ್ರಕಾರ 69,185 ವಸತಿ ರಹಿತ, 41,248 ನಿವೇಶನ ರಹಿತ ಕುಟುಂಬಗಳಿವೆ. 2017-18ನೇ ಸಾಲಿನ ಬಸವ ವಸತಿ ಯೋಜನೆ, ಅಂಬೇಡ್ಕರ್ ನಿವಾಸ್ ಯೋಜನೆ, ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಫಲಾನು ಭವಿಗಳನ್ನು ಆಯ್ಕೆ ಮಾಡಲಾಗಿದ್ದರೂ ಅನುದಾನ ಬಿಡುಗಡೆ ವಿಳಂಬ ಮಾಡುತ್ತಿರುವುದರಿಂದ ಹಣಕಾಸು ವರ್ಷ ಮುಗಿಯುತ್ತಾ ಬಂದರೂ ಶೇ.50ರಷ್ಟು ಪ್ರಗತಿ ಸಾಧ್ಯವಾಗಿಲ್ಲ. ಹತ್ತು ತಿಂಗಳು ಪೂರ್ಣಗೊಳ್ಳುತ್ತಾ ಬಂದರೂ ಶೇ. 50ರಷ್ಟು ಪ್ರಗತಿ ಆಗಿರುವಾಗ ಇನ್ನುಳಿದ ಎರಡು ತಿಂಗಳಲ್ಲಿ ಮನೆ ನಿರ್ಮಾಣ ಸಾಧ್ಯವೇ ಎಂಬ ಪ್ರಶ್ನೆ ಕೇಳಿ ಬಂದಿದೆ.
Related Articles
Advertisement
ಅಂಬೇಡ್ಕರ್ ನಿವಾಸ್: ಇನ್ನು ಅಂಬೇಡ್ಕರ್ ನಿವಾಸ್ ಯೋಜನೆಯೂ ಇದಕ್ಕಿಂತ ಭಿನ್ನವಾಗೇನು ಇಲ್ಲ. ಜಿಲ್ಲೆಯ 7 ತಾಲೂಕುಗಳ 3,778 ಫಲಾನುಭವಿಗಳಲ್ಲಿ ಈವರೆಗೆ ಪೂರ್ಣಗೊಂಡಿರುವ ಮನೆಗಳ ಸಂಖ್ಯೆ 304!, ಪ್ರಗತಿಯಲ್ಲಿರುವ ಮನೆಗಳು 1,581, ಪ್ರಾರಂಭವೇ ಆಗದಿರುವ ಮನೆಗಳು 1,893.
ಈ ಯೋಜನೆಯಡಿ ನಂಜನಗೂಡು 812ಕ್ಕೆ 76 ಪೂರ್ಣ, ಹುಣಸೂರು 870ಕ್ಕೆ 73 ಪೂರ್ಣ, ತಿ.ನರಸೀಪುರ 778ಕ್ಕೆ 72 ಪೂರ್ಣ, ಪಿರಿಯಾ ಪಟ್ಟಣ 672ಕ್ಕೆ 63 ಮನೆಗಳು ಪೂರ್ಣವಾಗಿದ್ದರೆ, ಎಚ್.ಡಿ.ಕೋಟೆ ತಾಲೂಕಲ್ಲಿ 145ಕ್ಕೆ 9, ಕೆ.ಆರ್. ನಗರ ತಾಲೂಕಲ್ಲಿ 188ಕ್ಕೆ 4, ಮೈಸೂರು ತಾಲೂಕಲ್ಲಿ 458ಕ್ಕೆ 16 ಮನೆಗಳಷ್ಟೇ ಪೂರ್ಣಗೊಂಡಿರುವುದು.
ಪ್ರಧಾನಿ ಆವಾಸ್: ಪ್ರಧಾನಮಂತ್ರಿ ಆವಾಸ್ ಯೋಜನೆಯಲ್ಲಿ ಜಿಲ್ಲೆಯ 4709 ಫಲಾನುಭವಿಗಳ ಪೈಕಿ 1,211 ಮನೆಗಳು ಪೂರ್ಣಗೊಂಡಿದ್ದು, 1,977 ಮನೆಗಳ ನಿರ್ಮಾಣ ಪ್ರಗತಿಯಲ್ಲಿದ್ದರೆ, 1,521 ಮನೆಗಳ ನಿರ್ಮಾಣ ಕಾಮಗಾರಿ ಪ್ರಾರಂಭವೇ ಆಗಿಲ್ಲ. ಈ ಯೋಜನೆಯ ಪ್ರಗತಿಯಲ್ಲಿ ನಂಜನಗೂಡು ತಾಲೂಕು ಮುಂದಿದ್ದು, 1,585 ಫಲಾನುಭವಿಗಳಲ್ಲಿ ಈಗಾಗಲೇ 351 ಮನೆ ನಿರ್ಮಾಣವಾಗಿದೆ. ನಂತರದಲ್ಲಿ ತಿ.ನರಸೀಪುರ 685ಕ್ಕೆ 211 ಪೂರ್ಣ, ಕೆ.ಆರ್.ನಗರ 681ಕ್ಕೆ 202 ಪೂರ್ಣ, ಮೈಸೂರು ತಾಲೂಕು 802ಕ್ಕೆ 199 ಪೂರ್ಣ, ಹುಣಸೂರು ತಾಲೂಕು 337ಕ್ಕೆ 121 ಪೂರ್ಣವಾಗಿದ್ದರೆ ಎಚ್.ಡಿ. ಕೋಟೆ ತಾಲೂಕಲ್ಲಿ 465ಕ್ಕೆ 83 ಪೂರ್ಣ, ಪಿರಿಯಾಪಟ್ಟಣ ತಾಲೂಕಲ್ಲಿ 154ಕ್ಕೆ 44 ಮನೆಗಳು ಮಾತ್ರ ಪೂರ್ಣಗೊಂಡಿದೆ.
ಸೂರಿಗಾಗಿ ಗುಡಿಸಲು ಕೆಡವಿ ಬೀದಿಗೆ ಬಿದ್ದ ಜನ: ತಲೆಯ ಮೇಲೊಂದು ಸ್ವಂತ ಸೂರು ಕನಸು ಕಾಣುತ್ತಾ ಫಲಾನುಭವಿಗಳು, ಅನುದಾನ ಬಿಡುಗಡೆಯಾಗಬೇಕಾದರೆ ತಮ್ಮ ನಿವೇಶನದ ಫೋಟೋವನ್ನು ಜಿಪಿಎಸ್‌ನಲ್ಲಿ ಅಪ್‌ಲೋಡ್ ಮಾಡಬೇಕಿರುವುದರಿಂದ ಇದ್ದ ಗುಡಿಸಲನ್ನೂ ಕೆಡವಿ ಖಾಲಿ ನಿವೇಶನದ ಫೋಟೋ ತೆಗೆಸಿ ಸಲ್ಲಿಸಿದ್ದಾರೆ. ಆದರೆ, ವಸತಿ ಯೋಜನೆಯ ನಿಯಮಾವಳಿ ಪ್ರಕಾರ ಫಲಾನುಭವಿ ಸ್ವಂತ ಖರ್ಚಿನಲ್ಲಿ ತಳಪಾಯ ಹಾಕಿಸಿ, ಆ ಫೋಟೋ ಸಲ್ಲಿಸಿದ ನಂತರ ಹಂತ ಹಂತವಾಗಿ ಅನುದಾನ ಬಿಡುಗಡೆಯಾಗುತ್ತದೆ.
ಆದರೆ, ಕೂಲಿ ಕೆಲಸ ಮಾಡಿಕೊಂಡು, ತೆಂಗಿನ ಗರಿಯ ಗುಡಿಸಲು ಕಟ್ಟಿಕೊಂಡು ವಾಸಮಾಡುತ್ತಿದ್ದವರಿಗೆ ತಳಪಾಯ ಹಾಕಿಸಲು ಸಾವಿರಾರು ರೂಪಾಯಿ ಎಲ್ಲಿಂದ ಬರಬೇಕು ಎಂಬ ಪ್ರಶ್ನೆಗೆ ಯಾರಲ್ಲೂ ಉತ್ತರವಿಲ್ಲ. ಬದಲಿಗೆ ಸರ್ಕಾರದ ನಿಯಮಾವಳಿಗಳನ್ನಷ್ಟೇ ಹೇಳುತ್ತಾರೆ. ಹೀಗಾಗಿ ಫಲಾನುಭವಿಗಳು ತಾವಿರುವ ಗುಡಿಸಲುಗಳನ್ನು ಕೆಡವಿ ಖಾಲಿ ನಿವೇಶನದ ಫೋಟೋ ಜಿಪಿಎಸ್‌ಗೆ ಅಪ್‌ಲೋಡ್ ಮಾಡಿಸುತ್ತಿಲ್ಲ. ಇದರಿಂದಾಗಿ ಯೋಜನೆ ಕುಂಠಿತವಾಗುತ್ತಿದೆ ಎನ್ನುತ್ತಾರೆ ಜಿಲ್ಲಾ ಪಂಚಾಯಿತಿ ಅಧಿಕಾರಿಗಳು.
* ಗಿರೀಶ್ ಹುಣಸೂರು