Advertisement

ಹಿಂದುಳಿದವರು ಸ್ವಾಭಿಮಾನದ ಜೀವನ ರೂಪಿಸಿಕೊಳ್ಳಿ

06:54 PM Nov 02, 2021 | Team Udayavani |

ಮುಧೋಳ : ಕಳೆದ ನಾಲ್ಕು ವರ್ಷದಿಂದ ಪದೇ ಪದೆ ಮುಂದೂಡಿಕೆಯಾಗುತ್ತಿದ್ದ ಡಾ.ಬಿ.ಆರ್‌. ಅಂಬೇಡ್ಕರ್‌ ಅವರ ಪುತ್ಥಳಿ ಅನಾವರಣ ಕಾರ್ಯಕ್ರಮ ಇಂದು ಅದ್ಧೂರಿಯಾಗಿ ನಡೆದಿದ್ದು ನನಗೆ ತೀವ್ರ ಸಂತಸವಾಗಿದೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದರು.

Advertisement

ನಗರದಲ್ಲಿ ಸೋಮವಾರ ನಡೆದ ಡಾ.ಬಿ.ಆರ್‌. ಅಂಬೇಡ್ಕರ್‌ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದ ಹಿತ ಚಿಂತನೆಗೆ ಶ್ರಮಿಸುತ್ತಿದ್ದ ಅಂಬೇಡ್ಕರ್‌ ಅವರು ಶಿಕ್ಷಣದಿಂದ ಮಾತ್ರ ದೀನ ದಲಿತರ ಏಳಿಗೆ ಸಾಧ್ಯ ಎಂದು ನಂಬಿದ್ದರು. ಅವರ ಮಾತಿನಂತೆ ನನ್ನ ಕ್ಷೇತ್ರದಲ್ಲಿ 9 ವಸತಿ ಶಾಲೆ ನಿರ್ಮಿಸಿ ಬಡವಿದ್ಯಾರ್ಥಿಗಳ ಓದಿಗೆ ಶ್ರಮಿಸುತ್ತಿದ್ದೇನೆ ಎಂದು ಹೇಳಿದರು.

ಶಿಕ್ಷಣ, ಸಂಘಟನೆ ಹಾಗೂ ಹೋರಾಟದ ನೆಲೆಗಟ್ಟಿನಲ್ಲಿ ಜೀವನ ರೂಪಿಸಿಕೊಂಡಿದ್ದ ಡಾ.ಬಿ.ಆರ್‌. ಅಂಬೇಡ್ಕರ್‌ ಅವರು ನಮಗೆಲ್ಲ ದಾರಿದೀಪವಾಗಬೇಕು ಎಂದು ಹೇಳಿದರು. ಡಾ| ಬಿ.ಆರ್‌. ಅಂಬೇಡ್ಕರ್‌ ಅವರ ಜೀವನಾದರ್ಶಗಳನ್ನು ಯುವಪೀಳಿಗೆ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸ್ವಾಭಿಮಾನದ ಜೀವನ ನಡೆಸಬೇಕು ಎಂದು ಹೇಳಿದರು.

ಸಂಸದ ಪಿ.ಸಿ. ಗದ್ದಿಗೌಡರ ಮಾತನಾಡಿ, ದೇಶದ ಬದಲಾವಣೆಗೆ ನಾಂದಿ ಹಾಡಿರುವ ಡಾ| ಬಿ.ಆರ್‌. ಅಂಬೇಡ್ಕರ್‌ ಹಾಕಿಕೊಟ್ಟ ದಾರಿಯಲ್ಲಿ ಯುವಜನತೆ ಸಾಗಬೇಕು. ಗುಣಮಟ್ಟದ ಶಿಕ್ಷಣ ಪಡೆದು ದೇಶದ ಪ್ರಗತಿಗೆ ಶ್ರಮಿಸಬೇಕು ಎಂದು ಹೇಳಿದರು. ನಳಂದ ವಿಹಾರದ ಬಂತೇಜಿ ಬೋರತ್ನ ಅವರು ಮಾತನಾಡಿ, ನಗರದಲ್ಲಿ ನಿರ್ಮಾಣಗೊಂಡಿರುವ ಡಾ| ಬಿ.ಆರ್‌. ಅಂಬೇಡ್ಕರ್‌ ಮೂರ್ತಿ ನೋಡಿದಾಗ ಪ್ರತಿಯೊಬ್ಬರಲ್ಲಿಯೂ ಸ್ವಾಭಿಮಾನದ ಚಿಲುಮೆ ಉಕ್ಕಬೇಕು ಎಂದು ಹೇಳಿದರು.

ನೆರೆಯ ಆಂಧ್ರಪ್ರದೇಶದಲ್ಲಿ ಡಾ| ಬಿ.ಆರ್‌. ಅಂಬೇಡ್ಕರ್‌ ಅವರ 130ಅಡಿ ಎತ್ತರದ ಮೂರ್ತಿಗೆ ಸಿದ್ಧತೆ ನಡೆದಿದ್ದು, ನಮ್ಮ ರಾಜ್ಯದಲ್ಲಿಯೂ ಆ ಮಾದರಿಯಲ್ಲಿ ಮೂರ್ತಿ ಪ್ರತಿಷ್ಠಾಪನೆಗೆ ಮುಂದಾಗಬೇಕು ಎಂದು ಸಚಿವ ಗೋವಿಂದ ಕಾರಜೋಳ ಅವರ ಬಳಿ ಹೇಳಿಕೊಂಡಿದ್ದೇವೆ. ಅವರು ನಮ್ಮ ಮಾತಿಗೆ ಸಕಾರಾತ್ಮವಾಗಿ ಸ್ಪಂದಿಸಿ ಮುಂದಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಮಾತನಾಡೋಣ ಎಂದಿದ್ದಾರೆ ಎಂದು ತಿಳಿಸಿದರು.

Advertisement

ನಗರಸಭೆ ಹಂಗಾಮಿ ಅಧ್ಯಕ್ಷೆ ಸ್ವಾತಿ ಕುಲಕರ್ಣಿ, ಬಿಜೆಪಿ ಮುಖಂಡ ಕೆ.ಆರ್‌. ಮಾಚಪ್ಪನವರ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಭೀಮನಗೌಡ ಪಾಟೀಲ, ಎಪಿಎಂಸಿ ಅಧ್ಯಕ್ಷ ಭೀಮಪ್ಪ ತಳವಾರ, ಉಪಾಧ್ಯಕ್ಷ ಲಕ್ಷ್ಮಣ ಮಾದರ, ನಗರ ಯೋಜನಾ ಘಟಕದ ಅಧ್ಯಕ್ಷ ಪ್ರಕಾಶ ವಸ್ತ್ರದ, ನಗರ ಆಶ್ರಯ ಸಮಿತಿ ಅಧ್ಯಕ್ಷ ಕಲ್ಲಪ್ಪಣ್ಣ ಸಬರದ, ಬಿಜೆಪಿ ಗ್ರಾಮೀಣ ಘಟಕ ಅಧ್ಯಕ್ಷ ಹನಮಂತ ತುಳಸಿಗೇರಿ, ನಗರ ಘಟಕ ಅಧ್ಯಕ್ಷ ಡಾ| ರವಿ ನಂದಗಾವಿ, ಬಿಜೆಪಿ ಮುಖಂಡ ಅರುಣ ಕಾರಜೋಳ, ಜಿಲ್ಲಾಧಿಕಾರಿ ಡಾ| ರಾಜೇಂದ್ರ, ಪೊಲೀಸ್‌ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ, ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಟಿ.ಭೂಬಾಲನ, ಉಪವಿಭಾಗಾಧಿಕಾರಿ ಸಿದ್ದು ಹುಲ್ಲೊಳ್ಳಿ, ತಹಶೀಲ್ದಾರ್‌
ಸಂಗಮೇಶ ಬಾಡಗಿ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಕಿರಣ ಘೋರ್ಪಡೆ, ನಗರಸಭೆ ಆಯುಕ್ತ ಎಸ್‌.ಜಿ. ಅಂಬಿಗೇರ, ಎಚ್‌.ಆರ್‌. ಪಾಟೀಲ, ಮೋಹನ ಕೋರಡ್ಡಿ ಇದ್ದರು.

ಪುತ್ಥಳಿ ಅನಾವರಣ : ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ನಗರದ ಪ್ರಮುಖ ಬೀದಿಗಳಲ್ಲಿ ಡಾ| ಬಿ.ಆರ್‌. ಅಂಬೇಡ್ಕರ್‌ ಅವರ ಭಾವಚಿತ್ರ ಮೆರವಣಿಗೆ ನಡೆಯಿತು. ಬಳಿಕ ಅಂಬೇಡ್ಕರ್‌ ವೃತ್ತಕ್ಕೆ ಆಗಮಿಸಿದ ಮೆರವಣಿಗೆ ಸಮಾಪ್ತಿಗೊಂಡು ಸಚಿವ ಕಾರಜೋಳ ಪುತ್ಥಳಿ
ಅನಾವರಣಗೊಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next