Advertisement

ಜಾಹೀರಾತು ನಿಯಮಕ್ಕೆ ತೆರೆಮರೆ ಸಿದ್ಧತೆ

12:42 AM Dec 18, 2019 | Team Udayavani |

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಜಾಹೀರಾತು ಮತ್ತೂಮ್ಮೆ ಸದ್ದು ಮಾಡುತ್ತಿದೆ! ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್‌)ವು ತನ್ನ ವ್ಯಾಪ್ತಿಯಲ್ಲಿ ಜಾಹೀರಾತು ಅಳವಡಿಸಿಕೊಳ್ಳಲು ಇರುವ ಸಾಧ್ಯತೆಗಳ ಬಗ್ಗೆ ಸ್ಪಷ್ಟನೆ ನೀಡುವಂತೆ ನಗರಾಭಿವೃದ್ಧಿ ಇಲಾಖೆಯಿಂದ ವಿವರಣೆ ಕೋರಿದೆ.

Advertisement

ಈ ಹೊಸ ಬೆಳವಣಿಗೆ ಜಾಹೀರಾತು ಪರವಾಗಿ ಲಾಬಿ ನಡೆಸುತ್ತಿರುವವರಿಗೆ ಅವಕಾಶವಾಗಿ ಮಾರ್ಪಟ್ಟಿದೆ. ಮೆಟ್ರೋ ಪಿಲ್ಲರ್‌ಗಳ ನಡುವೆ ಖಾಲಿ ಇರುವ ಜಾಗದಲ್ಲಿ ಜಾಹೀರಾತು ಅಳವಡಿಸಿಕೊಳ್ಳುವ ಬಗ್ಗೆ ಈಗ ಇರುವ ಜಾಹೀರಾತು ನಿಯಮದಲ್ಲಿ ಯಾವುದೇ ಸ್ಪಷ್ಟನೆ ಇಲ್ಲ. ಹೀಗಾಗಿ, ಈ ಬಗ್ಗೆ ಸ್ಪಷ್ಟನೆ ನೀಡಿ ಸಹಕರಿಸಬೇಕು ಎಂದು ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳನ್ನು ಕೋರಿದೆ.

ಈ ಅವಕಾಶವನ್ನೇ ನೆಪವಾಗಿರಿಸಿಕೊಂಡು ಬಿಬಿಎಂಪಿ ರೂಪಿಸಿರುವ “ಹೊರಾಂಗಣ ಸೈನೇಜ್‌ ಮತ್ತು ಸಾರ್ವಜನಿಕ ಸಂದೇಶ ನೀತಿ ಹಾಗೂ ಹೊರಾಂಗಣ ಜಾಹೀರಾತು ಮತ್ತು ಸಾರ್ವಜನಿಕ ಸಂದೇಶ ಬೈಲಾ-2018′ ಕರಡಿಗೆ ನಿಯಮ ರೂಪಿಸಲು ಸರ್ಕಾರದ ಮಟ್ಟದಲ್ಲಿ ಸಿದ್ಧತೆ ನಡೆಯುತ್ತಿದೆ! ಈ ಹಿಂದೆ ನಗರಾಭಿವೃದ್ಧಿ ಇಲಾಖೆ “ಜಾಹೀರಾತು ನಿಯಮ 2019’ರೂಪಿಸಿತ್ತು ಮತ್ತು ಜಾಹೀರಾತು ನಿಯಮಗಳು-2019ರ ಬಗ್ಗೆ ವರದಿ ನೀಡುವಂತೆ ತಜ್ಞರ ಸಮಿತಿಯನ್ನೂ ರಚಿಸಿತ್ತು.

ಆದರೆ, ಸರ್ಕಾರ ರೂಪಿಸಿದ್ದ ನಿಯಮಕ್ಕೆ ಪಾಲಿಕೆಯ ಸದಸ್ಯರಿಂದ ತೀವ್ರ ವಿರೋಧವ್ಯಕ್ತವಾಗಿತ್ತು. ಸರ್ಕಾರದ ನಡೆಯನ್ನು ಖಂಡಿಸಿ, ಅಂದಿನ ಮೇಯರ್‌ ಗಂಗಾಂಬಿಕೆ ಮಲ್ಲಿಕಾರ್ಜುನ್‌ ಅವರು ನಗರಾಭಿವೃದ್ಧಿ ಇಲಾಖೆಯ ಅಧಿಕಾರಿಗಳಿಗೆ ಪತ್ರ ಬರೆದಿದ್ದರು. ಇದು ಪಾಲಿಕೆಯಲ್ಲಿ ತೀವ್ರ ಚರ್ಚೆಗೂ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರಸ್ತಾವನೆಯನ್ನು ಅಂದಿನ ಸರ್ಕಾರ ಕೈಬಿಟ್ಟಿತ್ತು. ಈಗ ಮೆಟ್ರೋ ವಿವರಣೆ ಕೇಳಿರುವುದರಿಂದ ಈ ನಿಯಮ ಮತ್ತೆ ಮುನ್ನೆಲೆಗೆ ಬಂದಿದೆ.

ಸಮಿಶ್ರ ಸರ್ಕಾರದ ಅವಧಿಯಲ್ಲಿ ಜಾಹೀರಾತು ಬೈಲಾಗೆ ನಿಯಮ ರೂಪಿಸುವುದನ್ನು ಬಿಜೆಪಿ ನಾಯಕರು ವಿರೋಧಿಸಿದ್ದರು. ಈಗ ಬಿಜೆಪಿ ಸರ್ಕಾರವೇ ನಿಯಮ ರೂಪಿಸಲು ಮುಂದಾಗಿದೆ. ಇತ್ತೀಚೆಗೆ ಹೈಕೋರ್ಟ್‌ ಬಿಬಿಎಂಪಿ ವ್ಯಾಪ್ತಿಯಲ್ಲಿನ ಹೋರ್ಡಿಂಗ್ಸ್‌ ಸ್ಟ್ರಕ್ಚರ್‌ ತೆರವುಗೊಳಿಸುವಂತೆ ತರಾಟೆ ತೆಗೆದುಕೊಂಡಿತ್ತು. ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಬಿಬಿಎಂಪಿಯ ಅಧಿಕಾರಿಗಳು ಮೊದಲ ಹಂತದಲ್ಲಿ ಬಿಬಿಎಂಪಿ ಸ್ವತ್ತಿನ ಜಾಗಗಳಲ್ಲಿ ಅಳವಡಿಸಿರುವ ಸ್ಟ್ರಕ್ಚರ್‌ ತೆರವು ಮಾಡುತ್ತಿದ್ದಾರೆ.

Advertisement

ಈ ಮಧ್ಯೆಯೇ ಸರ್ಕಾರ ನಿಯಮ ರೂಪಿಸಲು ಸಿದ್ಧವಾಗಿದೆ. ಬಿಬಿಎಂಪಿಗೆ ಕರಡು ರೂಪಿಸುವ ಅಧಿಕಾರವಿದೆಯಾದರೂ, ಬಿಬಿಎಂಪಿ ರೂಪಿಸುವ ಕರಡುಗಳಿಗೆ ನಿಯಮ ರೂಪಿಸುವ ಅಧಿಕಾರ ಸರ್ಕಾರಕ್ಕೆ ಇದೆ ಎಂದು ಹೆಸರು ಹೇಳಲಿಚ್ಛಿಸದ ಬಿಬಿಎಂಪಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಪಾಲಿಕೆ 2018ರಲ್ಲಿ “ಹೊರಾಂಗಣ ಸೈನೇಜ್‌ ಮತ್ತು ಸಾರ್ವಜನಿಕ ಸಂದೇಶನೀತಿ ಹಾಗೂ ಹೊರಾಂಗಣ ಜಾಹೀರಾತು ಮತ್ತು ಸಾರ್ವಜನಿಕ ಸಂದೇಶ ಬೈಲಾ-2018′ ಜಾರಿಗೆ ತಂದಿತ್ತು.

ನಗರಾಭಿವೃದ್ಧಿ ಇಲಾಖೆಯ ನಿಯಮವನ್ನು ವಿರೋಧಿಸಿದ್ದ ಪಾಲಿಕೆ ಸದಸ್ಯರು. ಅನಧಿಕೃತ ಫ್ಲೆಕ್ಸ್‌, ಬ್ಯಾನರ್‌, ಬಂಟಿಂಗ್ಸ್‌ ಹಾಗೂ ಹೋಡಿಂಗ್‌ಗಳಿಲ್ಲದೆ ನಗರ ಸುಂದರವಾಗಿದೆ. ಇದೇ ರೀತಿಯಲ್ಲಿ ಮುಂದು ವರಿಯಲಿ ಜಾಹೀರಾತು ಮಾಫಿಯಾಗೆ ಮಣಿಯುವುದು ಬೇಡ ಎಂದು ಒತ್ತಾಯಿಸಿದ್ದರು. ಇಷ್ಟಾದರೂ ನಗರಾಭಿವೃದ್ಧಿ ಇಲಾಖೆಯ ಕರಡು ಅಧಿಸೂಚನೆಯನ್ನು ತಿರಸ್ಕರಿಸುವ ಬಗ್ಗೆ ಒಮ್ಮತದ ನಿರ್ಣಯ ತೆಗೆದುಕೊಳ್ಳದೆ ಜಾಹೀರಾತು ನಿರ್ಣಯ ಅಂಗೀಕಾರವನ್ನು ಮಂದೂಡಲಾಗಿತ್ತು.

ಸರ್ಕಾರಕ್ಕೆ ನಿಯಮ ರೂಪಿಸುವ ಅಧಿಕಾರವಿದೆ: ಕರ್ನಾಟಕ ಪೌರ ಆಡಳಿತ ಕಾಯ್ದೆ-1976ರ ಕಲಂ 425 ಪ್ರಕಾರ ಬಿಬಿಎಂಪಿ ಬೈಲಾ ರಚಿಸಬಹುದು. ಇದರಲ್ಲಿ ಲೋಪವಾದರೆ ಅಥವಾ ಬೈಲಾ ರೂಪಿಸುವಲ್ಲಿ ವಿಫ‌ಲವಾದರೆ ಸರ್ಕಾರ ಕೆಎಂಸಿ ಕಾಯ್ದೆಯ ಕಲಂ 427ರ ಪ್ರಕಾರ ಮಧ್ಯ ಪ್ರವೇಶಿಸಿ, ಹೊಸ ನೀತಿಯನ್ನು ಜಾರಿ ಮಾಡುವುದಕ್ಕೆ ಅವಕಾಶವಿದೆ.

ಆದರೆ, ಬಿಬಿಎಂಪಿ ರೂಪಿಸಿರುವ “ಹೊರಾಂಗಣ ಸೈನೇಜ್‌ ಮತ್ತು ಸಾರ್ವಜನಿಕ ಸಂದೇಶನೀತಿ ಹಾಗೂ ಹೊರಾಂಗಣ ಜಾಹೀರಾತು ಮತ್ತು ಸಾರ್ವಜನಿಕ ಸಂದೇಶ ಬೈಲಾ-2018′ ಕರಡಿನ ಬಗ್ಗೆ ಸರ್ಕಾರಕ್ಕೆ ಎಲ್ಲ ವರದಿಗಳನ್ನು ಬಿಬಿಎಂಪಿ ನೀಡಿದೆ. ಈಗ ಸರ್ಕಾರ ಬಿಬಿಎಂಪಿಯ ಕರಡಿಗೆ ನಿಯಮ ರೂಪಿಸಲು ಮುಂದಾಗಿರುವುದು ಜಾಹೀರಾತು ವಿಚಾರವಾಗಿ ಪಾಲಿಕೆಯಲ್ಲಿ ಮತ್ತೂಂದು ಸುತ್ತಿನ ವಾಗ್ವಾದ ನಡೆಯುವ ಸಾಧ್ಯತೆ ಇದೆ.

ಸರ್ಕಾರ ಜಾಹೀರಾತಿಗೆ ಸಂಬಂಧಿಸಿ ಯಾವ ನಿಯಮ ರೂಪಿಸುತ್ತಿದೆ ಎನ್ನುವ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ನಗರಕ್ಕೆ ಸಂಬಂಧಿಸಿದಂತೆ ಒಂದು ನಿರ್ದಿಷ್ಟ ಬೈಲಾ ರಚನೆ ಮಾಡುವ ಅವಶ್ಯಕತೆ ಇದೆ. ಆದರೆ, ಹೋರ್ಡಿಂಗ್ಸ್‌ಗೆ ನಮ್ಮ ವಿರೋಧವಿದೆ.
-ಎಂ.ಗೌತಮ್‌ಕುಮಾರ್‌, ಮೇಯರ್‌

ಒಂದೆಡೆ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿನ ಸ್ಕೈವಾಕ್‌, ಶೌಚಾಲಯ, ಬಸ್‌ ನಿಲ್ದಾಣಗಳಲ್ಲಿ ಜಾಹೀರಾತು ಹಾಕಲಾಗಿದೆ. ಬಿಡಿಎ ಸಹ ಅವಕಾಶ ನೀಡುತ್ತಿದೆ. ಮತ್ತೆ ನಗರದಲ್ಲಿ ಜಾಹೀರಾತಿಗೆ ಅವಕಾಶ ಮಾಡಿಕೊಡುವ ಎಲ್ಲ ಪ್ರಯತ್ನಗಳು ನಡೆಯುತ್ತಿವೆ.
-ಅಬ್ದುಲ್‌ ವಾಜಿದ್‌, ಬಿಬಿಎಂಪಿ ವಿರೋಧ ಪಕ್ಷದ ನಾಯಕ

* ಹಿತೇಶ್‌ ವೈ

Advertisement

Udayavani is now on Telegram. Click here to join our channel and stay updated with the latest news.

Next