ಬೆಂಗಳೂರು: ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ತ್ಯಾಗ, ಬಲಿದಾನ ಮಾಡಿರುವ ನಾಡಿನ ಅನಾಮಧೇಯ ಮಹನೀಯರನ್ನು ಪರಿಚಯಿಸುವ ಕೃತಿಗಳನ್ನು ಆಗಸ್ಟ್ 15ಕ್ಕೆ ಪ್ರಕಟಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ.
ಭಾರತದ ಅಮೃತ ಮಹೋತ್ಸವದ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಬೆಂಗಳೂರು ನಗರ ಜಿಲ್ಲಾಡಳಿತ ಶನಿವಾರ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಆಯೋಜಿಸಿದ್ದ “ಅಮೃತ ಭಾರತಿಗೆ ಕನ್ನಡದಾರತಿ’ ಅಭಿಯಾನ ಉದ್ಘಾಟಿಸಿ ಅವರು ಮಾತನಾಡಿದರು.
ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಕನ್ನಡ ನಾಡಿನ ಬಹುದೊಡ್ಡ ಕೊಡುಗೆ ಇದೆ. ಅನೇಕರ ಇತಿಹಾಸವನ್ನು ನಾವು ಓದಿದ್ದೇವೆ. ಆದರೆ ಸ್ವಾತಂತ್ರ್ಯ ಹೋರಾಟಕ್ಕೆ ಕೊಡುಗೆ ನೀಡಿದ ನೂರಾರು ಸಂಖ್ಯೆಯ ಸಾಧಕರು ತೆರೆಮರೆಯಲ್ಲೇ ಉಳಿದಿದ್ದಾರೆ. ಅಂಥವರನ್ನು ಪರಿಚಯಿಸುವ ಪುಸ್ತಕಗಳನ್ನು ಪ್ರಕಟಿಸಲಾಗುವುದು ಎಂದು ಸಿಎಂ ಘೋಷಿಸಿದರು.
ಸ್ವಾತಂತ್ರ್ಯ ಹೋರಾಟದಲ್ಲಿ ಬಹುದೊಡ್ಡ ಕೊಡುಗೆ ನೀಡಿರುವ ಕರ್ನಾಟಕ ಬಳಿಕವೂ ದೇಶದ ಆರ್ಥಿಕ- ಸಾಮಾಜಿಕ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದೆ. ಕರ್ನಾಟಕ ಯಾವತ್ತೂ ಪ್ರಗತಿಪರ ಹಾಗೂ ಮುಂದಾಲೋಚನೆ ಹೊಂದಿರುವ ರಾಜ್ಯ. ನಾಡಿನ ಈ ಪರಂಪರೆಯನ್ನು ಮುಂದುವರಿಸಿಕೊಂಡು ಭಾರತದ ಭವ್ಯ ಪರಂಪರೆಯನ್ನು ಉತ್ತುಂಗ ಕ್ಕೇರಿಸಬೇಕು. ನವ ಕರ್ನಾಟಕದ ಮೂಲಕ ನವ ಭಾರತ ನಿರ್ಮಾಣಕ್ಕಾಗಿ ಕೆಲಸ ಮಾಡಬೇಕು . ಕರ್ನಾಟಕ ಯಶಸ್ಸು ಕಂಡರೆ ದೇಶವೂ ಯಶಸ್ಸು ಕಾಣುತ್ತದೆ ಎಂದರು.
ಟಿಪ್ಪು ಸುಲ್ತಾನ್ ಹೆಸರಿಗೆ ಆಕ್ಷೇಪ ಅಧ್ಯಕ್ಷತೆ ವಹಿಸಿದ್ದ ಶಾಸಕ ದಿನೇಶ್ ಗುಂಡೂರಾವ್ ತಮ್ಮ ಭಾಷಣದಲ್ಲಿ ಟಿಪ್ಪು ಸುಲ್ತಾನ್ ಹೆಸರು ಪ್ರಸ್ತಾವಿಸಿದ್ದಕ್ಕೆ ಸಭಿಕರಲ್ಲಿದ್ದ ಕೆಲವರು ಧಿಕ್ಕಾರ ಕೂಗಿದರು.
ಸಾವರ್ಕರ್
ಹೆಸರಿಗೆ ಜೈಕಾರ
ಸ್ವಾತಂತ್ರ್ಯಕ್ಕಾಗಿ ಮೊದಲು ಕಿಚ್ಚು ಹಚ್ಚಿದವರು ಬಾಲ ಗಂಗಾಧರ ತಿಲಕ್, ತಾತ್ಯಾ ಟೋಪಿ ಮತ್ತು ವೀರ್ ಸಾವರ್ಕರ್ ಎಂದು ಮುಖ್ಯ ಮಂತ್ರಿ ಹೇಳುತ್ತಿದ್ದಂತೆ ಸಭಿಕರು ಸಾವರ್ಕರ್‌ಗೆ ಜೈಕಾರ ಹಾಕಿದರು.