ಹೊಸದಿಲ್ಲಿ: ಬ್ರಿಟನ್ ಪ್ರವಾಸದಲ್ಲಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಇದೇ 6ರಂದು (ಸೋಮವಾರ) ಯುಕೆ ಸಂಸತ್‌ನಲ್ಲಿ ಭಾಷಣ ಮಾಡಲಿದ್ದಾರೆ.
ಕೇಂಬ್ರಿಡ್ಜ್ ವಿವಿಯಲ್ಲಿ ಅವರು ಮಾಡಿದ ಉಪನ್ಯಾಸವು ವಿವಾದಕ್ಕೆ ನಾಂದಿ ಹಾಡಿರುವ ನಡುವೆಯೇ ರಾಹುಲ್ ಯುಕೆಯಲ್ಲಿ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ಮಾ. 6ರ ವರೆಗೆ ಲಂಡನ್‌ನಲ್ಲಿ ಇರಲಿರುವ ರಾಹುಲ್ ಗಾಂಧಿ ಅಲ್ಲಿನ ಭಾರತೀಯ ಸಮುದಾ ಯ ದೊಂದಿಗೆ ಸಂವಾದ ವನ್ನೂ ನಡೆಸಲಿದ್ದಾರೆ.
ಭಾರತೀಯ ಪತ್ರಕರ್ತರ ಸಂಘ ಏರ್ಪಡಿಸಿರುವ ಸುದ್ದಿಗೋಷ್ಠಿಯಲ್ಲೂ ಮಾತನಾಡಲಿದ್ದಾರೆ. ಅಲ್ಲದೇ, ಲಂಡನ್‌ನ ಚಿಂತಕರ ಚಾವಡಿ “ಚಾಥಮ್ ಹೌಸ್’ನಲ್ಲಿ ಕೂಡ ಭಾಷಣ ಮಾಡಲಿದ್ದಾರೆ.
ವಾಗ್ಧಾಳಿ ತೀವ್ರ: ಇನ್ನೊಂದೆಡೆ, ವಿದೇಶಿ ನೆಲದಲ್ಲಿ ನಿಂತು ಭಾರತದ ಪರಿಸ್ಥಿತಿ ಕುರಿತು ಟೀಕೆ ಮಾಡಿದ ರಾಹುಲ್ ವಿರುದ್ಧ ಬಿಜೆಪಿ ವಾಗ್ಧಾಳಿ ಮುಂದು ವರಿಸಿದೆ. ಕೇಂಬ್ರಿಡ್ಜ್ ವಿವಿಯಲ್ಲಿ ಮಾತ ನಾಡಿದ್ದ ರಾಹುಲ್, ಭಾರತದಲ್ಲಿ ಪ್ರಜಾ ಪ್ರಭುತ್ವದ ಮೇಲೆ ದಾಳಿ ನಡೆಯುತ್ತಿದೆ, ರಾಜಕಾರಣಿಗಳ ಮೇಲೆ ನಿಗಾ ಇಡಲಾಗಿದೆ, ಮಾಧ್ಯಮ ಮತ್ತು ನ್ಯಾಯಾಂಗವನ್ನು ನಿಯಂತ್ರಿಸ ಲಾಗುತ್ತಿದೆ ಸೇರಿದಂತೆ ಪುಂಖಾನುಪುಂಖವಾಗಿ ಟೀಕಿಸಿ ದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ ಬಿಜೆಪಿ ವಕ್ತಾರ ಸಂಬಿತ್ ಪಾತ್ರ, “ಭಾರತದ ಬಗ್ಗೆ ಜಗತ್ತು ಒಳ್ಳೆಯ ವಿಷಯಗಳನ್ನು ಹೇಳು ತ್ತಿದ್ದರೆ, ವಿಪಕ್ಷ ನಾಯಕನೊಬ್ಬ ವಿದೇಶಿ ನೆಲದಲ್ಲಿ ನಿಂತು ಈ ರೀತಿ ಆರೋಪಗಳನ್ನು ಮಾಡುತ್ತಿದ್ದಾರೆ. ಪಾಕಿಸ್ಥಾನ ಕೂಡ ವಿದೇಶಿ ನೆಲದಲ್ಲಿ ಭಾರತದ ಬಗ್ಗೆ ಈ ರೀತಿ ಮಾತನಾಡಲು ಧೈರ್ಯ ತೋರುವುದಿಲ್ಲ. ಆದರೆ ದೇಶದ ಮರ್ಯಾದೆ ಹಾಳುಗೆ ಡವಲು ಪಾವತಿ ಮಾಡಿರುವ ಏಜೆಂಟ್‌ನಂತೆ ವಿಪಕ್ಷ ನಾಯಕ ವರ್ತಿಸುತ್ತಿದ್ದಾರೆ’ ಎಂದರು.
“ಅನೇಕ ಹೂಡಿಕೆದಾರರು ಭಾರತದಲ್ಲಿ ಹೂಡಿಕೆಗೆ ಎದುರು ನೋಡುತ್ತಿದ್ದಾರೆ. ವಿಶ್ವವು ಭಾರತವನ್ನು “ತೇಜೋ ಮಯ ಸ್ಥಳ’ದಂತೆ ನೋಡು ತ್ತಿದೆ. ನೀವು ಪ್ರಕಾಶಮಾನವಾಗಿಲ್ಲ ಎಂಬ ಮಾತ್ರಕ್ಕೆ ದೇಶ ಪ್ರಕಾಶಮಾನ ಸ್ಥಳ ಅಲ್ಲ ಎಂದು ಅರ್ಥವಲ್ಲ,’ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರೀನಾಥೆ, “ರಾಹುಲ್ ಬಗ್ಗೆ ಬಿಜೆಪಿ ಮಾಡಿರುವ ವಾಗ್ಧಾಳಿ ಅಜ್ಞಾನದಿಂದ ಕೂಡಿದ್ದು, ಸಂಪೂರ್ಣ ರಾಜಕೀಯ ಪ್ರೇರಿತವಾಗಿದೆ. ಇದಕ್ಕೆ ಪ್ರಜಾಪ್ರಭುತ್ವದಲ್ಲಿ ಯಾವುದೇ ಜಾಗವಿಲ್ಲ. ಪೆಗಾಸಸ್ ಕುರಿತು ನೇಮಿಸಲಾದ ಸಮಿತಿಯು, ತನ್ನೊಂದಿಗೆ ಸರಕಾರ ಸಹಕರಿಸಿಲ್ಲ ಎಂದು ನ್ಯಾಯಾಲಯಕ್ಕೆ ಹೇಳಿತು. ಪುಲ್ವಮಾ ಘಟನೆ ನಡೆದಾಗ ಪ್ರಧಾನಿ ಮೋದಿ “ಮ್ಯಾನ್ ವರ್ಸಸ್ ವೈಲ್ಡ್’ ಶೂಟಿಂಗ್‌ನಲ್ಲಿ ಬ್ಯೂಸಿ ಆಗಿದ್ದರು,’ ಎಂದು ದೂರಿದರು.