ಬೆಂಗಳೂರು: ಲೋಕಸಭಾ ಚುನಾವಣೆ ಫಲಿತಾಂಶ ಪ್ರಕಟವಾಗಿ ತಿಂಗಳು ಕಳೆಯುವ ಮುನ್ನವೇ ಮತ್ತೆ ಬಿಜೆಪಿ ‘ಆಪರೇಷನ್ ಕಮಲ’ ಪ್ರಯತ್ನ ನಡೆಸುತ್ತಿದೆ ಎಂಬ ಚರ್ಚೆ ಮುನ್ನೆಲೆಗೆ ಬಂದಿದೆ.
ಸಂಸತ್ ಮಳೆಗಾಲದ ಅಧಿವೇಶನ ಮುಗಿಯತ್ತಿದ್ದಂತೆ ಅವಕಾಶ ಸಿಕ್ಕರೆ ಸರ್ಕಾರ ರಚನೆಗೆ ಪ್ರಯತ್ನ ನಡೆಸುವಂತೆ ವರಿಷ್ಠರಿಂದ ಸೂಚನೆ ಸಿಕ್ಕಿದೆ ಎನ್ನಲಾಗಿದೆ. ಹಾಗಾಗಿ ಆಡಳಿತ ಪಕ್ಷಗಳ ಅತೃಪ್ತ ಶಾಸಕರಿಗೆ ಗಾಳ ಹಾಕಲಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ತಮ್ಮ ಶಾಸಕರಿಗೆ 10 ಕೋಟಿ ರೂ. ಆಫರ್ ನೀಡುವ ಮೂಲಕ ‘ಆಪರೇಷನ್ ಕಮಲ’ ಮುಂದುವರಿದಿದೆ ಎಂಬುದಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಇತ್ತೀಚೆಗೆ ಹೇಳಿಕೆ ನೀಡಿರುವುದು, ಆಡಳಿತ ಪಕ್ಷಗಳ ನಾಯಕರು, ಮುಖಂಡರು ತಮ್ಮ ಪಕ್ಷದವರ ವಿರುದ್ಧವೇ ಆರೋಪ ಮಾಡುತ್ತಿರುವುದು ‘ಆಪರೇಷನ್ ಕಮಲ’ದ ಪ್ರಯತ್ನಕ್ಕೆ ಇನ್ನಷ್ಟು ಪುಷ್ಠಿ ನೀಡುವಂತಿವೆ.
ಲೋಕಸಭಾ ಚುನಾವಣೆ ಫಲಿತಾಂಶ ಪ್ರಕಟವಾಗಿ ತಿಂಗಳು ಕಳೆಯುವ ಮೊದಲೇ ಸೂಕ್ತ ಅವಕಾಶ ದೊರೆತರೆ ಸರ್ಕಾರ ರಚಿಸುವಂತೆ ಬಿಜೆಪಿ ವರಿಷ್ಠರು ರಾಜ್ಯ ಬಿಜೆಪಿ ನಾಯಕರಿಗೆ ಸೂಚಿಸಿದ್ದಾರೆ ಎಂಬ ಮಾತು ದಟ್ಟವಾಗಿದೆ. ಇದಕ್ಕೆ ಪೂರಕವಾಗಿ ಬಿಜೆಪಿಯ ಕೆಲ ನಾಯಕರು ಅತೃಪ್ತ ಶಾಸಕರ ಸಂಪರ್ಕದಲ್ಲಿರುವ ಮೂಲಕ ಸೆಳೆಯುವ ಪ್ರಯತ್ನ ಮುಂದುವರಿಸಿದ್ದಾರೆ ಎನ್ನಲಾಗಿದೆ.
ಜು. 5ರಂದು ಕೇಂದ್ರ ಬಜೆಟ್ ಮಂಡನೆಯಾಗಲಿದ್ದು, ಸಂಸತ್ ಮಳೆಗಾಲದ ಅಧಿವೇಶನ ಮುಗಿಯುತ್ತಿದ್ದಂತೆ ರಾಜ್ಯ ಬಿಜೆಪಿಯಲ್ಲಿ ಚಟುವಟಿಕೆ ಬಿರುಸುಗೊಳ್ಳಲಿದೆ. ಈ ಚಟುವಟಿಕೆಗಳಲ್ಲಿ ಬಿಜೆಪಿ ವರಿಷ್ಠರು ನೇರವಾಗಿ ಭಾಗಿಯಾಗುವ ಸಾಧ್ಯತೆ ಕಡಿಮೆ. ಆದರೆ ಸರ್ಕಾರ ರಚನೆಗೆ ಪ್ರಯತ್ನ ನಡೆಸಿದರೆ ಯಾವುದೇ ಕಾರಣಕ್ಕೂ ವಿಫಲವಾಗಬಾರದು ಎಂಬ ಖಡಕ್ ಸಂದೇಶ ನೀಡಿದ್ದಾರೆ ಎಂಬ ಮಾತೂ ಇದೆ. ಬಿಜೆಪಿ ರಾಷ್ಟ್ರೀಯ ಕಾರ್ಯಾಧ್ಯಕ್ಷರಾಗಿ ಜೆ.ಪಿ.ನಡ್ಡಾ ನೇಮಕಗೊಂಡ ಬಳಿಕ ಸಂಘಟನೆ ಹಾಗೂ ಪಕ್ಷ ಬಲವರ್ಧನೆಗೆ ಒತ್ತು ನೀಡಲಾರಂಭಿಸಿದ್ದು, ಅದರ ಭಾಗವಾಗಿಯೇ ಮುಂದಿನ ಕೆಲ ಬೆಳವಣಿಗೆಗಳಾಗಲಿವೆ ಎಂದು ಮೂಲಗಳು ಹೇಳಿವೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಕೆಲ ಕಾಂಗ್ರೆಸ್, ಜೆಡಿಎಸ್ ನಾಯಕರು, ಶಾಸಕರು ಬಿಜೆಪಿ ಗೆಲುವಿಗೆ ನೆರವಾಗಿದ್ದು, ಅವರ ಪೈಕಿ ಸಾರ್ವಜನಿಕವಾಗಿ ವರ್ಚಸ್ಸು ಹೊಂದಿರುವವರನ್ನು ಸೆಳೆಯುವ ಪ್ರಯತ್ನ ನಡೆದರೂ ಆಶ್ಚರ್ಯವಿಲ್ಲ. ಸೂಕ್ತ ಸಂದರ್ಭದ ನಿರೀಕ್ಷೆಯಲ್ಲಿ ಬಿಜೆಪಿ ನಾಯಕರು ಲೆಕ್ಕಾಚಾರ ನಡೆಸಿದ್ದಾರೆ ಎಂಬ ಮಾತು ಪಕ್ಷದಲ್ಲಿ ಕೇಳಿಬಂದಿದೆ.