Advertisement

ಮತ್ತೆ ಭೂಮಿ ಅಂತ್ಯದ ಪುಕಾರು !

06:10 AM Oct 29, 2017 | Harsha Rao |

ಲಂಡನ್‌: ಕಳೆದ ಕೆಲವು ತಿಂಗಳಿಂದ ಜಗತ್ತಿನ ಮಾಧ್ಯಮಗಳಲ್ಲಿ ಸದ್ದು ಮಾಡಿ ತಣ್ಣಗಾಗಿದ್ದ “ನಿಬಿರು’ ಗ್ರಹದ ಸುತ್ತ ಲಿನ ಚರ್ಚೆ ಈಗ ಮತ್ತೆ ಜೀವ ಪಡೆದಿದೆ. ನಿಬಿರು ಗ್ರಹ ನವೆಂಬರ್‌ 19ರಂದು ಭೂಮಿಯನ್ನು ನಾಶಗೊಳಿಸಲಿದೆ ಎಂಬ ಸುದ್ದಿ ಈಗ ವೈರಲ್‌ ಆಗಿದ್ದು, ಮುಖ್ಯ ವಾಹಿನಿ ಮಾಧ್ಯಮಗಳೂ “ಪೃಥ್ವಿ ಅಂತ್ಯವಾಗಲಿ ದೆಯೇ?’ ಎಂಬ ಚರ್ಚೆಯಲ್ಲಿ ತೊಡಗಿವೆ.

Advertisement

ಆದಾಗ್ಯೂ ನಿಬಿರು ಗ್ರಹ ಭೂಮಿಗಪ್ಪಳಿಸಲಿದೆ ಎಂದು ಮೊದಲು ಸುದ್ದಿ ಹರಡಿದವರು ಕ್ರಿಶ್ಚಿಯನ್‌ ಸಂಖ್ಯಾಶಾಸ್ತ್ರಜ್ಞ ಡೇವಿಡ್‌ ಮೀಡೇ. ಆದರೆ ಅವರ ಮಾತು ನಿಜವಾಗಿರುತ್ತಿದ್ದರೆ ಇಷ್ಟು ಹೊತ್ತಿಗಾಗಲೇ “ಪ್ಲಾನೆಟ್‌ ಎಕ್ಸ್‌’ ಅಥವಾ 10ನೇ ಗ್ರಹ ಎಂದೂ ಕರೆಸಿಕೊಳ್ಳುವ ಇದು ಭೂಮಿಗೆ ಅಪ್ಪಳಿಸಿರಬೇಕಿತ್ತು. ಈ ವರದಿಯೂ ಪ್ರಕಟ ವಾಗುತ್ತಿರಲಿಲ್ಲ! ಏಕೆಂದರೆ “ಸೆ. 23ರಂದು ನಿಬಿರು ಭೂಮಿಯನ್ನು ಛಿದ್ರಗೊಳಿಸಿ, ಸಕಲ ಜೀವರಾಶಿಯನ್ನೂ ಕ್ಷಣಾರ್ಧದಲ್ಲಿ ಬೂದಿ ಮಾಡಲಿದೆ’ ಎಂದಿದ್ದರು ಡೇವಿಡ್‌. ಆಗ ಈ ಸಂಗತಿ ಯಾವ ಮಟ್ಟದಲ್ಲಿ ಹರಡಿ ಜನರಲ್ಲಿ ಆತಂಕ ಸೃಷ್ಟಿಸಿತೆಂದರೆ ಕೊನೆಗೆ ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ನಾಸಾ) ಮಧ್ಯಪ್ರವೇಶಿಸಿ ಸ್ಪಷ್ಟನೆ ಕೊಡಬೇಕಾಯಿತು. “ನಿಬಿರು ಎನ್ನುವ ಗ್ರಹವೇ ಅಸ್ತಿತ್ವದಲ್ಲಿ ಇಲ್ಲ, ಹೀಗಾಗಿ ಸೆಪ್ಟಂಬರ್‌ 23ಕ್ಕೆ ಏನೂ ಆಗುವುದಿಲ್ಲ. ಹುಸಿ ಸುದ್ದಿಗಳಿಗೆ ಕಿವಿಗೊಡಬೇಡಿ’ ಎಂದು ನಾಸಾ ಹೇಳಿತು.

ಆದರೆ ಕಾನ್‌ಸ್ಪಿರಸಿ ಥಿಯರಿಸ್ಟ್‌ಗಳು ಮಾತ್ರ ನಾಸಾದ ಮಾತನ್ನು ಅಲ್ಲಗಳೆಯುತ್ತಿದ್ದಾರೆ.ಒಂದು ತಿಂಗಳಿನಿಂದ ಜಗತ್ತಿನಾದ್ಯಂತ ಭೂಕಂಪ ಮತ್ತು ಜ್ವಾಲಾಮುಖೀ ಸ್ಫೋಟಗಳು ಹೆಚ್ಚಾಗುತ್ತಿರುವುದಕ್ಕೆ ನಿಬಿರು ಗ್ರಹದ ಗುರುತ್ವಾಕರ್ಷಣೆಯ ಸೆಳೆತವೇ ಕಾರಣ ಎನ್ನುತ್ತಿದ್ದಾರವರು. ಒಂದೋ ನವೆಂಬರ್‌ 19ರಂದು ಈ ಗ್ರಹ ನೇರವಾಗಿ ಭೂಮಿಗೆ ಅಪ್ಪಳಿಸಲಿದೆ ಇಲ್ಲವೇ ಭೂಮಿಯ ವಾತಾವರಣದಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಸಿ, ಭೂಮಿಯ ನಾಶಕ್ಕೆ ಕಾರಣವಾಗಲಿದೆ ಎನ್ನುವುದು ನಿಬಿರು ಗ್ರಹವನ್ನು ನಂಬುವವರ ವಾದ.

ನಾಸಾ ನಿರಾಕರಣೆ: “ಒಂದು ವೇಳೆ ನಿಬಿರು/ ಪ್ಲಾನೆಟ್‌ ಎಕ್ಸ್‌ ಎನ್ನುವ ಗ್ರಹ ಅಸ್ತಿತ್ವದಲ್ಲಿ ಇದ್ದಿದ್ದರೆ ಅದು ಭೂಮಿಯತ್ತ ಬರುತ್ತಿದ್ದರೆ ಕನಿಷ್ಠ ದಶಕದ ಹಿಂದಿನಿಂದಲೇ ಖಗೋಳಶಾಸ್ತ್ರಜ್ಞರು ಅದರ ಚಲನವಲನಗಳ ಮೇಲೆ ನಿಗಾ ಇಟ್ಟಿರುತ್ತಿದ್ದರು. ಇಷ್ಟು ಹೊತ್ತಿಗಾಗಲೇ ಬರಿಗಣ್ಣುಗಳಿಗೆ ಅದು ಕಾಣಿಸುತ್ತಿತ್ತು’ ಎನ್ನುತ್ತದೆ ನಾಸಾ.

ಒಂದು ನಿಬಿರಿನ ಕಥೆ: ಪ್ಲಾನೆಟ್‌ ಎಕ್ಸ್‌ ಎಂದೂ ಕರೆಸಿಕೊಳ್ಳುವ ಈ ಗ್ರಹ ಸೂರ್ಯನನ್ನು 3,600 ವರ್ಷಕ್ಕೆ ಒಮ್ಮೆ ಸುತ್ತುತ್ತದೆ ಎನ್ನುತ್ತದೆ ನಿಬಿರು ಗ್ರಹದ ಮೇಲೆ ನಂಬಿಕೆಯಿರುವ ಒಂದು ವರ್ಗ. ಈ ಗ್ರಹ ಗುರುತ್ವಾಕರ್ಷಣೆಯಿಂದಷ್ಟೇ ಅಲ್ಲದೆ, ತಾನು ಸೌರಮಂಡಲದಾದ್ಯಂತ ಕಳುಹಿಸುತ್ತಿರುವ ಪ್ಲಾಸ್ಮಾಟಿಕ್‌ ಇಂಧನ ಕಣಗಳಿಂದಲೂ ಭೂಮಿಯ ವಾತಾವರಣದಲ್ಲಿ ಅಪಾಯಕಾರಿ ಬದಲಾವಣೆ ತರಬಲ್ಲದು ಎನ್ನುವುದು ಈ ವರ್ಗದ ವಾದ. ಗಮನಿಸಬೇಕಾದ ಸಂಗತಿಯೆಂದರೆ ನಿಬಿರು ಅಸ್ತಿತ್ವವನ್ನು ಒಪ್ಪಿಕೊಳ್ಳುತ್ತಿರುವುದು ಕಾನ್‌ಸ್ಪಿರಸಿ ಸಿದ್ಧಾಂತವಾದಿಗಳೇ 
ಹೊರತು ವಿಜ್ಞಾನಿಗಳಲ್ಲ.

Advertisement
Advertisement

Udayavani is now on Telegram. Click here to join our channel and stay updated with the latest news.

Next