Advertisement

52 ನೇ ಆಯ್ಕೆಯ ಹಿಂದಿನ ಗುಟ್ಟು

12:22 PM Sep 23, 2018 | |

ಆ ಹುಡುಗಿ ಆ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗುವ ಮುನ್ನ 51 ಹುಡುಗಿಯರ ಆಡಿಷನ್‌ ಆಗಿತ್ತು. ಆ ಹುಡುಗಿಗೆ ನಾನೂ ಅವರ ಸಾಲಿಗೆ ಸೇರುತ್ತೇನೇನೋ ಎಂಬ ಸಣ್ಣ ಅನುಮಾನವೂ ಇತ್ತು. ಆದರೆ, ಆ ಚಿತ್ರದ ನಿರ್ದೇಶಕರು ಆ ಹುಡುಗಿಯನ್ನು ನೋಡಿ ಆಯ್ಕೆ ಮಾಡಿಬಿಟ್ಟರು. ಹಾಗೆ ಆ ಚಿತ್ರಕ್ಕೆ 51 ಹುಡುಗಿಯರ ನಂತರ 52 ನೇ ಹುಡುಗಿಯಾಗಿ ಆಯ್ಕೆಯಾದ ಹುಡುಗಿ ಹೆಸರು ಗೌತಮಿ ಜಾದವ್‌.

Advertisement

ಆಕೆ ನಟಿಸಿದ ಚಿತ್ರ “ಕಿನಾರೆ’. ಈ ಚಿತ್ರಕ್ಕೆ ಅಷ್ಟೊಂದು ಹುಡುಗಿಯರು ಯಾಕೆ ಆಯ್ಕೆ ಆಗಲಿಲ್ಲ ಅನ್ನೋದು ಆ ಹುಡುಗಿಗೆ ಗೊತ್ತಿಲ್ಲ. ಆದರೆ, ನಾನೇಕೆ ಆಯ್ಕೆಯಾದೆ ಅನ್ನೋದನ್ನು ಸ್ವತಃ ಗೌತಮಿ ಜಾದವ್‌ ಹೇಳಿದ್ದು ಹೀಗೆ. “ನಿಜ ಹೇಳಬೇಕೆಂದರೆ, “ಕಿನಾರೆ’ ಚಿತ್ರಕ್ಕೆ ನಾನು ನಾಯಕಿಯಾಗುವ ಮುನ್ನ 51 ಹುಡುಗಿಯರ ಆಡಿಷನ್‌ ಆಗಿತ್ತು ಅಂದರೆ ನಂಬಲಾಗಲಿಲ್ಲ. ನಾನು ಲಕ್ಕಿ ಎಂದೇ ಹೇಳಬೇಕು.

ಯಾಕೆ ಲಕ್ಕಿ ಅಂದರೆ, ಅಂಥದ್ದೊಂದು ಪಾತ್ರ ಸಾಮಾನ್ಯವಾಗಿ ನಟಿಯರಿಗೆ ಸಿಗಲ್ಲ. ಸಿಕ್ಕರೂ, ಸಾಕಷ್ಟು ಸಿನಿಮಾ ನಂತರ ಸಿಗುವಂತಹ ಪಾತ್ರವದು. ಅದೊಂದು ಅಬ್‌ನಾರ್ಮಲ್‌ ಹುಡುಗಿಯ ಪಾತ್ರ. ಯಾವುದೇ ನಟಿಗೆ ಇಂಥದ್ದೊಂದು ಪಾತ್ರ ಮಾಡಬೇಕು ಎಂಬ ಆಸೆ ಇದ್ದೇ ಇರುತ್ತೆ. ಅದು ಕನಸು ಕೂಡ. ನನ್ನ ಮೊದಲ ಚಿತ್ರದಲ್ಲೇ ಆ ರೀತಿಯ ಪಾತ್ರ ಸಿಕ್ಕಿದ್ದು ಖುಷಿ ಕೊಟ್ಟಿದೆ.

ಆಡಿಷನ್‌ಗೆ ಹೋದಾಗ, ನಿರ್ದೇಶಕರು ಕಥೆಯ ಒನ್‌ಲೈನ್‌ ಹೇಳಿದರು ಖುಷಿಯಾಯ್ತು. ಆದರೆ, ನನ್ನ ಪಾತ್ರ ಬಗ್ಗೆ ಹೇಳಲೇ ಇಲ್ಲ. ಒಂದು ಪುಟದ ಡೈಲಾಗ್‌ ಶೀಟ್‌ ಕೊಟ್ಟರು. ಈ ಡೈಲಾಗ್‌ ಅನ್ನು ಮಗು ಹೇಳಿದರೆ, ಹೇಗಿರುತ್ತೆ ಎಂಬುದನ್ನು ನಟನೆ ಮಾಡಿ ತೋರಿಸಬೇಕು ಅಂತ ಹೇಳಿದ ನಿರ್ದೇಶಕರಿಗೆ, ಸ್ವಲ್ಪ ಟೈಮ್‌ ತೆಗೆದುಕೊಂಡು. ಡೈಲಾಗ್‌ ಓದಿಕೊಂಡು ಒಂದೇ ಶಾಟ್‌ನಲ್ಲಿ ಮಾಡಿ ತೋರಿಸಿದೆ.

ಆ ಬಳಿಕ ಸ್ಕ್ರೀನ್‌ ಟೆಸ್ಟ್‌ನಲ್ಲಿ ನೋಡಿದಾಗ ನನ್ನನ್ನೇ ನಂಬಲಾಗಲಿಲ್ಲ. ಅಷ್ಟೊಂದು ಚೆನ್ನಾಗಿ ನನ್ನ ನಟನೆ ಮೂಡಿ ಬಂದಿತ್ತು. ಅಲ್ಲಿಂದ ಮನೆಗೆ ಬಂದೆ. ಒಂದು ವಾರದ ಬಳಿಕ “ಕಿನಾರೆ’ ಚಿತ್ರಕ್ಕೆ ನೀನು ನಾಯಕಿಯಾಗಿ ಆಯ್ಕೆಯಾಗಿದ್ದೀಯ ಎಂಬ ಮಾತು ಕೇಳಿಬಂತು. ಅಲ್ಲಿಂದ ಆ ಪಾತ್ರಕ್ಕೆ ನಾನು ಎಂಟು ತಿಂಗಳ ವರ್ಕ್‌ಶಾಪ್‌ ನಡೆಸಿ, ಕ್ಯಾಮೆರಾ ಮುಂದೆ ನಿಂತೆ. ಈಗ ಸಿನಿಮಾ ನೋಡಿದಾಗ ಖುಷಿಯಾಗುತ್ತಿದೆ.

Advertisement

ಇದೆಲ್ಲದ್ದಕ್ಕೂ ನಿರ್ದೇಶಕ ದೇವರಾಜ್‌ ಪೂಜಾರಿ ಅವರು ಕೊಟ್ಟ ಅವಕಾಶದಿಂದ ಸಾಧ್ಯವಾಯ್ತು’ ಎಂದು ಹೇಳುತ್ತಾರೆ ಗೌತಮಿ ಜಾದವ್‌. ಅಂದಹಾಗೆ, ಗೌತಮಿ ನಟನೆ ಕಲಿತಿದ್ದಾರಾ? ಈ ಪ್ರಶ್ನೆಗೆ ಯಾವುದೇ ನಟನೆ ತರಬೇತಿಗೆ ಹೋಗಿಲ್ಲ ಎಂಬ ಉತ್ತರ ಅವರಿಂದ ಬರುತ್ತೆ. ನಾನು ಕಿರುತೆರೆಯಲ್ಲಿ 2012 ರಲ್ಲಿ ಪ್ರಸಾರವಾಗುತ್ತಿದ್ದ “ನಾಗಪಂಚಮಿ’ ಎಂಬ ಧಾರಾವಾಹಿಯಲ್ಲಿ ನಟಿಸುತ್ತಿದ್ದೆ. ಅಲ್ಲೇ ಎಲ್ಲವನ್ನೂ ಕಲಿತೆ.

ಆದರೆ, ಸಿನಿಮಾಗೆ ಬಂದಾಗ, ಬೇರೆ ಅನುಭವವನ್ನೂ ಕಲಿಸಿತು. ಸದ್ಯಕ್ಕೆ “ಕಿನಾರೆ’ ಸೆಪ್ಟೆಂಬರ್‌ 28 ರಂದು ತೆರೆಗೆ ಬರುತ್ತಿದೆ. ನನ್ನ ಅಭಿನಯದ “ಲೂಟಿ’ ಚಿತ್ರ ಕೂಡ ಬಿಡುಗಡೆಯಾಗಬೇಕಿದೆ. ಅತ್ತ ತಮಿಳಿನಲ್ಲಿ “ಸಂತೋಷ ತಿಲಕಲಂ’ ಎಂಬ ಚಿತ್ರದಲ್ಲೂ ನಟಿಸಿದ್ದೇನೆ. ಬೆಂಗಳೂರಲ್ಲೇ ಓದಿ ಬೆಳೆದ ನಾನು, ಬಿಕಾಂ ಮುಗಿಸಿ, ಈಗ ಫ್ಯಾಷನ್‌ ಡಿಸೈನ್‌ ಕೋರ್ಸ್‌ ಮಾಡುತ್ತಿದ್ದೇನೆ.

ಒಂದಷ್ಟು ಅವಕಾಶಗಳು ಬರುತ್ತಿವೆ. ನನಗೆ “ಕಿನಾರೆ’ ಸಿನಿಮಾ ಹೊರರುವವರೆಗೆ ಯಾವ ಚಿತ್ರಕ್ಕೂ ಸಹಿ ಮಾಡಬಾರದು ಅಂದುಕೊಂಡಿದ್ದೇನೆ. ನನಗೆ ಇಂಥದ್ದೇ ಪಾತ್ರ ಬೇಕೆಂದಿಲ್ಲ. ಸಿನಿಮಾ ಅಂತ ಬಂದಾಗ ನನ್ನ ತಲೆಯಲ್ಲಿ ನಟನೆ ಮಾಡೋದಷ್ಟೇ ಇರುತ್ತೆ. ಒಟ್ಟಾರೆ, ತೂಕ ಇರುವಂತಹ ಪಾತ್ರ ಬೇಕು. ಚಾಲೆಂಜ್‌ ಆಗಿರಬೇಕು ಎಂಬುದು ಗೌತಮಿ ಮಾತು.

Advertisement

Udayavani is now on Telegram. Click here to join our channel and stay updated with the latest news.

Next