ಮಂಗಳೂರು: ಕೋವಿಡ್‌ನಿಂದಾಗಿ 2 ವರ್ಷ ಕಣ್ಮರೆಯಾಗಿದ್ದ ಶಾಲಾ ರಂಭದ ಸಡಗರ ಕರಾವಳಿಯಾದ್ಯಂತ ಸೋಮವಾರ ಮತ್ತೆ ನೋಡಲು ಸಿಕ್ಕಿತು.
ತರಗತಿ ಆರಂಭವನ್ನು ಹಬ್ಬದ ಸ್ವರೂಪ ದಲ್ಲಿ ಜಿಲ್ಲೆಯಾದ್ಯಂತ ಆಚರಿಸಲಾಯಿತು. ಶಾಲಾ ಆವರಣ ತಳಿರು ತೋರಣ ಗಳಿಂದ ಅಲಂಕೃತವಾಗಿದ್ದರೆ, ಪುಟಾಣಿ ಗಳನ್ನು ಸಂಭ್ರಮ ಉಲ್ಲಾಸದಿಂದ ಶಾಲೆಗೆ ಬರಮಾಡಿಕೊಳ್ಳಲಾಯಿತು.
ಮಕ್ಕಳಿಗೆ ಉಡುಗೊರೆ-ಸಿಹಿ ತಿನಿಸು ನೀಡಿ ಶಾಲಾ ಶಿಕ್ಷಕರು, ಸಿಬಂದಿ, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಪ್ರತಿನಿಧಿಗಳು, ಸಾರ್ವಜನಿಕರು ಸ್ವಾಗತಿಸಿದರು. ಮೊದಲ ದಿನ ಶೇ. 80ಕ್ಕೂ ಅಧಿಕ ಹಾಜರಾತಿಯಿತ್ತು. ಕೆಲವು ಶಾಲೆಗಳ ಮುಂಭಾಗ ಪುಟಾಣಿಗಳ ಮೆರವಣಿಗೆ ನಡೆಯಿತು.
ಇದನ್ನೂ ಓದಿ:ಕರಾವಳಿಯಾದ್ಯಂತ ಸಿಡಿಲು ಸಹಿತ ಭಾರೀ ಮಳೆ; ಹಲವೆಡೆ ಕೃತಕ ನೆರೆ ಸೃಷ್ಟಿ
ಜಿಲ್ಲೆಯ ವಿವಿಧ ಶಾಸಕರು ತಮ್ಮ ಕ್ಷೇತ್ರ ವ್ಯಾಪ್ತಿಯ ಶಾಲೆಗಳಿಗೆ ಭೇಟಿ ನೀಡಿದರು. ಶಿಕ್ಷಣ ಇಲಾಖೆ ಉಪ ನಿರ್ದೇಶಕ ಸುಧಾಕರ್, ಕ್ಷೇತ್ರ ಶಿಕ್ಷಣಾಧಿಕಾರಿಗಳ ಸಹಿತ ಅಧಿಕಾರಿಗಳು ವಿವಿಧ ಶಾಲೆಗಳಿಗೆ ತೆರಳಿ ಪರಿಶೀಲಿಸಿದರು. ಜಿಲ್ಲೆಯ ವಿವಿಧ ತಾಲೂಕಿನ ಶಾಲೆಗಳಲ್ಲಿ ಅಧಿಕ ಸಂಖ್ಯೆಯಲ್ಲಿ ಇರುವ ವಲಸೆ ಕಾರ್ಮಿಕರ ಮಕ್ಕಳು ಮೊದಲ ದಿನ ಹಾಜರಾಗಿಲ್ಲ.