Advertisement

ಹಿಂದಿನ ಬಜೆಟ್‌ಗಳ ಹಿನ್ನೋಟ: ಅಕ್ಷರದಲ್ಲೇ ಉಳಿದ ಒಂದಷ್ಟು ಘೋಷಣೆಗಳು!

12:44 AM Mar 03, 2022 | Team Udayavani |

ಮಂಗಳೂರು: ರಾಜ್ಯದ 2021-22ನೇ ಸಾಲಿನ ಬಜೆಟ್‌ ಮುಂಡನೆಗೆ ದಿನಗಣನೆ ಆರಂಭಗೊಂಡಿದೆ. ಬಜೆಟ್‌ ಅಂದಾಗ ಜನಸಮೂಹ ಮತ್ತು ಪ್ರಾದೇಶಿಕ ಮಟ್ಟದಲ್ಲಿ ಒಂದಷ್ಟು ನಿರೀಕ್ಷೆಗಳು ಗರಿಗೆದರುತ್ತವೆ. ಪೂರಕವಾಗಿ ಹೊಸ ಯೋಜನೆಗಳು, ಕೊಡುಗೆಗಳು ಘೋಷಣೆಯಾಗುತ್ತವೆ. ಅವುಗಳಲ್ಲಿ ಒಂದಷ್ಟು ಘೋಷಣೆಗಳು ಭರವಸೆ ಗಳಾಗಿಯೇ ಉಳಿಯುತ್ತವೆ. ಬಜೆಟ್‌ ಬಳಿಕದ ವಿಶ್ಲೇಷಣೆಗಳಲ್ಲೂ ಅವು ಶೇಷವಾಗಿ ಬಿಡುತ್ತವೆ ಎಂಬುದು ವಾಸ್ತವ.

Advertisement

2018ರ ವಿಧಾನಸಭೆ ಚುನಾವಣೆ ಬಳಿಕ ಮುಖ್ಯಮಂತ್ರಿಗಳಾಗಿದ್ದ ಎಚ್‌.ಡಿ. ಕುಮಾರಸ್ವಾಮಿ ಎರಡು, ಬಿ.ಎಸ್‌. ಯಡಿಯೂರಪ್ಪ ಎರಡುಬಜೆಟ್‌ಗಳನ್ನು ಮಂಡಿಸಿದ್ದಾರೆ. ಅದಕ್ಕೂ ಪೂರ್ವವಾಗಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಮಂಡಿಸಿದ್ದರು. ಚುನಾವಣೆಯ ಬಳಿಕ ಅಧಿಕಾರಕ್ಕೆ ಬಂದ ಜೆಡಿಎಸ್‌-ಕಾಂಗ್ರೆಸ್‌ ಸಮ್ಮಿಶ್ರ ಸರಕಾರದಲ್ಲಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ 2018ರ ಜು. 5ರಂದು ಇನ್ನೊಂದು ಬಜೆಟ್‌ ಮಂಡಿಸಿದ್ದರಿಂದ ಒಂದೇ ವರ್ಷ ಎರಡು ಬಜೆಟ್‌ ಮಂಡನೆಯಾಗಿತ್ತು.

ಸಿದ್ದರಾಮಯ್ಯ ಬಜೆಟ್‌
ಸಿದ್ದರಾಮಯ್ಯ ಘೋಷಿಸಿದ್ದ ನೇತ್ರಾವತಿ ಮತ್ತು ಗುರುಪುರ ನದಿಗಳಲ್ಲಿ ಆಯ್ದ ಕಡೆ ಬೋಟ್‌ಹೌಸ್‌ಗಳು, ಪ್ರತೀ ತಾಲೂಕಿನ ಸರಕಾರಿ ಆಸ್ಪತ್ರೆಗಳನ್ನು ಸೂಪರ್‌ ಸ್ಪೆಷಾಲಿಟಿ ಆಗಿ ಉನ್ನತೀಕರಿಸುವುದು, ಪ್ರತೀ ಜಿಲ್ಲೆಯಲ್ಲಿ ಐಟಿ ಪಾರ್ಕ್‌, ಕೈಗಾರಿಕೆಗಳ ಸ್ಥಾಪನೆ ಕೇವಲ ಪ್ರಸ್ತಾವನೆಯಾಗಿಯೇ ಉಳಿದಿದೆ. ಬಳಿಕ ಅಧಿಕಾರಕ್ಕೆ ಬಂದ ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ 2018ರ ಜು. 5ರಂದು ಮಂಡಿಸಿದ್ದ ಬಜೆಟ್‌ ಅನ್ನು ಸಿದ್ದರಾಮಯ್ಯ ಅವರ ಬಜೆಟ್‌ನ ಮುಂದುವರಿದ ಭಾಗ ಎಂದು ಘೋಷಿಸಿದ್ದರೂ ಅದರಲ್ಲಿದ್ದ ಬಹಳಷ್ಟು ಅಂಶಗಳು ಅನುಷ್ಠಾನಕ್ಕೆ ಬಂದಿಲ್ಲ.

ಕುಮಾರಸ್ವಾಮಿ ಬಜೆಟ್‌
2019ರ ಫೆ. 8ರಂದು ಕುಮಾರಸ್ವಾಮಿ ಮಂಡಿಸಿದ್ದ ಬಜೆಟ್‌ನಲ್ಲಿ ಬೆಂಗಳೂರು ಮಾದರಿಯಲ್ಲಿ ಮಂಗಳೂರಿನಲ್ಲಿ ಮೆಟ್ರೋ ರೈಲು ಯೋಜನೆ ಬಗ್ಗೆ ಪೂರ್ವ ಕಾರ್ಯಸಾಧ್ಯತೆ ವರದಿ ತಯಾರಿ, ಮಂಗಳೂರು ಸೇರಿದಂತೆ ರಾಜ್ಯದ ಕೆಲವು ಕಡೆ ಡಿಜಿಟಲ್‌ ಮ್ಯಾಮೋಗ್ರಾಮ್‌ ಹಾಗೂ ಪಾಪ್ಸ್‌ಮಿಯರ್‌ ಸ್ಕ್ಯಾನಿಂಗ್‌, ಕೊಣಾಜೆ -ಮಣಿಪಾಲ ನಾಲೆಜ್‌-ಹೆಲ್ತ್‌ ಕಾರಿಡಾರ್‌, ಟೈರ್‌-2 ನಗರಗಳಲ್ಲಿ ಒಂದೇ ಪಾರ್ಕಿಂಗ್‌ ನಿಯಮಗಳ ಜಾರಿ ಮತ್ತು ಅನುಷ್ಠಾನ, ಸುಧಾರಿತ ಸಂಚಾರ ಮಾಹಿತಿ ಮತ್ತು ನಿರ್ವಹಣ ಅಧ್ಯಯನಕ್ಕೆ ಕ್ರಮ, ದ.ಕ.ದಲ್ಲಿ ರಾಜ್ಯ ಸರಕಾರದಿಂದ ಡ್ರೋನ್‌ ಮೂಲಕ ಮರುಸರ್ವೇ ಮುಂತಾದ ಯೋಜನೆಗಳು ಅನುಷ್ಠಾನಕ್ಕೆ ಬಾಕಿ ಇವೆ.

ಬಿಎಸ್‌ವೈ ಬಜೆಟ್‌
2020-21ರಲ್ಲಿ ಯಡಿಯೂರಪ್ಪ ಮಂಡಿಸಿದ್ದ ಬಜೆಟ್‌ನಲ್ಲಿ ಜಿಲ್ಲೆಗೆ ಘೋಷಿಸಿದ್ದ ಕೆಲವು ಯೋಜನೆಗಳು ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ಕಡಲ ತೀರದ ಸಮಗ್ರ ಅಭಿವೃದ್ಧಿಗೆ ಅಧ್ಯಯನ, ಸಕಲೇಶಪುರ-ಸುಬ್ರಹ್ಮಣ್ಯ ರೋಡ್‌ ನಡುವಣ ರೈಲುಮಾರ್ಗ ಅಭಿವೃದ್ಧಿಗೆ ರಾಜ್ಯದಿಂದ ನೆರವು, ಕರಾವಳಿ ಕಾವಲುಪಡೆಗೆ ಆಧುನಿಕ ತಂತ್ರಜ್ಞಾನಗಳ ಅಳವಡಿಕೆ, ಮೂಲ್ಕಿಯಲ್ಲಿ 2 ಕೋ.ರೂ. ವೆಚ್ಚದಲ್ಲಿ ಹಿನ್ನೀರು ಮೀನು ಮರಿ ಉತ್ಪಾದನ ಕೇಂದ್ರ, ಮೀನುಗಾರರಿಗೆ ಆಧುನಿಕ ಮೀನುಗಾರಿಕಾ ಕರ್ನಾಟಕ ಮತ್ಸ್ಯ ವಿಕಾಸ ಯೋಜನೆ, ಮೀನು ಇಳಿಸುವ ತಾಣದಿಂದ ಮಾರುಕಟ್ಟೆಗೆ ತ್ವರಿತವಾಗಿ ಮೀನು ಸಾಗಿಸಲು ಅನುಕೂಲವಾಗುವ ನಿಟ್ಟಿನಲ್ಲಿ 1,000 ಮೀನುಗಾರ ಮಹಿಳೆಯರಿಗೆ ದ್ವಿಚಕ್ರ ವಾಹನ ಮೊದಲಾದ ಯೋಜನೆಗಳು ಇನ್ನೂ ಕಾರ್ಯಗತಗೊಂಡಿಲ್ಲ.

Advertisement

ಕಳೆದ ವರ್ಷ ಮಾ. 8ರಂದು ಮುಖ್ಯಮಂತ್ರಿ ಯಡಿಯೂರಪ್ಪ ಮಂಡಿಸಿದ್ದ 2021-22ನೇ ಸಾಲಿನ ಬಜೆಟ್‌ನಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಮಂಗಳೂರು-ಪಣಜಿ ಜಲಮಾರ್ಗ, ಗುರುಪುರ, ನೇತ್ರಾವತಿ ನದಿಗಳಲ್ಲಿ ಜಲಮಾರ್ಗ ಯೋಜನೆ ಕಾರ್ಯರೂಪಕ್ಕೆ ಬಂದಿಲ್ಲ. ಮಂಗಳೂರು ಪ್ಲಾಸ್ಟಿಕ್‌ ಪಾರ್ಕ್‌ಗೆ ರಾಜ್ಯ ಸರಕಾರದಿಂದ ಘೋಷಿಸಿರುವ 66 ಕೋ.ರೂ. ಬಿಡುಗಡೆಯಾಗಿಲ್ಲ. ಕಾನ, ಬಾಣೆ, ಡೀಮ್ಡ್ ಅರಣ್ಯ ಸಾಗುವಳಿದಾರರ ಹಾಗೂ ಮೂಲಗೇಣಿದಾರರ ಸಮಸ್ಯೆಗಳ ಅಧ್ಯಯನಕ್ಕೆ ಪ್ರತ್ಯೇಕ ಸಮಿತಿಯನ್ನು ಘೋಷಿಸಿದ್ದು ಇದರಲ್ಲಿ ಸಮಿತಿ ಬಿಟ್ಟರೆ ಹೆಚ್ಚಿನ ಪ್ರಗತಿಯಾಗಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next