ರವಿಚಂದ್ರನ್ ಅಭಿಮಾನಿಗಳಿಗೆ ಡಬ್ಬಲ್ ಧಮಾಕ. ಹೌದು, ಕಳೆದ ಶುಕ್ರವಾರವಷ್ಟೇ ರವಿಚಂದ್ರನ್ ಅವರು ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದ “ಪಡ್ಡೆಹುಲಿ’ ಚಿತ್ರ ಬಿಡುಗಡೆಯಾಗಿತ್ತು. ಈಗ ಏಪ್ರಿಲ್ 26 ರಂದು ಅವರು ಪ್ರಮುಖ ಪಾತ್ರದಲ್ಲಿ ನಟಿಸಿರುವ “ದಶರಥ’ ಚಿತ್ರ ಬಿಡುಗಡೆಯಾಗುತ್ತಿದೆ. ಇದು ಅವರ ಅಭಿಮಾನಿಗಳಿಗೆ ಡಬ್ಬಲ್ ಧಮಾಕ ಅಂದರೆ ತಪ್ಪಿಲ್ಲ.
ಹಾಗೆ ನೋಡಿದರೆ, “ದಶರಥ’ ಏಪ್ರಿಲ್ 5 ರಂದೇ ಬಿಡುಗಡೆಯಾಗಬೇಕಿತ್ತು. ಕಾರಣಾಂತರಗಳಿಂದಾಗಿ ಚಿತ್ರದ ಬಿಡುಗಡೆ ಮುಂದಕ್ಕೆ ಹೋಗಿತ್ತು. ಈಗ ಬಿಡುಗಡೆಯ ದಿನ ಪಕ್ಕಾ ಆಗಿದೆ. ಏಪ್ರಿಲ್ 26 ರಂದು “ದಶರಥ’ನ ದರ್ಶನವಾಗುತ್ತಿದೆ. ರವಿಚಂದ್ರನ್ ಅವರಿಗೂ ಇದೊಂಥರಾ ಡಬ್ಬಲ್ ಧಮಾಕ ಇದ್ದಂತೆ.
ಯಾಕೆಂದರೆ, ಏ.26 ರಂದು “ದಶರಥ’ ಬಿಡುಗಡೆಯಾದರೆ, ಮೇ.29 ರಂದು ಅವರ ಪ್ರೀತಿಯ ಪುತ್ರಿಯ ವಿವಾಹ ನೆರವೇರಲಿದೆ. ಹಾಗಾಗಿ ಈ ಎರಡು ಸಂಭ್ರಮದಲ್ಲಿರುವ ರವಿಚಂದ್ರನ್, ಈ ಬಾರಿ ಅಭಿಮಾನಿಗಳ ಮೊಗದಲ್ಲೂ ಮಂದಹಾಸ ಮೂಡಿಸಲು ಸಜ್ಜಾಗಿದ್ದಾರೆ. ರವಿಚಂದ್ರನ್ ಈಗಾಗಲೇ ಸ್ಟಾರ್ ನಟರ ಚಿತ್ರಗಳಲ್ಲಿ ನಾಯಕರಿಗೆ ತಂದೆಯಾಗಿ, ಸಹೋದರನಾಗಿ ನಟಿಸಿದ್ದುಂಟು.
ಅಷ್ಟೇ ಅಲ್ಲ, ಹೊಸಬರ ಚಿತ್ರಗಳಲ್ಲೂ ತಂದೆ ಪಾತ್ರ ಮಾಡಿದ್ದಾರೆ. ಕಳೆದ ವಾರ ತೆರೆಕಂಡ “ಪಡ್ಡೆಹುಲಿ’ ಚಿತ್ರದಲ್ಲಿ ರವಿಚಂದ್ರನ್ ಅವರು ಯುವ ನಟ ಶ್ರೇಯಸ್ ಅವರ ತಂದೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆ ಚಿತ್ರದಲ್ಲಿ ಅವರು ಮಗನನ್ನು ತುಂಬಾ ಪ್ರೀತಿಯಿಂದ ಕಾಣುವ, ಅವನ ಎಲ್ಲಾ ಹೆಜ್ಜೆಯನ್ನೂ ಪ್ರೋತ್ಸಾಹಿಸುವ ಸಜ್ಜನ ತಂದೆಯಾಗಿ ಮತ್ತು ಕನ್ನಡ ಭಾಷೆ, ಸಾಹಿತ್ಯ ಬಗ್ಗೆ ಅಪಾರ ಅಭಿಮಾನ ಹೊಂದಿರುವ ಕನ್ನಡಿಗನ ಪಾತ್ರ ಮಾಡಿದ್ದಾರೆ.
ಆ ಚಿತ್ರದ ಪಾತ್ರವನ್ನು ಎಲ್ಲರೂ ಮೆಚ್ಚಿಕೊಂಡಿದ್ದಾರೆ. ಆ ಸಿನಿಮಾ ನೋಡಿದ ಬೆನ್ನಲ್ಲೇ ಅವರು “ದಶರಥ’ ಮೂಲಕ ಅಭಿಮಾನಿಗಳಿಗೆ ಮತ್ತೂಂದು ಸಂಭ್ರಮಕ್ಕೆ ಸಾಕ್ಷಿಯಾಗಲಿದ್ದಾರೆ. “ದಶರಥ’ ಚಿತ್ರದಲ್ಲಿ ಅವರು ಲಾಯರ್ ಪಾತ್ರ ನಿರ್ವಹಿಸಿದ್ದಾರೆ. ಸುಮಾರು ಒಂದು ದಶಕದ ಬಳಿಕ ಅವರು ಲಾಯರ್ ಪಾತ್ರಕ್ಕೆ ಪುನಃ ಬಣ್ಣ ಹಚ್ಚಿರುವುದು ವಿಶೇಷ.
ಇಲ್ಲಿ “ದಶರಥ’ ಅಂದಾಕ್ಷಣ ರಾಮನ ಆದರ್ಶ ತಂದೆಯ ನೆನಪಾಗುತ್ತದೆ. ಅದೇ ರೀತಿಯ ಒಬ್ಬ ಆದರ್ಶ ತಂದೆ ಈ ಚಿತ್ರದಲ್ಲೂ ಸಿಗಲಿದ್ದಾನಂತೆ. ಈ ಚಿತ್ರದಲ್ಲಿ “ದಶರಥ’ ತನ್ನ ಮಕ್ಕಳ ಕಷ್ಟಕ್ಕೆ ಹೆಗಲಾಗಿ, ಅವರನ್ನು ಪ್ರೋತ್ಸಾಹಿಸುತ್ತಾನೆ. ತನ್ನ ಕುಟುಂಬಕ್ಕೆ ಎದುರಾಗುವ ಒಂದು ಅಪಾಯವನ್ನು ಹೇಗೆ ಎದುರಿಸುತ್ತಾನೆ ಎಂಬುದು ಕಥೆ.
ಚಿತ್ರವನ್ನು ಎಂ.ಎಸ್ ರಮೇಶ್ ನಿರ್ದೇಶಿಸಿದ್ದಾರೆ. ಸೋನಿಯಾ ಅಗರ್‌ವಾಲ್, ಅಭಿರಾಮಿ, ರಂಗಾಯಣ ರಘು, ಅವಿನಾಶ್, ಶೋಭರಾಜ್, ತಬಲ ನಾಣಿ, ಮೇಘಶ್ರೀ ಇತರರು ಇದ್ದಾರೆ. ಗುರುಕಿರಣ್ ಸಂಗೀತವಿದೆ. ಜಿ.ಎಸ್.ವಿ ಸೀತಾರಾಮ್ ಛಾಯಾಗ್ರಹಣವಿದೆ.