Advertisement

ಮುಂದಿನ ನಿಲ್ದಾಣದಲ್ಲಿ ಹೊಸ ನಿರೀಕ್ಷೆ

09:40 AM Nov 09, 2019 | mahesh |

“ರಂಗಿತರಂಗ’ ಚಿತ್ರದಲ್ಲಿ ಪಕ್ಕಾ ಹೋಮ್ಲಿ ಲುಕ್‌ನಲ್ಲಿ ಸಿನಿಪ್ರಿಯರ ಗಮನ ಸೆಳೆದಿದ್ದ ನಟಿ ರಾಧಿಕಾ ಚೇತನ್‌, ನಂತರ ರಾಧಿಕಾ ನಾರಾಯಣ್‌ ಅಂಥ ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದು ಗೊತ್ತೇ ಇದೆ. ಇನ್ನು ಚಿತ್ರದಿಂದ ಚಿತ್ರಕ್ಕೆ ಹೊಸಥರದ ಪಾತ್ರಗಳಿಗೆ ಒಗ್ಗಿಕೊಳ್ಳುತ್ತಿರುವ ರಾಧಿಕಾ ಮೊದಲಿನಂತಿಲ್ಲ, ಸಂಪೂರ್ಣ ಬದಲಾಗಿದ್ದಾರೆ ಅನ್ನೋದು ಅವರ ಅಭಿಮಾನಿಗಳ ಮಾತು. ಸದ್ಯ ರಾಧಿಕಾ ನಾರಾಯಣ್‌ ಅಭಿನಯದ “ಮುಂದಿನ ನಿಲ್ದಾಣ’ ಚಿತ್ರ ರಿಲೀಸ್‌ಗೆ ರೆಡಿಯಾಗಿದೆ. ಇತ್ತೀಚೆಗೆ ಈ ಚಿತ್ರದ ಹಾಡುಗಳು, ಟೀಸರ್‌ ಬಿಡುಗಡೆಯಾಗಿದ್ದು, ಅದರಲ್ಲಿ ರಾಧಿಕಾ ಲುಕ್‌ ನೋಡುಗರ ಗಮನ ಸೆಳೆಯುತ್ತಿದೆ. ಇದೇ ವೇಳೆ ಮಾತಿಗೆ ಸಿಕ್ಕ ರಾಧಿಕಾ ನಾರಾಯಣ್‌ ತಮ್ಮ ಪಾತ್ರಗಳ ಚೇಂಜ್‌ ಓವರ್‌ ಬಗ್ಗೆ ಮಾತನಾಡಿದ್ದಾರೆ.

Advertisement

“ರಂಗಿತರಂಗ’ ಚಿತ್ರದಲ್ಲಿ ರಾಧಿಕಾ ಅವರ ಲುಕ್‌ಗೆ ಬೋಲ್ಡ್‌ ಆಗಿದ್ದವರು, ಅವರ ಈಗಿನ ಬೋಲ್ಡ್‌ ಗೆಟಪ್‌ ಕಂಡು ಇವರೇನಾ ಅವರು ಅಂಥ ಕೇಳುತ್ತಿದ್ದಾರೆ. ಅಭಿಮಾನಿಗಳ ಇಂಥದ್ದೊಂದು ಕುತೂಹಲಕರ ಪ್ರಶ್ನೆಗೆ ಕಾರಣವಾಗಿರುವುದು ರಾಧಿಕಾ ನಾರಾಯಣ್‌ ಅವರ ಹೊಸ ಚಿತ್ರಗಳು ಮತ್ತು ಅದರಲ್ಲಿ ಅವರ ಹೊಸ ಪಾತ್ರಗಳು.

ಹೌದು, ಸ್ವತಃ ರಾಧಿಕಾ ನಾರಾಯಣ್‌ ಹೇಳುವಂತೆ, ಅವರು ತುಂಬಾ ಬದಲಾಗಿದ್ದಾರೆ! ಅವರ ಪ್ರಕಾರ ಆ ಬದಲಾವಣೆಗೆಲ್ಲ ಕಾರಣವಾಗಿರುವುದು ಅವರಿಗೆ ಸಿಗುತ್ತಿರುವ ಪಾತ್ರಗಳು. “ನಾನೊಬ್ಬ ಆರ್ಟಿಸ್ಟ್‌. ಹಾಗಾಗಿ ಯಾವಾಗಲೂ ಹೊಸಥರದ ಕ್ಯಾರೆಕ್ಟರ್‌ ಮಾಡಬೇಕು ಅಂಥ ಬಯಸುತ್ತೇನೆ. ಅಂಥ ಕ್ಯಾರೆಕ್ಟರ್ ನನ್ನನ್ನ ಹುಡುಕಿಕೊಂಡು ಬಂದಾಗ ಖಂಡಿತ, ಒಪ್ಪಿಕೊಂಡು ಅದನ್ನು ಮಾಡುತ್ತೇನೆ. ಪ್ರತಿಯೊಂದೂ ಬದಲಾಗುತ್ತಿರುತ್ತದೆ. ಅದರಂತೆ ಪ್ರೇಕ್ಷಕರು ಬದಲಾಗುತ್ತಿದ್ದಾರೆ. ಅವರ ಅಭಿರುಚಿ ಬದಲಾಗುತ್ತಿದೆ. ಹಾಗೆಯೇ ಕಲಾವಿದರು ಕೂಡ ಬದಲಾಗುತ್ತಿರಬೇಕು. ಹೊಸ ಹೊಸ ಕ್ಯಾರೆಕ್ಟರ್ ಮಾಡುತ್ತಿರಬೇಕು. ಅಪ್ಡೆಟ್‌ ಆಗುತ್ತಿರಬೇಕು’ ಎಂದು ತಮ್ಮ ಹೊಸಥರದ ಪಾತ್ರಗಳ ಬಗ್ಗೆ ಮಾತು ಶುರು ಮಾಡುತ್ತಾರೆ ರಾಧಿಕಾ ನಾರಾಯಣ್‌.

ಅದರಲ್ಲೂ “ರಂಗಿತರಂಗ’ದ ನಂತರ ರಾಧಿಕಾ ಅವರಿಗೆ ಸಿಗುತ್ತಿರುವ ಎಲ್ಲಾ ಪಾತ್ರಗಳೂ ಒಂದಕ್ಕಿಂತ ಒಂದು ವಿಭಿನ್ನವಾಗಿದೆ. ಅವರೇ ಹೇಳುವಂತೆ, “ರಂಗಿತರಂಗ ಎಲ್ಲರಿಗೂ ಗೊತ್ತಿರುವಂತೆ ಹೋಮ್ಲಿ ಲುಕ್‌ ಇದ್ದ ಪಾತ್ರವದು. ಅದಾದ ನಂತರ “ಕಾಫಿತೋಟ’ದಲ್ಲಿ ಬೇರೆಯದ್ದೇ ಲುಕ್‌ ಇತ್ತು. ಆಮೇಲೆ “ಹೊಟ್ಟೆಗಾಗಿ ಗೇಣುಬಟ್ಟೆಗಾಗಿ’ ಮತ್ತೂಂದು ಥರದ ಲುಕ್‌ ಇದ್ದ ಪಾತ್ರ ಸಿಕ್ಕಿತು. ಈಗ “ಮುಂದಿನ ನಿಲ್ದಾಣ’ದಲ್ಲಿ ಇನ್ನೊಂದು ಥರದ ಲುಕ್‌ ಇದೆ. ಒಟ್ಟಿನಲ್ಲಿ ಆರಂಭದಿಂದ ಇಲ್ಲಿಯವರೆಗೆ ನೋಡಿದ್ರೆ, ಪ್ರತಿಯೊಂದು ಸಿನಿಮಾದಲ್ಲೂ ಅದರ ಡೈರೆಕ್ಟರ್ ಒಂದಕ್ಕಿಂತ ಒಂದು ಡಿಫ‌ರೆಂಟ್‌ ಕ್ಯಾರೆಕ್ಟರ್‌ ಕೊಟಿದ್ದಾರೆ’ ಎನ್ನುತ್ತಾರೆ ರಾಧಿಕಾ.

ಇನ್ನು ಇಲ್ಲಿಯವರೆಗೆ ರಾಧಿಕಾ ನಾರಾಯಣ್‌ ಮಾಡಿರುವ ಚಿತ್ರಗಳು ಕಮರ್ಷಿಯಲ್‌ ಆಗಿ ಎಷ್ಟರ ಮಟ್ಟಿಗೆ ಹಿಟ್‌ ಆಗಿದೆ ಅನ್ನೋದರ ಬಗ್ಗೆ ಮಾತನಾಡುವ ರಾಧಿಕಾ, “ಆ ಸಿನಿಮಾಗಳು ಗೆದ್ದಿರಬಹುದು ಅಥವಾ ಸೋತಿರಬಹುದು. ಆದ್ರೆ ಅಂಥ ಕ್ಯಾರೆಕ್ಟರ್ ಮಾಡಿರುವುದಕ್ಕೆ ನನಗಂತೂ ಸಂಪೂರ್ಣ ಖುಷಿ ಇದೆ. ಮೊದಲಿಗೆ ನಾನೊಬ್ಬಳು ಆರ್ಟಿಸ್ಟ್‌ ಅಷ್ಟೇ. ಇಲ್ಲಿ ನನಗೆ ಸಿಕ್ಕ ಅವಕಾಶದಲ್ಲಿ ಎಷ್ಟು ಚೆನ್ನಾಗಿ ಮಾಡಬಹುದೋ, ಅಷ್ಟು ಚೆನ್ನಾಗಿ ಪ್ರಾಮಾಣಿಕ ಪರಿಶ್ರಮ ಹಾಕಿ ಮಾಡುತ್ತೇನೆ. ಬಹುಶಃ ಅದೇ ಕಾರಣದಿಂದ ಇರಬೇಕು, ಇಲ್ಲಿಯವರೆಗೆ ನಾನು ಮಾಡಿದ ಎಲ್ಲಾ ಚಿತ್ರಗಳು ಮತ್ತದರ ಪಾತ್ರಗಳು ನನಗೆ ತುಂಬಾ ಖುಷಿ ಕೊಟ್ಟಿವೆ. ನಾನು ಪ್ರತಿ ಪಾತ್ರದಲ್ಲಿ ವಿಭಿನ್ನತೆ ತರಬೇಕು ಅಂಥ ಬಯಸುತ್ತೇನೆ’ ಎನ್ನುತ್ತಾರೆ ರಾಧಿಕಾ.

Advertisement

ಇತ್ತೀಚೆಗೆ ಬೋಲ್ಡ್‌ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿರುವುದರ ಬಗ್ಗೆ ಮಾತನಾಡುವ ರಾಧಿಕಾ, “ನನಗೆ ಸಿಗುತ್ತಿರುವ ಪಾತ್ರಗಳು ನನ್ನಿಂದ ಏನು ನಿರೀಕ್ಷೆ ಮಾಡುತ್ತವೆಯೋ, ಅದನ್ನು ಕೊಡುವುದು ನನ್ನ ಕೆಲಸ. ಇತ್ತೀಚೆಗೆ ಸಿಗುತ್ತಿರುವ ಪಾತ್ರಗಳೇ ಹಾಗಿರುವುದರಿಂದ ಅದಕ್ಕೆ ತಕ್ಕಂತೆ ಲುಕ್‌, ಕಾಸ್ಟೂಮ್‌ ಎಲ್ಲವೂ ಇರುತ್ತದೆ. “ರಂಗಿತರಂಗ’ದಲ್ಲಿ ಒಂಥರ ಕಾಣಿಸಿಕೊಂಡರೆ, “ಮುಂದಿನ ನಿಲ್ದಾಣ’ ಚಿತ್ರಕ್ಕೆ ಅದು ಡಿಮ್ಯಾಂಡ್‌ ಮಾಡಿದಂತೆ ಕಾಣಿಸಿಕೊಳ್ಳಬೇಕಾಗುತ್ತದೆ. ಒಬ್ಬ ಆರ್ಟಿಸ್ಟ್‌ ಆಗಿ ಈ ಥರದ ಚೇಂಜ್‌ ಓವರ್‌ಗಳಿಗೆ ತೆರೆದುಕೊಂಡರೇನೆ, ಹೊಸದೇನಾದ್ರೂ ಮಾಡೋದಕ್ಕೆ ಸಾಧ್ಯ’ ಎನ್ನುತ್ತಾರೆ.

ರಾಧಿಕಾ ನಾರಾಯಣ್‌ ಅಭಿನಯದ “ಮುಂದಿನ ನಿಲ್ದಾಣ’ ಇದೇ ನ.29ಕ್ಕೆ ತೆರೆಗೆ ಬರುತ್ತಿದೆ. ಸದ್ಯ ಈ ಚಿತ್ರದ ಪ್ರಮೋಶನ್‌ ಕೆಲಸಗಳು ಭರದಿಂದ ನಡೆಯುತ್ತಿದ್ದು, ಚಿತ್ರದ ಪೋಸ್ಟರ್‌, ಟೀಸರ್‌, ಹಾಡುಗಳಿಗೆ ಭಾರೀ ರೆಸ್ಪಾನ್ಸ್‌ ಸಿಗುತ್ತಿದೆ. ವಿನಯ್‌ ಭಾರದ್ವಾಜ್‌ ನಿರ್ದೇಶನದ ಈ ಚಿತ್ರದಲ್ಲಿ ರಾಧಿಕಾ, ಮೀರಾ ಶರ್ಮಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದ ಮತ್ತು ಪಾತ್ರದ ಬಗ್ಗೆ ಮಾತನಾಡುವ ರಾಧಿಕಾ, “”ಮುಂದಿನ ನಿಲ್ದಾಣ’ ಯಂಗ್‌ ಆ್ಯಂಡ್‌ ಎನರ್ಜಿಟಿಕ್‌ ಟೀಮ್‌ ಸೇರಿಕೊಂಡು ಮಾಡಿದ ಸಿನಿಮಾ. ಹೆಸರೇ ಹೇಳುವಂತೆ ಮೂರು ವಿಭಿನ್ನ ವ್ಯಕ್ತಿತ್ವಗಳ ಜೀವನ ಪ್ರಯಾಣ ಹೇಗಿರುತ್ತದೆ. ಯಾರು ಯಾವ ನಿಲ್ದಾಣ ಸೇರಿಕೊಳ್ಳುತ್ತಾರೆ ಅನ್ನೋದು ಚಿತ್ರದ ಕಥೆಯ ಒಂದು ಎಳೆ. ಇನ್ನು ಈ ಚಿತ್ರದಲ್ಲಿ ನನ್ನದು ಮೀರಾ ಶರ್ಮಾ ಎನ್ನುವ ಸ್ವತಂತ್ರವಾಗಿ ಬದುಕುತ್ತಿರುವ ಹೆಣ್ಣಿನ ಪಾತ್ರ. ನನ್ನ ಪಾತ್ರ ಕೂಡ ಕ್ಲಾಸಿ ಆಗಿರುವುದರಿಂದ, ಚಿತ್ರದಲ್ಲೂ ಅದಕ್ಕೆ ತಕ್ಕಂತೆ ಕಾಸ್ಟೂéಮ್ಸ್‌, ಹೇರ್‌ ಸ್ಟೈಲ್‌ ಎಲ್ಲ ಇದೆ. ಚಿತ್ರದಲ್ಲಿ ಪ್ರತಿಯೊಂದು ಕೂಡ ಡಿಫ‌ರೆಂಟ್‌ ಆಗಿದೆ. ನನ್ನ ಪ್ರಕಾರ ಇದು ಲೈಟ್‌ ಹಾರ್ಟೆಡ್‌ ಮೂವೀ. ಈಗಿನ ಯೂಥ್ಸ್ಗೆ ಬೇಗ ಕನೆಕ್ಟ್ ಆಗುತ್ತದೆ. ಸೆಟ್‌ಗೂ ಹೋಗುವ ಮುಂಚೆ ವರ್ಕೌಟ್ ಮಾಡಬೇಕಾಯಿತು. ಕಾಸ್ಟೂಮ್ಸ್‌ ಜೊತೆಗೆ ಲುಕ್‌ ಟೆಸ್ಟ್‌ ಮಾಡಿದ್ದೇವು. ಇನ್ನು ಈ ಚಿತ್ರದಲ್ಲಿ ನನಗೆ ಬೇರೆ ಬೇರೆ ಶೇಡ್‌ಗಳಿರುವುದರಿಂದ ಕ್ಯಾರೆಕ್ಟರ್‌ಗಾಗಿ, ದೇಹದ ತೂಕವನ್ನು ಕನಿಷ್ಟ 6-7 ಕೆ.ಜಿ ಹೆಚ್ಚು-ಕಡಿಮೆ ಮಾಡಿಕೊಳ್ಳಬೇಕಾಯಿತು’ ಎನ್ನುತ್ತಾರೆ.

“ಮುಂದಿನ ನಿಲ್ದಾಣ’ ಚಿತ್ರದ ನಂತರ ರಾಧಿಕಾ ನಾರಾಯಣ್‌ ಅಭಿನಯದ “ಚೇಸ್‌’ ಮತ್ತು “ಶಿವಾಜಿ ಸುರತ್ಕಲ್‌’ ಚಿತ್ರಗಳೂ ಪೋಸ್ಟ್‌ ಪ್ರೊಡಕ್ಷನ್‌ ಹಂತದಲ್ಲಿದ್ದು, ಒಂದರ ಹಿಂದೊಂದು ತೆರೆಗೆ ಬರುವ ಸಾಧ್ಯತೆ ಇದೆ. ಒಟ್ಟಾರೆ ಚಿತ್ರದಿಂದ ಚಿತ್ರಕ್ಕೆ ಹೊಸ ಗೆಪಟ್‌ನಲ್ಲಿ ಪ್ರೇಕ್ಷಕರ ಮುಂದೆ ಬರುತ್ತಿರುವ ರಾಧಿಕಾ ನಾರಾಯಣ್‌ ಯಾವ ಪಾತ್ರಗಳಲ್ಲಿ ಎಷ್ಟರ ಮಟ್ಟಿಗೆ ಸಿನಿಪ್ರಿಯರಿಗೆ ಇಷ್ಟವಾಗುತ್ತಾರೆ ಅನ್ನೋದು ಚಿತ್ರಗಳು ತೆರೆಗೆ ಬಂದ ಮೇಲಷ್ಟೇ ಗೊತ್ತಾಗಲಿದೆ.

ಜಿ.ಎಸ್‌.ಕಾರ್ತಿಕ ಸುಧನ್‌

Advertisement

Udayavani is now on Telegram. Click here to join our channel and stay updated with the latest news.

Next