Advertisement

ಕನ್ನಡ ಚಿತ್ರರಂಗದಿಂದ ಬ್ಯಾಕ್‌ ಟು ಬ್ಯಾಕ್‌ ‘ಪ್ಯಾನ್ ಇಂಡಿಯಾ’ ಸಿನಿಮಾ

10:22 AM Apr 19, 2022 | Team Udayavani |

ದೇಶದಾದ್ಯಂತ “ಕೆಜಿಎಫ್-2′ ಓಟ ಜೋರಾಗಿಯೇ ಸಾಗುತ್ತಿದೆ. ಈ ಮೂಲಕ ಸ್ಯಾಂಡಲ್‌ವುಡ್‌ನಿಂದ ತಯಾರಾದ ಸಿನಿಮಾವೊಂದು ವಿಶ್ವಮಟ್ಟದಲ್ಲಿ ಗುರುತಿಸಿಕೊಂಡು ಸಿನಿಪ್ರೇಕ್ಷಕರನ್ನು ತನ್ನತ್ತ ಸೆಳೆಯುತ್ತಿದೆ. “ಕೆಜಿಎಫ್-2′ ಸಿನಿಮಾದ ಗೆಲುವು ಇನ್ನಷ್ಟು ಸಿನಿಮಾಗಳಿಗೆ ಸ್ಫೂರ್ತಿಯಾಗುತ್ತಿರೋದು ಸುಳ್ಳಲ್ಲ. ಇದು “ಕೆಜಿಎಫ್-2′ ಕಥೆಯಾದರೆ, ಸ್ಯಾಂಡಲ್‌ವುಡ್‌ನಿಂದ ಮತ್ತೆ ಮೂರು ಸ್ಟಾರ್‌ ಸಿನಿಮಾಗಳು ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಬಿಡುಗಡೆಗೆ ಅಣಿಯಾಗಿವೆ. ಈಗಾಗಲೇ ಅಧಿಕೃತವಾಗಿ ಈ ಚಿತ್ರಗಳು ಡೇಟ್‌ ಕೂಡಾ ಅನೌನ್ಸ್‌ ಮಾಡುವ ಮೂಲಕ ಪ್ರೇಕ್ಷಕರ ಕುತೂಹಲ ಹೆಚ್ಚಿಸಿವೆ.

Advertisement

ಸುದೀಪ್‌ ನಟನೆಯ “ವಿಕ್ರಾಂತ್‌ ರೋಣ’, ರಕ್ಷಿತ್‌ ಶೆಟ್ಟಿ ಅವರ “777 ಚಾರ್ಲಿ’ ಹಾಗೂ ಧ್ರುವ ಸರ್ಜಾ ಅವರ “ಮಾರ್ಟಿನ್‌’… ಸದ್ಯ ಈ ಮೂರು ಚಿತ್ರಗಳು ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗುತ್ತಿವೆ. ಈ ಮೂರು ಸಿನಿಮಾಗಳ ಮೇಲೆ ನಿರೀಕ್ಷೆ ಹೆಚ್ಚಿದೆ. ಇದಲ್ಲದೇ ಜಗ್ಗೇಶ್‌ ನಟನೆಯ “ತೋತಾಪುರಿ’ ಕೂಡಾ ಬಿಡುಗಡೆಯಾಗುತ್ತಿದ್ದು, ಈ ಚಿತ್ರವನ್ನು ಕೂಡಾ ಹಲವು ಭಾಷೆಗಳಲ್ಲಿ ಬಿಡುಗಡೆ ಮಾಡುವ ಯೋಚನೆ ನಿರ್ಮಾಪಕರಿಗಿದೆ. ಈ ಮೂಲಕ ಸ್ಯಾಂಡಲ್‌ವುಡ್‌ನಿಂದ ಬ್ಯಾಕ್‌ ಟು ಬ್ಯಾಕ್‌ ಪ್ಯಾನ್‌ ಇಂಡಿಯಾ ಸಿನಿಮಾಗಳು ಬಿಡುಗಡೆಯಾಗಲಿವೆ.

ಜುಲೈ 28 ವಿಕ್ರಾಂತ್‌ ರೋಣ: ಸುದೀಪ್‌ ನಟನೆಯ “ವಿಕ್ರಾಂತ್‌ ರೋಣ’ ಈಗಾಗಲೇ ಟೀಸರ್‌ ಮೂಲಕ ನಿರೀಕ್ಷೆ ಹೆಚ್ಚಿಸಿದ್ದು, ಚಿತ್ರ ಜುಲೈ 28ರಂದು ತೆರೆಗೆ ಬರಲಿದೆ. ಕನ್ನಡ, ಹಿಂದಿ, ತೆಲುಗು, ತಮಿಳು ಸೇರಿದಂತೆ ಒಟ್ಟೂ 10ಕ್ಕೂ ಹೆಚ್ಚು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಪ್ಯಾನ್‌ ಇಂಡಿಯಾ ಚಿತ್ರವಾಗಿ ಹೊರಹೊಮ್ಮಿರುವ ಈ ಚಿತ್ರ 3ಡಿ ಮೂಲಕವೂ ತೆರೆಗೆ ಬರಲಿದೆ.

ನಿರ್ದೇಶಕ ಅನೂಪ್‌ ಭಂಡಾರಿ ಪ್ರಕಾರ, “ವಿಕ್ರಾಂತ್‌ ರೋಣ’ದಲ್ಲಿ ನಟ ಸುದೀಪ್‌ ಅವರ ಸ್ಟಾರ್‌ಡಮ್‌ ಮತ್ತು ಅವರ ಪರ್ಫಾರ್ಮೆನ್ಸ್‌ ಎರಡರ ಸಮಾಗಮ ವಾಗಿದೆಯಂತೆ. “ಸುದೀಪ್‌ ಅವರಿಗೆ ದೇಶದಾದ್ಯಂತ ಅವರದ್ದೇ ಆದ ಫ್ಯಾನ್ಸ್‌ ಬಳಗವಿದೆ. ಇಲ್ಲಿಯವರೆಗೆ ಅವರು ಮಾಡಿರುವ ಸಿನಿಮಾಗಳಲ್ಲಿ ತಮ್ಮ ಪರ್ಫಾರ್ಮೆನ್ಸ್‌ ಏನು ಅನ್ನೋದನ್ನ ತೋರಿಸಿದ್ದಾರೆ. ಅವರಿಗೆ ಅವರದ್ದೇ ಆದ ಸ್ಟಾರ್‌ಡಮ್‌ ಇದೆ. ಇದೆಲ್ಲವನ್ನೂ ಗಮನದಲ್ಲಿಟ್ಟುಕೊಂಡು “ವಿಕ್ರಾಂತ್‌ ರೋಣ’ ಸಿನಿಮಾ ಮಾಡಿದ್ದೇವೆ ಎನ್ನುತ್ತಾರೆ ಅನೂಪ್‌. ಕನ್ನಡ ಚಿತ್ರರಂಗದಿಂದ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ತೆರೆಕಾಣುತ್ತಿರುವ ಮತ್ತೂಂದು ಬಿಗ್‌ ಬಜೆಟ್‌ ಸಿನಿಮಾವಾಗಿ “ವಿಕ್ರಾಂತ್‌ ರೋಣ’ ಗಮನ ಸೆಳೆಯಲಿದೆ.

ಜೂನ್‌ 10ಕ್ಕೆ 777 ಚಾರ್ಲಿ:  ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ರಕ್ಷಿತ್‌ ಶೆಟ್ಟಿ ನಟನೆಯ “777 ಚಾರ್ಲಿ’ ಚಿತ್ರ ಬಿಡುಗಡೆಯಾಗಿ ನಾಲ್ಕು ತಿಂಗಳು ಕಳೆಯುತ್ತಿತ್ತು. ಆದರೆ, ಕಾರಣಾಂತರಗಳಿಂದ ಚಿತ್ರದ ಬಿಡುಗಡೆಯನ್ನು ಚಿತ್ರತಂಡ ಮುಂದಕ್ಕೆ ಹಾಕಿತ್ತು. ಈಗ ಈ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದೆ. ಜೂನ್‌ 10ರಂದು ಚಿತ್ರ ಬಿಡುಗಡೆಯಾಗಲಿದೆ. ಈಗಾಗಲೇ ಚಿತ್ರತಂಡ ಅಧಿಕೃತವಾಗಿ ಬಿಡುಗಡೆಯ ದಿನಾಂಕ ಘೋಷಿಸಿದೆ.

Advertisement

ಇದನ್ನೂ ಓದಿ:ನವಜಾತ ಮಗನನ್ನು ಕಳೆದುಕೊಂಡ ಕ್ರಿಸ್ಟಿಯಾನೋ ರೊನಾಲ್ಡೊ; ಪುತ್ರ ಶೋಕದಲ್ಲಿ ಫುಟ್ ಬಾಲ್ ತಾರೆ

ಅಂದಹಾಗೆ, ಇದು ರಕ್ಷಿತ್‌ ಶೆಟ್ಟಿ ಅವರ ಡ್ರೀಮ್‌ ಪ್ರಾಜೆಕ್ಟ್. ಈ ಚಿತ್ರವನ್ನು ಕಿರಣ್‌ ರಾಜ್‌ ನಿರ್ದೇಶಿಸಿದ್ದಾರೆ. ಇದು ಕೂಡಾ ಪ್ಯಾನ್‌ ಇಂಡಿಯಾ ಸಿನಿಮಾ. ಈ ಹಿಂದೆ “ಅವನೇ ಶ್ರೀಮನ್ನಾರಾಯಣ’ ಚಿತ್ರವನ್ನು ಕೂಡಾ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಮಾಡಲಾಗಿತ್ತು. ಆದರೆ, ದೊಡ್ಡ ಮಟ್ಟದ ಸಕ್ಸಸ್‌ ಸಿಗದ ಕಾರಣ ಚಿತ್ರತಂಡ ಈಗ ಮತ್ತೂಮ್ಮೆ ಪ್ಯಾನ್‌ ಇಂಡಿಯಾ ಮೂಲಕ ಗೆಲ್ಲಲು ಪ್ರಯತ್ನಿಸುತ್ತಿದೆ. ಈಗಾಗಲೇ ಮುಂಬೈ, ತಮಿಳು, ಹಿಂದಿ ಹಾಗೂ ಮಲಯಾಳಂನ ಪ್ರತಿಷ್ಠಿತ ಸಿನಿಮಾ ಸಂಸ್ಥೆಗಳು “777 ಚಾರ್ಲಿ’ ಚಿತ್ರದ ಬಿಡುಗಡೆಗೆ ಮುಂದಾಗಿವೆ. ಇನ್ನು, ಕೆಲವು ತಿಂಗಳ ಹಿಂದಷ್ಟೇ, “777 ಚಾರ್ಲಿ’ ಚಿತ್ರತಂಡ ಚಿತ್ರದ ಮೊದಲ ಟೀಸರ್‌ನ ಬಿಡುಗಡೆ ಮಾಡಿತ್ತು. ಈ ಟೀಸರ್‌ಗೆ ಸೋಶಿಯಲ್‌ ಮೀಡಿಯಾ ಮತ್ತು ಅಭಿಮಾನಿಗಳಿಂದ ಭರ್ಜರಿ ರೆಸ್ಪಾನ್ಸ್‌ ವ್ಯಕ್ತವಾಗಿದ್ದು, ಇದು ಚಿತ್ರತಂಡದ ಭರವಸೆಯನ್ನು ದುಪ್ಟಟ್ಟು ಮಾಡಿದೆ.

ಸೆ. 30ಕ್ಕೆ ಮಾರ್ಟಿನ್‌:  “ಪೊಗರು’ ಚಿತ್ರದ ಬಳಿಕ ನಟ ಧ್ರುವ ಸರ್ಜಾ “ಮಾರ್ಟಿನ್‌’ ಸಿನಿಮಾದಲ್ಲಿ ಅಭಿನಯಿಸುತ್ತಿರುವುದು ನಿಮಗೆ ಗೊತ್ತಿರಬಹುದು. ಎ.ಪಿ ಅರ್ಜುನ್‌ ನಿರ್ದೇಶನದಲ್ಲಿ ಮೂಡಿಬರುತ್ತಿರುವ “ಮಾರ್ಟಿನ್‌’ ಸಿನಿಮಾದ ಚಿತ್ರೀಕರಣ ಸದ್ಯ ಭರದಿಂದ ನಡೆಯುತ್ತಿದ್ದು, ಇದೇ ವೇಳೆ ಚಿತ್ರತಂಡ “ಮಾರ್ಟಿನ್‌’ ಸಿನಿಮಾದ ಬಿಡುಗಡೆಯ ದಿನಾಂಕವನ್ನು ಅಧಿಕೃತವಾಗಿ ಘೋಷಿಸಿದೆ. ಸೆಪ್ಟೆಂಬರ್‌ 30ಕ್ಕೆ “ಮಾರ್ಟಿನ್‌’ ಅದ್ದೂರಿಯಾಗಿ ತೆರೆಗೆ ಬರಲಿದೆ. ಅಂದಹಾಗೆ, “ಮಾರ್ಟಿನ್‌’ ಕೂಡಾ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ರಿಲೀಸ್‌ ಆಗುತ್ತಿದ್ದು, ಕನ್ನಡದ ಜೊತೆಗೆ ತೆಲುಗು, ತಮಿಳು, ಹಿಂದಿ ಮತ್ತು ಮಲೆಯಾಳಂನಲ್ಲೂ “ಮಾರ್ಟಿನ್‌’ ಸದ್ದು ಮಾಡಲಿದೆ.

ಬಿಗ್‌ ಬಜೆಟ್‌ನಲ್ಲಿ ಸಿದ್ಧವಾಗುತ್ತಿದೆ ಕಬ್ಜ: ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಮತ್ತೂಂದು ಸಿನಿಮಾವೆಂದರೆ ಅದು “ಕಬ್ಜ’. ಆರ್‌.ಚಂದ್ರು ನಿರ್ಮಾಣ, ನಿರ್ದೇಶನದಲ್ಲಿ ಸಿದ್ಧವಾಗುತ್ತಿರುವ ಈ ಚಿತ್ರದಲ್ಲಿ ಉಪೇಂದ್ರ ನಾಯಕರಾಗಿ ನಟಿಸುತ್ತಿದ್ದಾರೆ. ಜೊತೆಗೆ ಚಿತ್ರದಲ್ಲಿ ಕಿಚ್ಚ ಸುದೀಪ್‌ ಕೂಡಾ ಪ್ರಮುಖ ಪಾತ್ರ ಮಾಡುತ್ತಿದ್ದು, ಅದ್ಧೂರಿ ವೆಚ್ಚದಲ್ಲಿ ಚಿತ್ರ ನಿರ್ಮಾಣವಾಗುತ್ತಿದೆ. ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಮಾಡಲು ಏನೇನೂ ಅಂಶಗಳು ಬೇಕೋ ಅವೆಲ್ಲವನ್ನು ಸೇರಿಸಿಕೊಂಡೇ ಚಂದ್ರು ಈ ಚಿತ್ರ ಮಾಡುತ್ತಿದ್ದಾರೆ. ಕನ್ನಡದ ಜೊತೆಗೆ ಪರಭಾಷಾ ಕಲಾವಿದರ ದಂಡೇ ಈ ಚಿತ್ರದಲ್ಲಿದೆ. ಬಹುತೇಕ ಸಿನಿಮಾ ಸೆಟ್‌ನಲ್ಲೇ ಚಿತ್ರೀಕರಣವಾಗುತ್ತಿದೆ. ಈ ಚಿತ್ರದ ಬಿಡುಗಡೆಯ ದಿನಾಂಕ ಇನ್ನಷ್ಟೇ ಅನೌನ್ಸ್‌ ಆಗಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next