ನವದೆಹಲಿ: ಮಲಯಾಳಂ ಸುದ್ದಿ ವಾಹಿನಿ ಮೀಡಿಯಾ ಒನ್ ಪ್ರಸಾರಕ್ಕೆ ನಿರ್ಬಂಧ ಕೇಂದ್ರ ಸರ್ಕಾರ ಹೊರಡಿಸಿದ್ದ ಆದೇಶವನ್ನು ಸುಪ್ರೀಂ ಕೋರ್ಟ್ ಬುಧವಾರ ವಜಾಗೊಳಿಸಿದೆ.
ಯಾವುದೇ ಸಮರ್ಪಕ ಕಾರಣಗಳಿಲ್ಲದೇ ರಾಷ್ಟ್ರೀಯ ಭದ್ರತೆಯ ನೆಪ ಹೇಳಿದ್ದ ಕೇಂದ್ರ ಗೃಹ ಸಚಿವಾಲಯವನ್ನೂ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ನ್ಯಾಯಪೀಠ ತರಾಟೆಗೆ ತೆಗೆದುಕೊಂಡಿದೆ.
ಮಾಧ್ಯಮದ ಮೇಲೆ ಸರ್ಕಾರವು ವಿನಾಕಾರಣ ನಿರ್ಬಂಧ ಹೇರುವಂತಿಲ್ಲ. ಅದು ಮಾಧ್ಯಮ ಸ್ವಾತಂತ್ರ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ.
ಪ್ರಜಾಪ್ರಭುತ್ವವು ಸದೃಢವಾಗಿರಬೇಕೆಂದರೆ ಮಾಧ್ಯಮಗಳು ಸ್ವತಂತ್ರವಾಗಿರಬೇಕು. ಸರ್ಕಾರದ ನೀತಿಗಳ ವಿರುದ್ಧ ಟೀಕೆ ಮಾಡಿದೊಡನೆ, ಆ ಮಾಧ್ಯಮ ಸಂಸ್ಥೆಯನ್ನು “ಪ್ರಭುತ್ವದ ವಿರೋಧಿ’ ಎಂದು ಬ್ರ್ಯಾಂಡ್ ಮಾಡಬಾರದು.
ಮಾಧ್ಯಮಗಳಿರುವುದೇ ಸತ್ಯವನ್ನು ಜನರ ಮುಂದಿಡಲು ಎಂದು ಹೇಳಿದ ನ್ಯಾಯಪೀಠ, ಮೀಡಿಯಾ ಒನ್‌ಗೆ ನಿರ್ಬಂಧ ಹೇರಿದ್ದ ಕೇಂದ್ರ ಸರ್ಕಾರದ ನಡೆಯನ್ನು ಎತ್ತಿಹಿಡಿದು ಕೇರಳ ಹೈಕೋರ್ಟ್ ಕೊಟ್ಟಿದ್ದ ಆದೇಶವನ್ನು ವಜಾಗೊಳಿಸಿದೆ.