ಪುಂಜಾಲಕಟ್ಟೆ: ಬಂಟ್ವಾಳ ತಾಲೂಕಿನ ಬಹುತೇಕ ಗ್ರಾ.ಪಂ.ಗಳು ಅಭಿವೃದ್ಧಿಯಲ್ಲಿ ಹಿಂದೆ ಉಳಿದಿವೆ ಎಂದು ದ.ಕ. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ
ಡಾ| ಸೆಲ್ವಮಣಿ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬಂಟ್ವಾಳ ತಾ.ಪಂ.ನ ಎಸ್.ಜಿ.ಎಸ್.ವೈ. ಸಭಾಂಗಣದಲ್ಲಿ ಬುಧವಾರ ನಡೆದ ಬಂಟ್ವಾಳ ತಾಲೂಕಿನ ಪಿಡಿಒಗಳ ಮತ್ತು ತಾಲೂಕಿನ ವಿವಿಧ ಇಲಾಖಾಧಿಕಾರಿಗಳ ಅಭಿವೃದ್ಧಿ ಪ್ರಗತಿ ಪರಿಶೀಲನೆ ಸಭೆಯಲ್ಲಿ ಡಾ| ಸೆಲ್ವಮಣಿ ಅವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ತಾಲೂಕಿನ ಗ್ರಾ.ಪಂ.ಗಳಿಗೆ ನೀಡಿದ ವಾರ್ಷಿಕ ಶೇಕಡಾವಾರು ಗುರಿಯನ್ನು ತಲುಪದೆ ಇರುವ ಬಗ್ಗೆ ಸಿ.ಇ.ಒ. ಅವರು ಗರಂ ಅದರಲ್ಲದೆ, ಬಂಟ್ವಾಳ ತಾ.ಪಂ. ಕಾರ್ಯ ನಿರ್ವಣಾಧಿಕಾರಿ ರಾಜಣ್ಣ ಅವರ ಮೇಲೆ ಕ್ರಮ ಕೈಗೊಳ್ಳವ ಬಗ್ಗೆ ಎಚ್ಚರಿಕೆ ನೀಡಿದರು.
ಮೇ ತಿಂಗಳ ಅಂತ್ಯದವರೆಗೂ ಕಾಮಗಾರಿ ಪೂರ್ಣಗೊಳಿಸದೆ ಮಳೆಗಾಲ ಆರಂಭವಾಗುವ ಜೂನ್ ತಿಂಗಳಲ್ಲಿ ಕಾಮಗಾರಿ ಹೇಗೆ ಪೂರ್ಣಗೊಳಿಸುತ್ತೀರಿ ಎಂದು ಅಧಿಕಾರಿಗಳನ್ನು ಅವರು ಪ್ರಶ್ನಿಸಿದರು.
ಎಲ್ಲ ಗ್ರಾ.ಪಂ. ವ್ಯಾಪ್ತಿಯಲ್ಲಿ ಬಹುತೇಕ ಕಾಮಗಾರಿಗಳ ಪೈಕಿ ತೋಟಗಾರಿಕ ಇಲಾಖೆಗೆ ಸಂಬಂಧಿಸಿದ ಕಾಮಗಾರಿಗಳು ಮಾತ್ರ ಬಾಕಿ ಉಳಿದಿರುವುದು ಮೇಲ್ನೋಟಕ್ಕೆ ಗಮನಕ್ಕೆ ಬಂದಿದೆ ಎಂದು ಅವರು ತಿಳಿಸಿದಾಗ, ಪ್ರತಿಕ್ರಿಯೆ ನೀಡಿದ ಗ್ರಾ.ಪಂ. ಪಿಡಿಒಗಳು ತಾಂತ್ರಿಕ ಸಮಸ್ಯೆಯ ಬಗ್ಗೆ ದೂರು ಮುಂದಿಟ್ಟರು.
ದ.ಕ. ಜಿಲ್ಲೆಯ ಪ್ರತೀ ಗ್ರಾ.ಪಂ.ಗಳಲ್ಲಿ ತಂತ್ರಜ್ಞಾನ ಅಳವಡಿಕೆಯಾಗಿದ್ದು, ಮುಂದುವರಿದ ಜಿಲ್ಲೆಯಾಗಿದೆ. ಆದುದರಿಂದ ಅಭಿವೃದ್ಧಿ ಕಾರ್ಯದಲ್ಲಿ ಹಿಂದುಳಿಯಬಾರದು ಎಂದು ಹೇಳಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಮಹೇಶ್, ನೆರವು ಘಟಕದ ಸಂಚಾಲಕಿ ಮಂಜುಳಾ, ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ರಾಜಣ್ಣ ಉಪಸ್ಥಿತರಿದ್ದರು.