Advertisement

Kannada Cinema; ಟೀಸರ್ ನಲ್ಲಿ ‘ಬ್ಯಾಕ್ ಬೆಂಚರ್ಸ್’ ನಗೆ ಹಬ್ಬ

06:02 PM May 13, 2024 | Team Udayavani |

ಬ್ಯಾಕ್‌ ಬೆಂಚರ್ಸ್‌- ಹೀಗೊಂದು ಸಿನಿಮಾ ಆರಂಭವಾಗಿರುವುದು ನಿಮಗೆ ಗೊತ್ತಿರಬಹುದು. ಈಗ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ನಿರತವಾಗಿದೆ.

Advertisement

ಇತ್ತೀಚೆಗೆ ಚಿತ್ರದ ಟೀಸರ್‌ ಬಿಡುಗಡೆಯಾಗಿದ್ದು, ಟೀಸರ್‌ ನಲ್ಲಿರುವ ದೃಶ್ಯಗಳು, ಕಾಮಿಡಿ ಪಂಚುಗಳಿಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದು ಬಿ.ಆರ್‌. ರಾಜಶೇಖರ್‌ ನಿರ್ದೇಶನದಲ್ಲಿ ಮೂಡಿ ಬಂದಿರುವ ಚಿತ್ರ. ನಿರ್ಮಾಪಕರಾಗಿ, ನಿರ್ದೇಶಕರಾಗಿ ಸಾಕಷ್ಟು ವಿಭಿನ್ನ ಪ್ರಯತ್ನ ಮಾಡಿರುವ ರಾಜಶೇಖರ್‌ ಈಗ “ಬ್ಯಾಕ್‌ ಬೆಂಚರ್ಸ್‌’ ಮೇಲೆ ನಂಬಿಕೆ ಇಟ್ಟಿದ್ದಾರೆ.

ಪೂರ್ತಿಯಾಗಿ ಹೊಸಬರ ತಂಡವನ್ನಿಟ್ಟುಕೊಂಡು, ಇಂದಿನ ಟ್ರೆಂಡ್‌ಗೆ ತಕ್ಕಂತಹ ಕಥೆಯೊಂದಿಗೆ ಸಿನಿಮಾ ಮಾಡಿದ್ದಾರೆ ರಾಜಶೇಖರ್‌. ಅದು ಟೀಸರ್‌ನಲ್ಲಿ ಗೊತ್ತಾಗುತ್ತಿದ್ದು, ಟೀಸರ್‌ ಸೋಶಿಯಲ್‌ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಇದು ಚಿತ್ರತಂಡದ ಹುಮ್ಮಸ್ಸು ಹೆಚ್ಚಿಸಿದೆ.

ಈಗಾಗಲೇ ಕಾಲೇಜು ಕೇಂದ್ರಿತವಾದ ಒಂದಷ್ಟು ಸಿನಿಮಾಗಳು ಬಂದಿವೆ. ಗೆಲುವನ್ನೂ ಕಂಡಿವೆ. ಆದರೆ, ಬ್ಯಾಕ್‌ ಬೆಂಚರ್ಸ್‌ ಕಥೆಯನ್ನು ನಿರ್ದೇಶಕ ರಾಜಶೇಖರ್‌ ಅಂದಾಜಿಗೆ ನಿಲುಕದಂತೆ ರೂಪಿಸಿದ್ದಾರಂತೆ. ಕಾಲೇಜು ಕಥೆಯೆಂದಾಕ್ಷಣ ನಿಮ್ಮಲ್ಲೊಂದು ಕಲ್ಪನೆಯ ಚಿತ್ರಣ ಮೂಡಿಕೊಂಡಿದ್ದರೆ, ಅದಕ್ಕೆ ಮೀರಿದ ದೃಷ್ಯರೂಪದ ಅಚ್ಚರಿಗಳು ಎಲ್ಲರನ್ನೂ ಚಕಿತಗೊಳಿಸುವುದು ಗ್ಯಾರಂಟಿ ಎನ್ನುವುದು ಚಿತ್ರತಂಡದ ಮಾತು.

ಪಿಪಿ ಪ್ರೊಡಕ್ಷನ್ಸ್‌ ಅಡಿಯಲ್ಲಿ ರಾಜಶೇಖರ್‌ ಅವರೇ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ರಂಜನ್‌, ಜತಿನ್‌ ಆರ್ಯನ್‌, ಆಕಾಶ್‌ ಎಂ.ಪಿ, ಶಶಾಂಕ್‌ ಸಿಂಹ, ಸುಚೇಂದ್ರ ಪ್ರಸಾದ್‌, ಅರವಿಂದ್‌ ಕುಪ್ಳಿಕರ್‌, ಕುಂಕುಮ್‌ ಹೆಚ್‌, ಅನುಷಾ ಸುರೇಶ್‌, ವಿಯೋಮಿ ವನಿತಾ, ಮನೋಜ್‌ ಶೆಟ್ಟಿ, ನಮಿತಾ ಗೌಡ, ವಿಕಾಸ್‌, ಚತುರ್ಥಿ ರಾಜ್‌, ಗೌರವ್‌ ಮುಂತಾದವರ ತಾರಾಗಣವಿದೆ. ನಕುಲ್‌ ಅಭಯಂಕರ್‌ ಸಂಗೀತ ನಿರ್ದೇಶನ, ಮನೋಹರ್‌ ಜೋಶಿ ಛಾಯಾಗ್ರಹಣ, ರಂಜನ್‌ ಮತ್ತು ಅಮರ್‌ಗೌಡ ಸಂಕಲನ ಈ ಚಿತ್ರಕ್ಕಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next