Advertisement
ಕಾಶಿ ಎನ್ನುತ್ತಿದ್ದಂತೆಯೇ ನಮ್ಮ ತಲೆಯಲ್ಲಿ ಹಳೆ ಕ್ಯಾಸೆಟ್ ಒಂದು ಪ್ಲೇ ಆಗುತ್ತದೆ. ಜೀವನದಲ್ಲಿ ಎಲ್ಲವನ್ನೂ ನೋಡಿ ಮುಗಿಸಿದ ಮೇಲೆ, ಅಂದರೆ ಬಾಲ್ಯ, ಯೌವ್ವನ ಮತ್ತು ಮುಪ್ಪು ಇವೆಲ್ಲವನ್ನೂ ದಾಟಿದ ಮೇಲೆ ಆತ್ಮ ಜ್ಞಾನ, ಪುಣ್ಯ, ಪಡೆದುಕೊಳ್ಳಲು ಹೋಗಬೇಕಾದ ಸ್ಥಳವದು ಎನ್ನುವುದು. ಇಷ್ಟಕ್ಕೂ ದೇಹ ಒಣ ತರಕಾರಿಯಂತಾದಾಗ, ಇನ್ನೇನು ಜೀವನವೇ ಮುಗಿದು ಹೋಯಿತು ಎನ್ನುವಾಗ ಜ್ಞಾನ, ಪುಣ್ಯ ಸಿಕ್ಕಿ ಏನು ಪ್ರಯೋಜನ? ಅಲ್ಲದೆ ಸತ್ಯಜಿತ್ ರೇ ಅವರ “ಅಪರಾಜಿತೋ’, ಇತ್ತೀಚಿನ ಮಸಾನ್ ಸಿನಿಮಾಗಳು, ನ್ಯಾಷನಲ್ ಜಿಯೋಗ್ರಫಿ ಛಾಯಾಗ್ರಾಹಕ ಮೆಕ್ ಕರ್ರಿ ಫೋಟೋಗಳು, ಮೈ ಜುಮ್ಮೆನ್ನಿಸುವ ತೆರೆದ ಶವಾಗಾರ ಕುರಿತಾದ ಬಿಬಿಸಿ ಡಾಕ್ಯುಮೆಂಟರಿ ಇವೆಲ್ಲವೂ ಸೇರಿಕೊಂಡು ಪ್ರೇರಣೆಯಾಗಿ ಒಂದು ವಾರಕ್ಕಾಗುವಷ್ಟು ಸರಂಜಾಮನ್ನು ರಕ್‌ಸ್ಯಾಕಿನೊಳಗೆ ತುಂಬಿಕೊಂಡು ಹೊರಟೆ. ತೀರ್ಥಯಾತ್ರೆಯ ಭಾಷೆಯಲ್ಲಿ ಹೇಳುವುದಾದರೆ ಗಂಟುಮೂಟೆ ಕಟ್ಟಿದೆ. ಪುಣ್ಯ ಸಿಗದಿದ್ದರೂ ಒಳ್ಳೆಯ ಫೋಟೋಗಳಂತೂ ಸಿಕ್ಕೇ ಸಿಗುತ್ತವೆ ಎಂಬ ನಂಬಿಕೆಯಿತ್ತು!
ಗಂಗಾ ನದಿಗೆ ಇಳಿದು ಹೋಗಲು ನಿರ್ಮಿಸಿರುವ ಮೆಟ್ಟಿಲುಗಳನ್ನೇ ಘಾಟ್ ಎನ್ನುತ್ತಾರೆ. ವಾರಣಾಸಿಯಲ್ಲಿ ಸುಮಾರು 88 ಘಾಟ್‌ಗಳಿವೆ. ಪ್ರತಿಯೊಂದು ಕೂಡಾ ವಿಭಿನ್ನ. ಒಂದೊಂದಕ್ಕೂ ಒಂದೊಂದು ಹೆಸರು ಮತ್ತು ಹಿನ್ನೆಲೆ. ಅವುಗಳಲ್ಲೆಲ್ಲಾ ಮುಖ್ಯವಾದುದು ದಶಾಶ್ವಮೇಧ ಘಾಟ್. ಬ್ರಹ್ಮ, ಇಲ್ಲಿ ಹತ್ತು ಅಶ್ವಮೇಧ ಯಾಗಗಳನ್ನು ಮಾಡಿದ ಜಾಗವೆಂದು ಇದಕ್ಕೆ ಆ ಹೆಸರು. ಇದು ಗಂಗೆಗೆ ಮಹಾದ್ವಾರದಂತೆ. ಸಂಜೆಗತ್ತಲಿನಲ್ಲಿ ಹತ್ತಾರು ಪೂಜಾರಿಗಳು ಗಂಗಾ ನದಿಗೆ ದೇದೀಪ್ಯಮಾನ ಆರತಿಯನ್ನು ಬೆಳಗುವ ಜಗತøಸಿದ್ಧ “ಗಂಗಾ ಆರತಿ’ ನಡೆಯುವುದು ಇದೇ ಘಾಟ್‌ನಲ್ಲಿ. ಹೋಟೆಲಿನಲ್ಲಿ ಟೀ ಕುಡಿದು ಅಲ್ಲಿಗೆ ಹೋದರೆ ಜನವೋ ಜನ. 100 ರೂ. ಕೊಟ್ಟರೆ ಗಂಗಾ ನದಿಯಲ್ಲಿ ತೇಲುವ ದೋಣಿಗಳಲ್ಲಿ ಕುಳಿತು ಪ್ರತಿಫಲನ ಸಹಿತ ಆರತಿಯನ್ನು ನೋಡಬಹುದು. ಅದೊಂದು ಅಭೂತಪೂರ್ವ ಅನುಭವ. ಗಂಗೆಯ ದಡದಲ್ಲಿ ಹತ್ತಾರು ಕಿ.ಮೀ ಉದ್ದಕ್ಕೂ ಘಾಟ್‌ಗಳು ಚಾಚಿಕೊಂಡಿವೆ. ಬೆಳಗ್ಗೆ ಮತ್ತು ಸಂಜೆ ಹೊತ್ತಿನಲ್ಲಿ ಉದ್ದಕ್ಕೂ ವಾಕಿಂಗ್, ಜಾಗಿಂಗ್, ಯೋಗ ಮಾಡುವವರು ಕಾಣಸಿಗುತ್ತಾರೆ.
Related Articles
ನೀವು ಯಾವತ್ತಾದರೂ ಮೇಝ್ ಪಜಲ್ ಆಡಿದ್ದೀರಾ? ಪುಸ್ತಕದಲ್ಲಿ ಆಡಿರಬಹುದು. ಆದರೆ ನೈಜವಾಗಿ? ಆಡಿಲ್ಲದಿದ್ದರೆ ವಾರಣಾಸಿ ಪ್ರಶಸ್ತವಾದ ಜಾಗ. ಏಕೆಂದರೆ ಇಲ್ಲಿನ ಗಲ್ಲಿಗಳು ಮೇಝ್ನಂತೆಯೇ ಇವೆ. ತುಂಬಾ ಇಕ್ಕಟ್ಟು ಮತ್ತು ಒತ್ತೂತ್ತಾಗಿರುವ ಇಲ್ಲಿನ ಗಲ್ಲಿಗಳೊಳಗೆ ಒಮ್ಮೆ ಹೊಕ್ಕುಬಿಟ್ಟರೆ ಹೊರಗೆ ಬರುವುದು ಇನ್ನೆಲ್ಲೋ. ಜನರು ಹೋಗಲಿ ಗೂಗಲ್ ಮ್ಯಾಪ್‌ಗ್ಳು ಕೂಡಾ ಈ ಜಾಗದಲ್ಲಿ ನಮ್ಮ ದಿಕ್ಕುತಪ್ಪಿಸಬಲ್ಲವು ಎಂದರೆ ಆದೆಷ್ಟು ಸಂಕೀರ್ಣವಾಗಿರಬಹುದು ಊಹಿಸಿ. ಆದರೆ, sometimes wrong path could also lead us to the right destination ಎನ್ನುವುದರ ಅನುಭವ ನಮಗಿಲ್ಲಿ ಸಿಗುವುದು ಸುಳ್ಳಲ್ಲ. ಇಲ್ಲಿನ ಪ್ರತಿಯೊಂದು ಗಲ್ಲಿಯೂ ಲಾಂಡ್ರಿ, ಲಸ್ಸಿ ಅಂಗಡಿ, ಪಾನ್‌ವಾಲಾ, ಮೀಠಾವಾಲಾಗಳು, ಬಳೆಶಾಪು, ಕಿರಾಣಿ ದುಕಾನುಗಳಿಂದ ತುಂಬಿವೆ. ಎಲ್ಲೆಂದರಲ್ಲಿ ನುಗ್ಗಿಬಿಡುವ ದನಗಳಿಗೆ, ವಾಹನಗಳಿಗೆ ಸೈಡು ಕೊಡುತ್ತಾ ಈ ದುಕಾನುಗಳನ್ನೆಲ್ಲಾ ಹಾದು ಹೋಗುವುದೇ ರೋಚಕ ಅನುಭವ.
Advertisement
ಕೊನೆ ಹನಿ…ಇಲ್ಲಿ ಗುಡಿಸಲು ಹಾಕಿದ ಹೋಟೆಲ್‌ನಲ್ಲಿಯೂ ಕಾಂಟಿನೆಂಟಲ್, ಇಸ್ರೇಲಿ, ಫ್ರೆಂಚ್ ಬ್ರೇಕ್‌ಫಾಸ್ಟ್ ಸಿಗುತ್ತದೆ! ವಿದೇಶಿಯರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಬರುವುದರಿಂದ, ನಮ್ಮ ಮಹಾನಗರಗಳಲ್ಲೂ ಸಿಗದ ವಿದೇಶಿ ಖಾದ್ಯಗಳು ಇಲ್ಲಿ ಜಾಗ ಪಡೆದುಕೊಂಡಿವೆ. ಅದಲ್ಲದೆ ವಾರಣಾಸಿ ಸಿಹಿತಿಂಡಿಗಳಿಗಾಗಿಯೂ ಹೆಸರುವಾಸಿ. ವಿಶ್ವನಾಥ ದೇವಸ್ಥಾನ. ಬನಾರಸ್ ಹಿಂದೂ ವಿಶ್ವವಿದ್ಯಾಲಯ, ಸಾರ್‌ನಾಥ್ ಸೇರಿದಂತೆ ಸುತ್ತಮುತ್ತ ನೋಡಲು ಹಲವಾರು ಜಾಗಗಳಿವೆ. ಅದರ ಜೊತೆಗೇ 24 ಗಂಟೆಯೂ ಹೆಣ ಸುಡಲ್ಪಡುವ ಮಣಿಕರ್ಣಿಕಾ ಘಾಟ್, ಸಾಯಲೆಂದೇ ಬರುವ ವಿಧವೆಯರು- ವೃದ್ಧರು, ಕಲುಷಿತಗೊಂಡಿರುವ ಗಂಗೆ, ಎಲ್ಲೆಂದರಲ್ಲಿ ಧುತ್ತನೆ ಪ್ರತ್ಯಕ್ಷವಾಗುವ ಹೆಣದ ಮೆರವಣಿಗೆ, ಸನ್ಯಾಸಿ ವೇಷದವರು, ಟೋಪಿ ಹಾಕುವ ಗೈಡ್‌ಗಳು, ವ್ಯಾಪಾರಿಗಳು – ಇವೆಲ್ಲವೂ ಬದುಕಿನ ಇನ್ನೊಂದು ಮಜಲಿನ ಕಥೆಯನ್ನೇ ಹೇಳುತ್ತವೆ. ಬುದ್ಧ, ಮಹಾವೀರ, ಶಂಕರಾಚಾರ್ಯರು, ಸಂತ ಕಬೀರ, ತುಳಸಿದಾಸರು ನಡೆದಾಡಿದ, ಪಂಡಿತ್ ರವಿಶಂಕರ್, ಬಿಸ್ಮಿಲ್ಲಾಖಾನ್, ಕಥಕ್ ಗುರು ಬಿರ್ಜು ಮಹಾರಾಜ್, ಪ್ರೇಮ್‌ಚಂದ್, ಲಾಲ್ ಬಹಾದ್ದೂರ್ ಶಾಸ್ತ್ರಿ ಮುಂತಾದ ಮಹನೀಯರು ಹುಟ್ಟಿದ ಈ ಮಣ್ಣಲ್ಲಿ ಕಲೆ, ಅಧ್ಯಾತ್ಮ ಬೆರೆತಿದೆ. ಅದರ ಗಂಧ ಸೋಕಬೇಕೆಂದರೆ ಚಪ್ಪಲಿ ಕಳಚಬೇಕು, ಹಳೆ ಕ್ಯಾಸೆಟ್ ಎಸೆಯಬೇಕು! ಪೊಲೀಸರಿಂದ ಬಚಾವಾಗಿದ್ದು
ಒಂದಿನ ಬೆಳಗ್ಗೆ 5ರ ಸುಮಾರಿಗೆ ಕ್ಯಾಮೆರಾ ತಗುಲಿಸಿಕೊಂಡು ರೂಮಿನಿಂದ ಹೊರಬಿದ್ದಿದ್ದೆ. ಗುರುತು ಪರಿಚಯವಿಲ್ಲದ ಒಂದು ಗಲ್ಲಿಯನ್ನು ಹೊಕ್ಕು ನೋಡಿದರೆ ಭೂಕಂಪವಾಗಿದೆಯೇನೋ ಎನ್ನುವಂತೆ ಬೀದಿಗೆ ಬೀದಿಯೇ ಧರಾಶಾಯಿಯಾಗಿತ್ತು. ಫೋಟೋಜೆನಿಕ್ ಎನಿಸಿದ್ದರಿಂದ ಫೋಟೋ ಕ್ಲಿಕ್ಕಿಸುತ್ತಾ ಹೋದೆ. ಅಧಿಕಾರಿಗಳ ಆಜ್ಞೆಯಂತೆ ಅ ಪ್ರದೇಶದಲ್ಲಿ ಹಳೆ ಕಟ್ಟಡಗಳನ್ನು ಉರುಳಿಸುವ ಪ್ರಕ್ರಿಯೆ ನಡೆಯುತ್ತಿದೆಯೆಂದು ಎಂದು ಗೂರ್ಖನೊಬ್ಬ ಹೇಳಿದ. ಜೊತೆಗೇ “ಈ ಜಾಗದಲ್ಲಿ ಪೊಲೀಸ್ ಕಣ್ಗಾವಲಿದೆ. ಸುತ್ತಮುತ್ತ ಹತ್ತಾರು ಚೆಕ್‌ಪೋಸ್ಟುಗಳಿವೆ. ನಿಮ್ಮ ಕ್ಯಾಮೆರಾ ಬಚ್ಚಿಟ್ಟುಕೊಳ್ಳಿ’ ಎಂದು ಪುಕ್ಕಟೆ ಸಲಹೆಯನ್ನೂ ನೀಡಿದ ಪುಣ್ಯಾತ್ಮ. ಉತ್ತರಪ್ರದೇಶದ ಪೊಲೀಸರನ್ನು ನೆನೆದು ಒಂದು ಕ್ಷಣ ದಿಗಿಲಾಯಿತು. ಕ್ಯಾಮೆರಾವನ್ನು ಬ್ಯಾಗ್‌ನೊಳಗಿಟ್ಟೆ. ಗೂರ್ಖ ಹೇಳಿದಂತೆಯೇ ಮುಂದೆ ಚೆಕ್‌ಪೋಸ್ಟುಗಳು ಸಿಕ್ಕವು. ಆದರೆ ಎಲ್ಲೂ ತಪಾಸಣೆ ಮಾಡಲಿಲ್ಲ. ಒಂದು ವೇಳೆ ಸಿಕ್ಕಿಬಿದ್ದಿದ್ದರೆ ತಪ್ಪಿಸಿಕೊಳ್ಳುವುದು ಕಷ್ಟವಿತ್ತು. ನಾನು ವೃತ್ತಿಯಲ್ಲಿ ಪತ್ರಕರ್ತನಾಗಿದ್ದರೂ ವರದಿ ಮಾಡಲು ಬಂದಿಲ್ಲ ಎಂದರೆ ಅವರು ಕೇಳುತ್ತಿದ್ದರೇ? ಫೋಟೋ- ಲೇಖನ: ಹರ್ಷವರ್ಧನ್ ಸುಳ್ಯ