ಪಟ್ನಾ : ಬಿಹಾರದ ಶೈಕ್ಷಣಿಕ ವಲಯದಲ್ಲಿ ಬಿರುಗಾಳಿ ಎಬ್ಬಿಸಿದ್ದ ‘Bihar toppers scam’ನ ಮಾಸ್ಟರ್ ಮೈಂಡ್ ಬಚ್ಚಾ ರಾಯ್ ಗೆ ಸೇರಿದ 10 ಕೋಟಿ ರೂ.ಗಳ ಅಕ್ರಮ ಆಸ್ತಿ-ಪಾಸ್ತಿಯನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ED ಅಧಿಕಾರಿಗಳು ಆರೋಪಿ ಬಚ್ಚಾ ರಾಯ್ ಗೆ ಸೇರಿದ ಕನಿಷ್ಠ 28 ಆಸ್ತಿಪಾಸ್ತಿಗಳನ್ನು ಅಟ್ಯಾಚ್ ಮಾಡಿಕೊಂಡಿದ್ದಾರೆ ಎಂದು ಎಎನ್‌ಐ ವರದಿ ಮಾಡಿದೆ.
ಈ ಹಿಂದೆ ಜಾರಿ ನಿರ್ದೇಶನಾಲಯ ಬಚ್ಚಾ ರಾಯ್‌ಗೆ ಸೇರಿದ್ದ 4.53 ಕೋಟಿ ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿತ್ತು. ಇವುಗಳಲ್ಲಿ 29 ನಿವೇಶನಗಳು ಮತ್ತು 10 ಬ್ಯಾಂಕುಗಳಲ್ಲಿನ ಠೇವಣಿಗಳು ಕೂಡ ಸೇರಿವೆ.
ಹತ್ತು ಮತ್ತು ಹನ್ನೆರಡನೇ ತರಗತಿಯ ಸಿಬಿಎಸ್‌ಇ ಪ್ರಶ್ನೆ ಪತ್ರಿಕೆಗಳು ಲೀಕ್ ಆದ ಬೆನ್ನಿಗೇ ವೈಶಾಲಿ ಜಿಲ್ಲೆಯ ವಿಷುನ್ ರಾಯ್ ಕಾಲೇಜ್ ನ ಪ್ರಾಂಶುಪಾಲ ಮತ್ತು ಕಾರ್ಯದರ್ಶಿ ಯಾಗಿರುವ ಬಚ್ಚಾ ರಾಯ್ ಅಲಿಯಾಸ್ ಅಮಿತ್ ಕುಮಾರ್ ವಿರುದ್ಧ ಹಣ ಅಕ್ರಮ ತಡೆ ಕಾಯಿದೆ (ಪಿಎಂಎಲ್‌ಎ) ಯಡಿ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು.
ಈ ಕಾರ್ಯಾಚರಣೆಯಲ್ಲಿ ED ಅಧಿಕಾರಿಗಳು ಬಚ್ಚಾ ರೈ ಹೆಸರಲ್ಲಿ ಲಾಲ್‌ಗಂಜ್, ಮಹುವಾ,ಭಗವಾನ್‌ಪುರ ಮತ್ತು ಹಾಜಿಪುರದಲ್ಲಿನ 16 ನಿವೇಶಗಳನ್ನು ಮತ್ತು ಆತನ ಪತ್ನಿ ಸಂಗೀತಾ ರಾಯ್ ಹೆಸರಲ್ಲಿದ್ದ 13 ನಿವೇಶನಗಳನ್ನು ವಶಪಡಿಸಿಕೊಂಡಿದ್ದಾರೆ.
ಪೇಪರ್ ಲೀಕ್ ಹಗರಣಕ್ಕೆ ಸಂಬಂಧಿಸಿ ಮಾಜಿ ಬಿಎಸ್‌ಇಬಿ ಅಧ್ಯಕ್ಷ ಪ್ರಸಾದ್ ಮತ್ತು ನಾಲ್ವರು ಪ್ರಿನ್ಸಿಪಾಲರು ಸೇರಿದಂತೆ ಒಟ್ಟು 8 ಮಂದಿಯ ವಿರುದ್ಧ ಕೇಸು ದಾಖಲಾಗಿತ್ತು.