Advertisement

ಬೆಕ್ಕಿನ ಮರಿ

07:55 PM Oct 12, 2019 | mahesh |

ರಾಧಕ್ಕ ಸದ್ದಿಲ್ಲದೆ ಸಣ್ಣ ಗೇಟಿನಿಂದ ನುಸುಳುತ್ತಿರುವುದನ್ನು ಕಿಟಕಿಯಿಂದ ನೋಡುತ್ತಿರುವಾಗಲೇ, ಇವಳು ಯಾವುದೋ “ಸತ್ತ ಹೆಗ್ಗಣ’ವನ್ನು ಹುಡುಕಿಕೊಂಡು ಬಂದಿರಬಹುದೆಂದು ನಾನಂದುಕೊಂಡೆ. ಮನೆ ಬಾಗಿಲ ಬಳಿ ಬರುತ್ತಿದ್ದಂತೆ ಆರಂಭಿಸಿಯೇಬಿಟ್ಟರು, “”ಮಾಲಕ್ಕ ನೀವೇನು ಗೌರಮ್ಮನ ಮನೆ ಬೀಗರ ಔತಣದ ಸತ್ಯನಾರಾಯಣ ಪೂಜೆಗೆ ಬರಲೇ ಇಲ್ಲ. ಲೇಟಾಗಿಯಾದರೂ ನೀವು ಬಂದು ಸೇರಿಕೊಳ್ತೀರೇನೋ ಅಂತ ನಾನಂತೂ ಪಕ್ಕದಲ್ಲೇ ಒಂದು ಸೀಟು ಕೂಡ ಹಿಡಿದಿಟ್ಟುಕೊಂಡಿದ್ದೆ. ಕಾದು ಕಾದು ಸಾಕಾಗಿ ಮತ್ಯಾರೋ ಕೇಳಿದರು, ಅಂತ ಕೊಟ್ಟುಬಿಟ್ಟೆ”

Advertisement

“”ಮೊನ್ನೆ ರಾತ್ರಿಯಿಂದ ವಿಪರೀತ ತಲೆಭಾರ, ಮೈ-ಕೈ ನೋವು. ಊರಲ್ಲೆಲ್ಲ ಡೇಂಗಿ, ಮಲೇರಿಯಾ ಅಂತ ನಾನಾ ಕಾಯಿಲೆಗಳು ಬಂದಿವೆ ಅಂತ ನಮ್ಮ ಮನೆಯವರು ಹೇಳ್ತಾ ಇದ್ದರು. ತುಂಬ ಭಯವಾಗ್ತಾ ಇದೆ. ಹಾಗಾಗಿ ನಾನು ಬರುವ ಸ್ಥಿತಿಯಲ್ಲಿ ಇರಲಿಲ್ಲ…” ಎಂದು ಹೇಳಿ ಮಾತು ಮುಗಿಸಿದೆನಾದರೂ, ರಾಧಕ್ಕನ ಮಾತು ಮಾತ್ರ ಯಾವುದೋ ವಿಷಯಕ್ಕೆ ಪೀಠಿಕೆ ಅಂತ ಅವರ ಮಾತಿನ ವರಸೆಯಲ್ಲೇ ತಿಳಿಯುವಂತ್ತಿತ್ತು. ಆದರೂ ಮಾತು ಮುಂದುವರಿಸುತ್ತ ಕೇಳಿದೆ, “”ನೀವೇನೋ ಪೂಜೆಯ ಸಪಾದ ತಂದ ಹಾಗಿದೆ? ಅಂದ ಹಾಗೆ ಹೇಗಿತ್ತು ಮದುಮಕ್ಕಳ ಜೋಡಿ?” ನನ್ನ ಪ್ರಶ್ನೆಗೆ ಮುಖ ಕಿವುಚುತ್ತ ಮಾತು ಮುಂದುವರಿಸಿದ ರಾಧಕ್ಕ, “”ಜೋಡಿ ಪರವಾಗಿಲ್ಲ. ಹುಡುಗಿ ಅಂಥ ಸುರಸುಂದರಿಯೇನೂ ಅಲ್ಲ, ಹಾಗಂತ ತೆಗೆದು ಹಾಕುವಂತೆಯೂ ಇಲ್ಲ. ಅಯ್ಯೋ! ಗೌರಮ್ಮನ ಯಜಮಾನರ ಜುಗ್ಗತನ ನಿಮಗೇನು ಹೊಸತೇ? ಅರವತ್ತು ಜನರಿಗಾಗುವಷ್ಟು ಅಡುಗೆ ಮಾಡಿಸಿರ್ತಾರೆ, ಹೇಳಿಕೆ ನೂರೈವತ್ತು ಮನೆಗಳಿಗೆ ಕೊಟ್ಟಿರ್ತಾರೆ. ಒಂದು ಚಮಚ ಸಪಾದ ಬಾಳೆಗೆ ಬಿದ್ದಿತ್ತು. ನಮ್ಮನೆ ಗೋಪುಗಾದರೂ ಸ್ವಲ್ಪ ಕಟ್ಟಿಕೊಂಡು ಬರೋಣವೆಂದು ಊಟ ಮುಗಿಸಿದವಳು, ಒಂದೂವರೆ ತಾಸು ಕಾಲಹರಣ ಮಾಡುತ್ತ ಅಲ್ಲೇ ಕುಳಿತಿದ್ದೆ. ನಿಧಾನ ಒಳಗೆ ಹೋಗಿ ವಿಚಾರಿಸಿದೆ, ಬರಿದಾದ ಪಾತ್ರೆ ನನ್ನ ಮುಖಕ್ಕೆ ಹಿಡಿದರು. ಇರಲಿ. ಅಂದ ಹಾಗೆ ನಾನು ಬಂದಿದ್ದು, ನಿಮ್ಮ ರೂಪಾಳ ಬಗ್ಗೆ ಕೇಳ್ಳೋದಕ್ಕೆ. ಮೊನ್ನೆ ತಾನೆ ದೊಡ್ಡ ಜೆಸ್ಟ್‌ ಗಾಡಿ ನಿಮ್ಮ ಮನೆ ಬಾಗಿಲ ಹತ್ತಿರ ತುಂಬಾ ಹೊತ್ತು ನಿಂತಿತ್ತಲ್ವಾ. ನಮಗೆಲ್ಲ ಪಾಯಸ ಹಾಕಿಸೋ ತಯಾರಿ ನಡೆತಾ ಇದೆಯೋ ಅಂತ ವಿಚಾರಿಸಿಕೊಂಡು ಹೋಗೋಕೆ ಬಂದೆ”

ನನಗಂತೂ ಉರಿದುಹೋಯ್ತು. ಪುಣ್ಯಕ್ಕೆ ರೂಪಾ ಕ್ಲಿನಿಕ್‌ಗೆ ಹೋಗಿದ್ದಳು. ಅವಳೆಲ್ಲಾದರೂ ಕೇಳಿಸಿಕೊಂಡಿದ್ದರೆ ರಾಧಕ್ಕನ ಹಲ್ಲು ಉದುರಿಸಿಬಿಡ್ತಿದ್ದಳು. ಜಮದಗ್ನಿ ಹೋಗುವಾಗ ಅವಳಿಗೇ ಚಾರ್ಜ್‌ ಕೊಟ್ಟು ಹೋಗಿದ್ದಾನೆ ಅಂತ ಅವಳಜ್ಜಿ ಯಾನೆ ನಮ್ಮತ್ತೆಯ ಅಂಬೋಣ! ಈ ಬಾರಿಯೂ ರೂಪಾಳಿಗೆ ಕಂಕಣ ಬಲ ಕೂಡಿಬರಲಿಲ್ಲವೆಂದು ನಾನು ತುಂಬಾ ನೊಂದುಕೊಂಡಿದ್ದೆ. ಇದ್ದ ಸಂಗತಿಯನ್ನು ರಾಧಕ್ಕನ ಮುಂದೆ ಖುಲಾಸೆ ಮಾಡಿದೆ, ರಾಧಕ್ಕ, “”ಆ ಹುಡುಗನ ಅಪ್ಪ-ಅಮ್ಮರಿಗೇನೋ ಈ ನೆಂಟಸ್ತಿಕೆಯಿಂದ ಸಂತೋಷವೇ ಆಗಿತ್ತು. ಅಡುಗೆ ಮನೆಗೆ ಬಂದ ಅವನಮ್ಮ ಹೇಳಿದಳು, “”ಹೇಳಿ ಮಾಡಿಸಿದ ಹಾಗಿದೆ ಜೋಡಿ… ಆದರೆ, ಹುಡುಗ ತಾನು ಬರೀ ಬಿ.ಟೆಕ್‌., ಅವಳು ಎಂ.ಡಿ.ಎಸ್‌., ನನಗಿಂತಲೂ ಹೆಚ್ಚು ಕಲಿತ ಹುಡುಗಿ ಜೊತೆ ಹೊಂದಿಕೆಯಾಗೋದು ಕಷ್ಟ ಎನ್ನುತ್ತಿದ್ದಾನಂತೆ…ಈಗಿನ ಕಾಲದ ಹುಡುಗರಿಗೆ ಹೆಚ್ಚು ಒತ್ತಾಯ ಮಾಡಲಿಕ್ಕೂ ಬರೋದಿಲ್ಲ, ಏನಂತೀರಾ?”

ಅವರು ಏನು ಅನ್ನುವುದರಲ್ಲಿದ್ದರೋ ಗೊತ್ತಾಗುವುದಕ್ಕೆ ಮುಂಚೆ, ಅದೆಲ್ಲಿದ್ದರೋ ನಮ್ಮತ್ತೆ ಒಮ್ಮೆಲೇ ನಮ್ಮಿಬ್ಬರ ನಡುವೆ ಪ್ರತ್ಯಕ್ಷವಾಗಿಬಿಟ್ಟರು. ಬಹುಶಃ ನಮ್ಮಿಬ್ಬರ ಮಾತುಕತೆ ಕೇಳಿಸಿಕೊಂಡಿರಬೇಕು! ನಮ್ಮತ್ತೆಯ ವಿಶೇಷತೆಯೆಂದರೆ, ಕೆಲವೊಮ್ಮೆ ಅವರ ಹತ್ತಿರ ಹೋಗಿ ಮಾತನಾಡಿಸಿದರೂ ಅವರಿಗೆ ಸರಿಯಾಗಿ ಕೇಳಿಸೋದಿಲ್ಲ. ಕಿವಿ ಸ್ವಲ್ಪ ದೂರ. ಈಗ ನಮ್ಮ ಮಾತುಗಳನ್ನು ಪ್ರತಿಶತ ಕೇಳಿಸಿಕೊಂಡಿದ್ದಂತೂ ಸೋಜಿಗವೋ ಸೋಜಿಗ! ನಡುವೆಯೇ ಬಾಯಿಹಾಕಿದರು, “”ಅವನೇ ಬೇಡ ಅಂದಿದ್ದು ಒಳ್ಳೆಯದೇ ಆಯ್ತು. ಫೋಟೋದಲ್ಲಿ ಸ್ವಲ್ಪ ಕಪ್ಪಗೆ ಕಂಡಿದ್ದ. ಎದುರಿಂದ ನೋಡಿದಾಗಲಂತೂ ತೊಳೆದಿಟ್ಟ ಕೆಂಡದ ಹಾಗೆ ಕಾಣಿಸಿದ. ನನ್ನ ಮೊಮ್ಮಗಳ ಮುಂದೆ ಅವನು ಏನೇನೂ ಅಲ್ಲ… ಅಲ್ವೇನೆ ಮಾಲಾ?”

ಈಗ ಹೂಂಗುಡುವ ಸರದಿ ನನ್ನದಾಗಿತ್ತು. ಏನನ್ನೂ ಹೇಳದೆ ಕೇವಲ ತಲೆ ಅಲ್ಲಾಡಿಸಿ ಸುಮ್ಮನಾದೆ. ಮತ್ತವರೇ ಮಾತು ಮುಂದುವರಿಸಿದರು, “”ನಮ್ಮ ಬಿಲ್ಲು-ಕಲ್ಲು ಹುಟ್ಟಿ ಇನ್ನೂ ಮೂರು ತಿಂಗಳೂ ಪೂರ್ತಿಯಾಗಿಲ್ಲ. ಇನ್ನೂ ಸ್ವಲ್ಪ ದಿನ ಕಾದು ನೋಡು. ನನ್ನ ಮೊಮ್ಮಗಳಿಗೆ ಎಂಥ ಒಳ್ಳೆಯ ನೆಂಟಸ್ತಿಕೆ ಕುದುರುತ್ತದೆ ಅಂತ ನೀನೇ ನೋಡುವಿಯಂತೆ”

Advertisement

“”ಬಿಲ್ಲು-ಕಲ್ಲು… ಇವರ್ಯಾರೆ ಮಾಲಕ್ಕ, ನನಗೆ ಗೊತ್ತಿಲ್ಲದೆ ನಿಮ್ಮ ಕುಟುಂಬದಲ್ಲಿ ಸೇರ್ಪಡೆಯಾದವರು? ಸದ್ಯ ಯಾರದ್ದು ಡೆಲಿವರಿಯಾಗಿದ್ದು?” ರಾಧಕ್ಕ ಕಣ್ಣು-ಬಾಯಿ ಬಿಟ್ಟು ಕೇಳಿದರು.
“”ಅಯ್ಯೋ ರಾಧಕ್ಕ! ಅದು ನಿಮಗೆ ಗೊತ್ತಿದ್ದ ಕತೆಯೇ.ಆದರೀಗ ಮರೆತುಹೋಗಿರಬೇಕು. ನಮ್ಮ ಮನೆಯ ಮೇಲ್ಭಾಗದಲ್ಲಿ ರೆನೊವೇಷನ್‌ ಆದದ್ದು ನೆನಪಿದೆಯಾ?”
“”ಇಲ್ಲದೆ ಏನು? ಎಷ್ಟು ಒಳ್ಳೆಯ ಊಟ ಹಾಕಿಸಿದ್ದೀರಿ. ಅದನ್ನ ಹೇಗೆ ಮರೆಯೋದಕ್ಕೆ ಸಾಧ್ಯ?”
“”ಆ ಮೇಲಂತಸ್ತಿನ ರೆನೊವೇಷನ್‌ ಮಾಡಿಸ್ತಾ ಇರೋವಾಗ ಬಟ್ಟೆ ರಾಶಿಯೊಂದರ ಒಳಗೆಲ್ಲೋ “ಮಿಯಾಂವ್‌… ಮಿಯಾಂವ್‌’ ಶಬ್ದ! ಅಲ್ಲಿ ಏನಾಗ್ತಿದೆ ಅಂತಾನೇ ಗೊತ್ತಾಗಲಿಲ್ಲ. ರಕ್ತಮಯವಾಗಿದ್ದ ಬಟ್ಟೆಗಳನ್ನು ಬದಿಗೆ ಸರಿಸಿದಾಗಲೇ ಪಕ್ಕದ ಶಂಕರ ಭಟ್ಟರ ಮನೆ ಬೆಕ್ಕು ನಮ್ಮನೆಗೆ ಬಂದು ಮರಿಯಿಟ್ಟಿದೆ ಅಂತ ಗೊತ್ತಾಗಿದ್ದು. ನನಗಂತೂ ಮೊದಲಿನಿಂದಲೂ ನಾಯಿ-ಬೆಕ್ಕು ಕಂಡರೆ ಅಷ್ಟಕಷ್ಟೆ. ಹಾಕಿದ್ದ ಎರಡು ಮರಿಗಳನ್ನು ಅಲ್ಲಿಂದ ರವಾನಿಸಬೇಕು ಅಂತಿದ್ದೆ. ಆದರೆ, ನಮ್ಮತ್ತೆ ಸುಮ್ಮನೆ ಬಿಡಬೇಕಲ್ಲ! ಹೊರಗಿನಿಂದ ಬಂದ ಬೆಕ್ಕು ನಮ್ಮನೇಲಿ ಮರಿ ಹಾಕಿದೆ ಅಂದರೆ ಈ ವರ್ಷ ಶುಭಕಾರ್ಯ ಗ್ಯಾರಂಟಿ ಅಂತ ಪಟ್ಟುಹಿಡಿದು, ತಾಯಿ ಬೆಕ್ಕಿನ ಸಮೇತ ಮರಿಗಳನ್ನು ಇಲ್ಲೇ ಉಳಿಸಿಕೊಂಡಿದ್ದಲ್ಲದೆ, ಕಪ್ಪು ಬಣ್ಣದ್ದಕ್ಕೆ ಕಲ್ಲು, ಬಿಳಿಯ ಬಣ್ಣದಕ್ಕೆ ಬಿಲ್ಲು ಅಂತ ನಾಮಕರಣವನ್ನೂ ಮಾಡಿಬಿಟ್ಟರು. ಅವುಗಳನ್ನು ಸಾಕಿದ ಮೇಲೆಯೇ ಐದಾರು ಸಂಬಂಧಗಳು ಯಾವುಯಾವುದೋ ಕಾರಣಗಳಿಂದ ಮುರಿದುಹೋಗಿವೆ” ಮೂಗು ಮುರಿದೆ.

ನನ್ನ ಮಾತು ಕೇಳಿ ಕಿಸಿಕಿಸಿ ನಕ್ಕ ರಾಧಕ್ಕನ ನೋಟ ನಮ್ಮನ್ನು ಹಳ್ಳಿಮುಗ್ಗಿಯರೆಂಬಂತೆ ಅಣಕಿಸುವಂತಿತ್ತು. ಅಯ್ಯೋ! ಈ ಕಾಲದಲ್ಲೂ ನಿಮ್ಮತ್ತೆ ಇವನ್ನೆಲ್ಲ ನಂಬೋದು, ಮತ್ತೆ ನಿಮ್ಮಂಥವರನ್ನು ನಂಬಿಸೋದು. ಇರಲಿ ಬಿಡಿ ಹೆಣ್ಣಿಗೊಂದು ಗಂಡನ್ನು ದೇವರು ಸೃಷ್ಟಿಮಾಡಿಯೇ ಇಟ್ಟಿರ್ತಾನೆ. ಕಾಲ ಕೂಡಿಬರಬೇಕು. ನನ್ನನ್ನು ಸಮಾಧಾನಪಡಿಸಲೆಂದೇ ಹೇಳಿದ ಮಾತುಗಳಿವು ಎಂಬುದು ನನಗೆ ಅರ್ಥವಾಯಿತು. ಮಾತು ತಿರುಗಿಸುವಂತೆ ತಮ್ಮ ಕುಟುಂಬದಲ್ಲಿ ಎಂದೋ ಒಮ್ಮೆ ನಡೆದಿದೆ ಎನ್ನಲಾದ ಕಥೆಯನ್ನು ನನ್ನ ಮುಂದೆ ಬಿಚ್ಚಿಡಲಾರಂಭಿಸಿದರು.
.
ರಾಧಕ್ಕನ ಮನೆಯಲ್ಲಿ ಈಗಲೂ ಪೂಜೆ-ಪುನಸ್ಕಾರ, ಅಘ್ರ್ಯ-ತೀರ್ಥ ಇತ್ಯಾದಿಗಳೆಲ್ಲವೂ ಬಲು ಅಚ್ಚುಕಟ್ಟಾಗಿ ನಡೆಯುತ್ತವೆ. ಟೈಮ್‌-ಟು-ಟೈಮ್‌ ಎಂಬುದಕ್ಕಿಂತ ಅವುಗಳನ್ನು ನೋಡಿಯೇ ಗಡಿಯಾರದ ಮುಳ್ಳುಗಳು ತಮ್ಮ ಸಮಯವನ್ನು ನಿರ್ಧರಿಸಿಕೊಳ್ಳುತ್ತಾವೋ ಎಂಬಂತೆ! ದೇವರಿಗೆ ಏನಾದರೊಂದು ನೈವೇದ್ಯ ಅರ್ಪಿಸಿದ ಮೇಲೆಯೇ ಮನೆಯವರೆಲ್ಲರಿಗೂ ಚಹಾತಿಂಡಿ. ಇದು ಅವರ ಮನೆಯಲ್ಲಿ ಬಲು ಮುಂಚಿನಿಂದ ನಡೆದುಕೊಂಡು ಬರುತ್ತಿದೆ. ಅವರ ಮಾವನವರ ಕಾಲದಲ್ಲಿ ನೈವೇದ್ಯ ಸಮರ್ಪಣೆಯ ಅವರ ರಿವಾಜೂ ಬಲು ವಿಚಿತ್ರವಾಗಿತ್ತು. ಪೂಜೆಗೆ ಅಣಿಯಾಗುತ್ತಿದ್ದಂತೆ ಒಳಗೆ ಅಡುಗೆ ಕೋಣೆಯ ಮೂಲೆಯಲ್ಲಿ ಬಿದ್ದುಕೊಂಡಿರುತ್ತಿದ್ದ ಬೆಕ್ಕನ್ನು ಹಿಡಿದುಕೊಂಡು ದೇವರ ಕೋಣೆಯ ಮೂಲೆಗೆ ತಂದು ಅದರ ಮೇಲೊಂದು ಬುಟ್ಟಿ ಕೌಂಚಿಡುತ್ತಿದ್ದರಂತೆ. ಸುಮಾರು ವರ್ಷಗಳ ಕಾಲ ಇದುವೇ ಅನೂಚಾನವಾಗಿ ನಡೆದುಕೊಂಡು ಬರುತ್ತಿತ್ತಂತೆ! ಹೀಗೇಕೆ ಮಾಡುವುದು, ಇದರ ಔಚಿತ್ಯವಾದರೂ ಏನು ಎಂಬ ಪ್ರಶ್ನೆಗೆ ಇದು ನಡೆದುಕೊಂಡು ಬಂದಿದ್ದು ಎಂಬೊಂದು ಉತ್ತರ ಸಿಗುತ್ತಿತ್ತಂತೆ.

ಹೀಗೇ ಒಂದು ದಿನ ಮಾವನವರ ದೂರದ ಸಂಬಂಧಿ ಸೀತಮ್ಮತ್ತೆ ಎಂಬವರ ಆಗಮನವಾಗಿತ್ತಂತೆ. ಅವರೋ ಮಾವನವರಿಗಿಂತ ಹಿರಿಯರು. ಪೂಜೆಯ ಹೊತ್ತಲ್ಲಿ ಕೌಂಚಿಟ್ಟ ಬುಟ್ಟಿಯ ಕಡೆಗೆ ಅವರ ಗಮನ ಹೋಗಿದ್ದೇ ತಡ, “”ಏನೋ ಸುಬ್ಬು, ನೀನಿನ್ನೂ ಬುಟ್ಟಿ ಕೌಂಚಿ ಹಾಕ್ತಾ ಇದ್ದೀಯಲ್ಲೋ” ಎಂದು ಗಹಗಹಿಸಿ ನಗತೊಡಗಿದರಂತೆ. ಮನೆಯವರೆಲ್ಲ ತಮ್ಮ ತಮ್ಮ ಕೆಲಸಗಳನ್ನು ಅಲ್ಲಲ್ಲೇ ಬಿಟ್ಟು ಓಡಿಬಂದು ಸುತ್ತುವರಿಯುತ್ತಿದ್ದಂತೆ ಅವರ ಕಥಾ ಕಾಲಕ್ಷೇಪ ಆರಂಭವಾಗಿತ್ತಂತೆ. ಈ ಸುಬ್ಬು ತೀರಾ ಚಿಕ್ಕವನಿರುವಾಗ ಮನೆ ತುಂಬಾ ಬೆಕ್ಕು. ಅದಕ್ಕೇನಾದರೂ ಹೊಡೆದು, ಮನೆಯಿಂದ ಹೊರಹಾಕಿದ ಮೇಲೆ ಏನಾದರೂ ಅವಘಡ ಆಗಿಬಿಟ್ಟರೆ, ಕಾಶಿಗೆ ಹೋಗಿ ಚಿನ್ನದ ಬೆಕ್ಕು ಮಾಡಿಸಿ ಹಾಕಬೇಕು ಅಂತ ನಮ್ಮಮ್ಮ ಹೇಳ್ತಾ ಇದ್ದರು. ಹಾಗಾಗಿ ಇದ್ದಬದ್ದ ಮರಿಗಳನ್ನೆಲ್ಲ ಸಾಕಿ ಸಾಕಿ ಮನೆಮಂದಿಗಿಂತ ಅವುಗಳ ಸಂಖ್ಯೆನೇ ಜಾಸ್ತಿಯಾಗಿಬಿಟ್ಟಿತ್ತು. ತಾಯಿ ಬೆಕ್ಕಾದರೆ ತುಸು ಗದರಿಸಿದರೆ ಸುಮ್ಮನೆ ಹೋಗಿಬಿಡ್ತಾವೆ. ಈ ಮರಿಗಳಿಗೆ ಎಲ್ಲಿ ಅರ್ಥ ಆಗೋದು. ಸೀದಾ ಬಂದು ನೈವೇದ್ಯಕ್ಕೇ ಬಾಯಿಹಾಕಿ ಬಿಡೋವು. ಕೆಲವೊಮ್ಮೆ ತೆವಳಿಕೊಳ್ತಾ ಬಾಳೆ ಮೇಲೆ ಬಂದು ಬೀಳ್ಳೋವು. ನೈವೇದ್ಯ ಮೈಲಿಗೆ ಆಗಬಾರದು ಅಂತ ಇವರ ಅಪ್ಪ ಒಂದು ದೊಡ್ಡ ಬುಟ್ಟಿ ತಂದು ಆ ಮರಿಗಳನ್ನೆಲ್ಲ ಪೂಜೆ ಮುಗಿಯುವ ತನಕ ಬಚ್ಚಿಡ್ತಿದ್ದ. ಕಾಲಾಂತರದಲ್ಲಿ ಮರಿಗಳನ್ನು ಅವರಿವರಿಗೆ ರವಾನಿಸಿಬಿಡೋದು ವಾಡಿಕೆಯಾಗಿಬಿಡ್ತು. ಮರಿಗಳ ಸಂಖ್ಯೆ ನಿಯಂತ್ರಣಕ್ಕೆ ಬಂದಿತ್ತು.

ಪೂಜೆ ವೇಳೆ ಬೆಕ್ಕನ್ನು ಹಿಡಿದು ತರೋದು ಮಾತ್ರ ಹಾಗೇ ಮುಂದುವರಿದಿತ್ತು. ಎಷ್ಟರ ಮಟ್ಟಿಗೆ ಅಂದ್ರೆ, ಬೆಕ್ಕೆಲ್ಲಾದರೂ ಮರೆಯಾದರೆ ಒತ್ತಾಯಪೂರ್ವಕವಾಗಿ ಅದನ್ನು ಹಿಡಿದುಕೊಂಡು ಬಂದು ಬುಟ್ಟಿ ಅಡಿಯಲ್ಲಿಟ್ಟು ಆಮೇಲೆ ಪೂಜೆ ಶುರು ಮಾಡ್ತಿದ್ದರು. ಆ ದೊಡ್ಡ ಬೆಕ್ಕು ಅದರೊಳಗೆ ಸುಮ್ಮನೆಲ್ಲಿ ಇರಿ¤ತ್ತು. ಅದನ್ನ ಹಿಡಿದಿಟ್ಟುಕೊಳ್ಳೋದೇ ಒಂದು ರಾಮಾಯಣ ಆಗಿಬಿಡ್ತಿತ್ತು. ಅಂತೂ ಅದರ ಆಯುಷ್ಯವೂ ಮುಗೀತು. ಆ ಬೆಕ್ಕು ಸತ್ತಮೇಲೂ ಪೂಜಾಕಾರ್ಯಕ್ಕೆ ಚ್ಯುತಿ ಬರಬಾರದೆಂದು ಲಕ್ಷತ್ತಿಗೆ ತವರುಮನೆಯಿಂದ ಒಂದು ಬೆಕ್ಕಿನಮರಿ ತರಿಸಿಕೊಂಡಿದ್ದರು. ಈಗ ಆ ದೊಡ್ಡ ಬುಟ್ಟಿ ಹೋಗಿ ಚಿಕ್ಕ ಬುಟ್ಟಿ ಬಂದಿದೆ. “”ಅಲ್ವೋ ಸುಬ್ಬು, ನಿಮ್ಮ ಮನೆಯಲ್ಲಿ ಬೆಕ್ಕೇ ಇಲ್ಲ. ಪಕ್ಕದ ಮನೆಯಿಂದ ಆ ರಂಪಾಟ ಮಾಡೋ ತೆನಾಲಿರಾಮನ ಬೆಕ್ಕು ತರಿಸಿಕೊಂಡು, ಅದರ ಮೇಲೆ ಬುಟ್ಟಿ ಕೌಂಚಿಟ್ಟು ನೀನು ಅದ್ಯಾಕ್‌ ಪೂಜೆ ಮಾಡ್ತಿದ್ದಿಯೋ?” ಎಂದವರು ಕೇಳಿದಾಗಲೇ ನಮ್ಮೆದುರು ಬುಟ್ಟಿಯ ರಹಸ್ಯ ಬಯಲಾಗಿದ್ದು !

ಬಲರಾಮನ ಗೋವು ಅಂತ ಕೇಳಿದ್ದೆ. ಈ ತೆನಾಲಿರಾಮನ ಬೆಕ್ಕು ಅದೆಂಥದ್ದಪ್ಪಾ ಎಂದು ಕೇಳುವ ಮನಸ್ಸಾದರೂ, ಈ ಉಪಕಥೆಯಿಂದ ರಾಧಕ್ಕನ ಮೂಲಕಥೆಯ ಓಘಕ್ಕೆ ಧಕ್ಕೆ ತರಬಾರದೆಂದು ಸುಮ್ಮನಾದೆ.

ಇತ್ತ ನಮ್ಮ ಮನೆಯಲ್ಲಿ ಎಲ್ಲಿಂದಲೋ ಬಂದ ಬೆಕ್ಕು ಮತ್ತೂಮ್ಮೆ ಬಸಿರಾಗಿತ್ತು. ಕಲ್ಲು-ಬಿಲ್ಲುಗಳಿಗೆ ತಮ್ಮ-ತಂಗಿಯರ ಆಗಮನವಾಗುವುದರಲ್ಲಿತ್ತು. ನಮ್ಮತ್ತೆಯ ಮಾತುಗಳಿಗೆ ಕೇವಲ ಕಿವಿಗಳನ್ನಷ್ಟೇ ತೆರೆದಿಟ್ಟುಕೊಂಡರೆ, ಈ ಮನೆಯೂ ಒಂದು ದಿನ ಬೆಕ್ಕಿನ ಸಂತತಿಗಳಿಂದಲೇ ತುಂಬಿಹೋಗಿ ಮಾರ್ಜಾಲ ಮಂದಿರವೇ ಆಗಿ, ಅದರ ಮಹಿಮೆಯನ್ನು ಕೊಂಡಾಡಲು ಸಹಸ್ರ ನಾಲಿಗೆಯ ಸರ್ಪಕ್ಕೂ ಸಾಧ್ಯವಾಗದೇ ಹೋಗಬಹುದು. ಕಾಲಕೂಡಿ ಬಂದಾಗ ಅನುರೂಪನಾದವನು ನಮ್ಮ ರೂಪಾಳಿಗೆ ಎಲ್ಲಿಂದಾದರೂ ಪ್ರತ್ಯಕ್ಷನಾಗಬಹುದು. ಆದರೆ ರಾಧಕ್ಕನ ಹಿರಿಯ ತಲೆಮಾರಿನವರಂತೆ ಬುಟ್ಟಿ ಕೌಂಚಿಹಾಕಿ ಪೂಜೆ ಮಾಡುವ ಪ್ರಸಂಗ ಬರುವುದು ಬೇಡಪ್ಪ!

ನಮ್ರತಾ ಬಿ.

Advertisement

Udayavani is now on Telegram. Click here to join our channel and stay updated with the latest news.

Next