Advertisement

ಪೊದೆಗೆ ನವಜಾತ ಶಿಶು ಎಸೆತ: ಜೋಡಿ ಬಂಧನ

11:01 PM Dec 04, 2021 | Team Udayavani |

ಸಿದ್ದಾಪುರ: ಸಿದ್ದಾಪುರ- ಅಮಾಸೆಬೈಲು ಮುಖ್ಯರಸ್ತೆಯ ಮಚ್ಚಟ್ಟು ಗ್ರಾಮದ ಕಳಿನಜೆಡ್ಡು ವಾರಾಹಿ ಸೇತುವೆ ಬಳಿ ಡಿ. 1ರಂದು ಹುಟ್ಟಿ ಏಳೆಂಟು ದಿನಗಳಷ್ಟೇ ಆಗಿದ್ದ ಹೆಣ್ಣು ನವಜಾತ ಶಿಶುವನ್ನು ಎಸೆದು ಹೋದ ಜೋಡಿಯನ್ನು ಅಮಾಸೆಬೈಲು ಪೊಲೀಸರು ಡಿ. 4ರಂದು ಬಂಧಿಸಿದ್ದಾರೆ.

Advertisement

ಆರೋಪಿಗಳು ಬೈಂದೂರು ತಾಲೂಕು ಜಡ್ಕಲ್‌ ಸಮೀಪದ ಮುದೂರು ಗ್ರಾಮದ ಸತೀಶ ಪೂಜಾರಿ (43) ಮತ್ತು ರಾಧಿಕಾ (40) ದಂಪತಿಯನ್ನು ಅವರು ಕೆಲಸ ಮಾಡುತ್ತಿದ್ದ ಹೆಬ್ರಿ ಸಮೀಪದ ಕುಚ್ಚಾರು ಎಸ್ಟೇಟ್‌ನಲ್ಲಿ ಪೊಲೀಸರು ಬಂಧಿಸಿದ್ದಾರೆ.

ಕದ್ದು ಮುಚ್ಚಿ ಮದುವೆ! :

ಆರೋಪಿಗಳು ತಾವು ಕೆಲಸ ಮಾಡುವ ಸ್ಥಳದಲ್ಲಿ ಪರಸ್ಪರ ಪ್ರೀತಿಸಿ ಒಂದು ವರ್ಷದ ಹಿಂದೆ ಯಾರಿಗೂ ತಿಳಿಯದಂತೆ ದೇವಸ್ಥಾನದಲ್ಲಿ ಮದುವೆ ಮಾಡಿಕೊಂಡಿದ್ದರು ಎಂದು ಪೊಲೀಸರ ತನಿಖೆ ವೇಳೆ ತಿಳಿದುಬಂದಿದೆ. ಆರೋಪಿಗಳಿಬ್ಬರಿಗೂ ಈ ಹಿಂದೆ ಮದುವೆಯಾಗಿದ್ದು, ಇಬ್ಬರೂ ಸಂಸಾರದಿಂದ ದೂರವಾಗಿದ್ದರು. ಸತೀಶ ಪೂಜಾರಿ ಪತ್ನಿ, ಮಕ್ಕಳನ್ನು ತೊರೆದು ಹೋಗಿದ್ದ. ರಾಧಿಕಾಳ ಪತಿ ವಿಚ್ಛೇದನ ನೀಡಿದ್ದ. ಕೆಲಸ ಮಾಡುವ ಸ್ಥಳದಲ್ಲಿ ಇವರಿಬ್ಬರ ಮಧ್ಯೆ ಪ್ರೇಮಾಂಕುರವಾಗಿ ಅನಧಿಕೃತವಾಗಿ ಮದುವೆಯೂ ಆಗಿದ್ದರು. ಅನಂತರದ ದೈಹಿಕ ಸಂಪರ್ಕದಿಂದ ರಾಧಿಕಾ ಗರ್ಭಿಣಿಯಾದ್ದರು. ಮದುವೆಯಾಗಿರುವ ವಿಷಯ ಇಬ್ಬರ ಮನೆಯವರಿಗೂ ಗೊತ್ತಿರಲಿಲ್ಲ. ಈ ಮಧ್ಯೆ ರಾಧಿಕಾ ಹೆಣ್ಣು ಮಗುವಿಗೆ ಜನ್ಮವನ್ನೂ ನೀಡಿದ್ದಳು. ತಮ್ಮ ಒಳಗುಟ್ಟು ರಟ್ಟಾಗುತ್ತದೆ ಎಂದುಕೊಂಡ ಈ ಜೋಡಿ ಮಗುವನ್ನು ವಾರಾಹಿ ಸೇತುವೆಯ ಬಳಿ ಪೊದೆಗೆ ಎಸೆದು ಹೋಗಿದ್ದರು.

ಹಾಲಾಡಿಯ ಆಸ್ಪತ್ರೆಯಲ್ಲಿ ಹೆರಿಗೆ:

Advertisement

ರಾಧಿಕಾಳಿಗೆ ಹಾಲಾಡಿಯ ಖಾಸಗಿ ಆಸ್ಪತ್ರೆಯಲ್ಲಿ ಹೆರಿಗೆಯಾಗಿದ್ದು, ದಂಪತಿ ಮಗು ಬೇಡ ಎಂದು ತೀರ್ಮಾನಿಸಿ ಮಗುವನ್ನು ಕೈ ಚೀಲದಲ್ಲಿ ಹಾಕಿಕೊಂಡು ಬೈಕಿನಲ್ಲಿ ಬಂದು ಪೊದೆಗೆ ಎಸೆದು ಹೋಗಿದ್ದರು ಎನ್ನುವ ಕರುಳು ಹಿಂಡುವ ಸನ್ನಿವೇಶ ಪ್ರಾಥಮಿಕ ತನಿಖೆಯಿಂದ ಹೊರಬಿದ್ದಿದೆ. ನ. 24ಕ್ಕೆ ಹೆರಿಗೆ ಆಗಿತ್ತು. ನ. 30ಕ್ಕೆ ಆಸ್ಪತ್ರೆಯಿಂದ ಡಿಸಾcರ್ಜ್‌ ಆಗಿದ್ದು, ಡಿ. 1ರಂದು ಮಗುವನ್ನು ಚೀಲದಲ್ಲಿ ಹಾಕಿ ಬೇಲಿಗೆ ಎಸೆದಿದ್ದರು. ಸಿಸಿ ಟಿವಿ ದೃಶ್ಯಾವಳಿ, ಕೆಲವು ತಾಂತ್ರಿಕ ಸಾಕ್ಷ್ಯಗಳ ಮೂಲಕ ತನಿಖೆ ನಡೆಸಿದ್ದ ಪೊಲೀಸರು 3 ದಿನಗಳ ಒಳಗೆ ಆರೋಪಿಗಳನ್ನು ಪತ್ತೆ ಮಾಡಿದ್ದಾರೆ.

ಪೊದೆಯಲ್ಲಿ ಅಳುತ್ತಿತ್ತು ಕಂದಮ್ಮ:

ಮಚ್ಚಟ್ಟು ಗ್ರಾಮದ ಮಡಿವಾಳಕಟ್ಟು ಗೀತಾ ಅವರು ವಾರಾಹಿ ಹಾಲು ಉತ್ಪಾದಕರ ಸಂಘಕ್ಕೆ ಬರುತ್ತಿರುವಾಗ ವಾರಾಹಿ ಹೊಳೆಯ ಬಳಿ ಪೊದೆಯಲ್ಲಿ ಮಗುವಿನ ಅಳುವಿನ ಧ್ವನಿ ಕೇಳಿಸಿತ್ತು. ಅವರು ಇತರರ ಸಹಾಯ ಪಡೆದು ಮುಳ್ಳಿನ ಪೊದೆಯೊಳಗಿದ್ದ ಹೆಣ್ಣು ಮಗುವನ್ನು ರಕ್ಷಣೆ ಮಾಡಿದ್ದರು. ಪೊಲೀಸರು ಕಾನೂನು ಪ್ರಕ್ರಿಯೆಗಳನ್ನು ನಡೆಸಿದ ಬಳಿಕ ಕುಂದಾಪುರ ಸರಕಾರಿ ಆಸ್ಪತ್ರೆಗೆ ಮಗುವನ್ನು ದಾಖಲಿಸಲಾಗಿತ್ತು. ಜ್ವರದಿಂದ ಬಳಲುತ್ತಿರುವ ಮಗು ಕಳೆದ ನಾಲ್ಕು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದೆ. ಸಂಪೂರ್ಣವಾಗಿ ಮಗು ಚೇತರಿಕೆ ಕಂಡ ಮೇಲೆ ಮುಂದಿನ ಕ್ರಮ ವಹಿಸಲಾಗುತ್ತದೆ ಎಂದು ಆಸ್ಪತ್ರೆಯವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next