Advertisement

ರಸ್ತೆ ಹೊಂಡಕ್ಕೆ ಮಗು ಬಲಿ: ಅಪ್ಪನ ವಿರುದ್ಧವೇ ಕೇಸು!

11:58 AM Oct 09, 2017 | |

ಉಡುಪಿ: ಪರ್ಕಳ ರಾಷ್ಟ್ರೀಯ ಹೆದ್ದಾರಿ ಬಳಿ ಅ. 2ರಂದು ನಡೆದ ರಸ್ತೆ ಅವಘಡದಲ್ಲಿ ಮಗುವನ್ನು ಕಳೆದುಕೊಂಡವರ ವಿರುದ್ಧವೇ ಮಣಿಪಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

279ನೇ ಕಲಂ (ನಿರ್ಲಕ್ಷ್ಯದ ಚಾಲನೆ), 337ನೇ ಕಲಂ (ಇನ್ನೊಬ್ಬ ರಿಗೆ ಗಾಯ ವಾದದ್ದು), 304ಎ ಕಲಂ (ನಿರ್ಲಕ್ಷ್ಯದಿಂದ ಸಾವಿಗೆ ಕಾರಣವಾದದ್ದು) ಹೀಗೆ ಮೂರು ಪ್ರಕರಣಗಳು ದಾಖಲಾಗಿವೆ. ಉದ್ಯಾವರ ಕುತ್ಪಾಡಿ ನಿವಾಸಿಗಳಾದ ಉಮೇಶ ಮತ್ತು ಪ್ರಮೋದಾ ಅವರು ಒಂದೂವರೆ ವರ್ಷದ ಮಗು ಚಿರಾಗ್‌ನೊಂದಿಗೆ ಅ. 2ರಂದು ಪರ್ಕಳದಿಂದ ಆತ್ರಾಡಿಗೆ ತೆರಳುವಾಗ ಪರ್ಕಳ ಬಿ.ಎಂ. ಶಾಲೆ ಬಳಿ ಹೊಂಡಗುಂಡಿಗಳನ್ನು ತಪ್ಪಿಸುವಾಗ ಬೈಕ್‌ ಸ್ಕಿಡ್‌ ಆಗಿ ಬಿದ್ದರು. ಗಂಭೀರವಾಗಿ ಗಾಯಗೊಂಡ ಮಗು ಚಿರಾಗ್‌ ಅಸುನೀಗಿದ್ದ. 

ಈ ಘಟನೆಗೆ ಸಂಬಂಧಿಸಿ ಗಡಿಬಿಡಿಯಲ್ಲಿ ಪ್ರಮೋದರ ಸೋದರ ಕೃಷ್ಣ ಪೂಜಾರಿ ಮಣಿಪಾಲ ಠಾಣೆಯಲ್ಲಿ ದೂರು ಕೊಟ್ಟಿದ್ದರು. ಇವರು ದೂರು ಕೊಟ್ಟದ್ದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮೇಲೆ ಪ್ರಕರಣ ದಾಖಲಾಗಬಹುದು ಎಂದು. ಆದರೆ ಈಗ ಆದದ್ದು ಬೈಕ್‌ ಚಲಾಯಿಸುತ್ತಿದ್ದವರ ಮೇಲೆ ಪ್ರಕರಣ ದಾಖಲು. ಮಗುವನ್ನು ಕಳೆದುಕೊಂಡ ದುಃಖದಲ್ಲಿದ್ದವರಿಗೆ ಈಗ ಕೇಸಿನ ಬರೆ ಬಿದ್ದಿದೆ.

ಅಪಘಾತ ಸಂಭವಿಸಿದ ದಿನ ಉಮೇಶ ಮತ್ತು ಪ್ರಮೋದಾ ಇಬ್ಬರೂ ಬಿದ್ದು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಪ್ರಮೋದಾರ ತಾಯಿಮನೆ ಹಿರಿಯಡಕದಲ್ಲಿ ಈಗ ಇಬ್ಬರೂ ಚೇತರಿಸಿಕೊಳ್ಳುತ್ತಿದ್ದಾರೆ.

ಪ್ರತಿಭಟನೆ, ಆಕ್ರೋಶ
ಮಣಿಪಾಲದಿಂದ ಪರ್ಕಳದವರೆಗೆ ರಸ್ತೆ ತೀರಾ ಕೆಟ್ಟಿರುವ ಕುರಿತಂತೆ ಈಗಾಗಲೇ ವಿವಿಧ ಸಂಘಟನೆಗಳು, ಹೋರಾಟಗಾರರು ಪ್ರತಿಭಟನೆ ನಡೆಸಿದ್ದರೂ ಸಮರ್ಪಕವಾಗಿ ಇನ್ನೂ ದುರಸ್ತಿ ಕಾರ್ಯ ಆರಂಭವಾಗಿಲ್ಲ. ಕಳೆದ ಬೇಸಗೆಯಿಂದಲೇ ಇಲ್ಲಿನ ರಸ್ತೆಗಳು ಹಾಳಾಗಿದ್ದವು.   

Advertisement

ವ್ಯಾಪಕ ಆಕ್ರೋಶ
ಅಪಘಾತದಲ್ಲಿ ಮಗುವನ್ನು ಕಳೆದುಕೊಂಡವರ ವಿರುದ್ಧವೇ ಕೇಸು ದಾಖಲಿಸಿರುವುದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.  ರವಿವಾರ ಈ ವಿಷಯ ಬಹಿರಂಗಗೊಳ್ಳುತ್ತಿದ್ದಂತೆ ಪೊಲೀಸರ ಕ್ರಮದ ವಿರುದ್ಧ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಯಿತು. ರಸ್ತೆ ಸರಿ ಇಲ್ಲದಿರುವುದರಿಂದಲೇ ಅಪಘಾತ ಸಂಭವಿಸಿರು ವಾಗ ಹೆದ್ದಾರಿ ಇಲಾಖೆ ಅಥವಾ ಗುತ್ತಿಗೆದಾರರ ವಿರುದ್ಧ ಕೇಸು ದಾಖಲಿಸದೆ ಸಂತ್ರಸ್ತರ ವಿರುದ್ಧವೇ ಕೇಸು ದಾಖಲಿಸುವುದು ಎಷ್ಟು ಸರಿ ಎಂಬ ಪ್ರತಿಕ್ರಿಯೆಗಳು ವ್ಯಕ್ತವಾದವು.   

ಅಪಘಾತ ಸಂಭವಿಸಿದಾಗ ನಾವು ಗಡಿಬಿಡಿಯಲ್ಲಿ ದೂರು ಕೊಟ್ಟಿದ್ದೆವು. ದೂರು ಕೊಡುವಾಗ ರಾ.ಹೆ. ಅವರ ವಿರುದ್ಧ ದೂರು ದಾಖಲಾಗಬಹುದು ಎಂದು ಭಾವಿ ಸಿದ್ದೆವು. ಈಗ ಮಗುವಿನ ತಂದೆ ವಿರುದ್ಧವೇ ಪ್ರಕರಣ ದಾಖಲಿಸಿ ದ್ದಾರೆ. ನಾವು ರಾ.ಹೆ. ಅಧಿಕಾರಿಗಳ ವಿರುದ್ಧ ಇನ್ನೊಮ್ಮೆ ದೂರು ಕೊಡಲಿದ್ದೇವೆ.
ಕೃಷ್ಣ  ಪೂಜಾರಿ, (ಪ್ರಮೋದಾ ಅವರ ಸೋದರ)

ಬೈಕ್‌ ಸ್ಕಿಡ್‌ ಪ್ರಕರಣದಲ್ಲಿ ಬೈಕ್‌ ಸವಾರರ ವಿರುದ್ಧವೇ ಪ್ರಕರಣ ದಾಖಲಿಸುವುದು ಕ್ರಮ. ಇದೇ ಅಂತಿಮವಲ್ಲ. ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳನ್ನು ಕರೆಸಿ ವಿಚಾರಣೆ ನಡೆಸಿದ್ದೇವೆ. ಅವರ ತಪ್ಪಿದ್ದರೆ ಅವರ ಮೇಲೂ ಕ್ರಮ ಕೈಗೊಳ್ಳುತ್ತೇವೆ. ಈಗ ಪ್ರಕರಣ ದಾಖಲಿಸಿದ್ದು ಭಾರತೀಯ ಮೋಟಾರು ವಾಹನ ಕಾಯಿದೆ ಪ್ರಕಾರ. 
ಡಾ| ಸಂಜೀವ ಪಾಟೀಲ್‌, ಎಸ್ಪಿ
 

Advertisement

Udayavani is now on Telegram. Click here to join our channel and stay updated with the latest news.

Next