ವಿಜಯಪುರ : ಜಿಲ್ಲೆಯ ಆಲಮಟ್ಟಿ ಬಳಿಯ ತುಂಬಿ ಹರಿಯುವ ಕಾಲುವೆಯಲ್ಲಿ ಕೊಚ್ಚಿ ಹೋಗುತ್ತಿದ್ದ ಮಗುವನ್ನು ರಕ್ಷಿಸಲು ಶಿಕ್ಷಕರೊಬ್ಬರು ಪ್ರಾಣ ಲೆಕ್ಕಿಸಿದೇ ನಾಲೆಗೆ ಹಾರಿದರೆ, ಮಹಿಳೆಯೊಬ್ಬಳು ತನ್ನ ಮಾನವನ್ನು ಬದಿಗಿಟ್ಟು, ಉಟ್ಟ ಸೀರೆಯನ್ನೇ ಬಿಚ್ಚಿ ಮಗುವಿನ ಪ್ರಾಣ ರಕ್ಷಿಸಿದ ಘಟನೆ ನಡೆದಿದೆ.
ಗುರುವಾರ ಮಧ್ಯಾಹ್ನ ಅರುಣ ದೊಡಮನಿ ತನ್ನ ಅಣ್ಣ ಪ್ರವೀಣನ ಜೊತೆ ಮುಳವಾಡ – ಆಲಮಟ್ಟಿ ರಸ್ತೆಯ ಪಾರ್ವತಿಕಟ್ಟೆ ಸೇತುವೆ ಬಳಿಗೆ ಬಂದಿದ್ದಾನೆ. ಈ ಸಂದರ್ಭ ಪಕ್ಕದಲ್ಲಿ ತುಂಬಿ ಹರಿಯುತ್ತಿದ್ದ ಆಲಮಟ್ಟಿ ಎಡದಂಡೆ ಶಾಖಾ ಕಾಲುವೆಗೆ ಇಳದಿದ್ದು ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದಾನೆ. ಕೂಡಲೇ ತನ್ನ ತಮ್ಮ ನೀರಿನಲ್ಲಿ ಕೊಚ್ಚಿಕೊಂಡು ಹೋಗುವುದನ್ನು ಕಂಡ ಪ್ರವೀಣ ಚೀರಾಟ ಆರಂಭಿಸಿದ್ದಾನೆ.
ಮಗುವಿನ ಕಿರುಚಾಟ ಕೇಳಿದ ಕೂಡಲೇ ಕಾಲುವೆ ಬದಿ ರಸ್ತೆಯಲ್ಲಿ ಬೈಕ್ ಮೇಲೆ ಹೊರಟಿದ್ದ ಸ್ಥಳೀಯ ಶಿಕ್ಷಕ ಮಹೇಶ ಗಾಳಪ್ಪಗೋಳ ನೀರಿಗೆ ಧುಮುಕಿದ್ಧಾರೆ. ಇದೇ ಹಂತದಲ್ಲಿ ಹತ್ತಿರದಲ್ಲಿದ್ದ ಕುರಿಗಾಯಿ ಮಹಿಳೆಯರು, ದಾರಿ ಹೋಕರು ಸ್ಥಳದತ್ತ ಧಾವಿಸಿದ್ದಾರೆ.
ಈ ಸಂದರ್ಭ ನೇರವಾಗಿ ಮಗುವನ್ನು ಹಿಡಿದರೆ ನಿಮ್ಮನ್ನೇ ಅಪ್ಪಿಕೊಂಡು ಮುಳುಗಿಸುತ್ತಾನೆ. ಹಾಗಾಗಿ ಆತನ ಕೈಗೆ ಸಿಗುವಂತೆ ಏನಾದರೂ ಎಸೆಯಿರಿ ಎಂದು ಸಲಹೆ ನೀಡಿದ್ದಾರೆ. ಆದರೆ ಮಗುವನ್ನು ರಕ್ಷಿಸಲು ಕಾಲುವೆಗೆ ಹಾರಿದ ಶಿಕ್ಷಕನ ಬಳಿ ಯಾವುದೇ ಸಾಧನ ಇರಲಿಲ್ಲ. ಆಗ ಕಾಲುವೆಯಲ್ಲಿ ಬಟ್ಟೆ ತೊಳೆಯುತ್ತಿದ್ದ ಸಕಿನಾಬೇಗಂ ರಜಾಕಸಾಬ್ ಕೋಡೆಕಲ್ ಎಂಬಾಕೆ ಮಗುವಿನ ರಕ್ಷಣೆಗಾಗಿ ಹತ್ತಿರದಲ್ಲಿ ಯಾವುದೇ ಸಾಧನ ಸಿಗದ ಕಾರಣ ತಕ್ಷಣ ತಾನು ಉಟ್ಟಿದ್ದ ಸೀರೆಯನ್ನೇ ಬಿಚ್ಚಿ ಮಗುವಿನತ್ತ ಎಸೆದಿದ್ದಾಳೆ.
ತನ್ನ ಮಾನವನ್ನೂ ಲೆಕ್ಕಿಸದೇ ಮಗವನ್ನು ರಕ್ಷಿಸಿದ ಮಹಿಳೆ ಸಕಿನಾಬೇಗಂ ಅವರ ಮಾನವೀಯತೆಗೆ ಕೃತಜ್ಞತೆ ಸಲ್ಲಿಸಿದ ಶಿಕ್ಷಕ ಮಹೇಶ, ಕೂಡಲೇ ಪ್ರಾಥಮಿಕ ಚಿಕಿತ್ಸೆ ನೀಡಿ ನೀರು ಕುಡಿದಿದ್ದ ಮಗುವಿನ ಹೊಟ್ಟೆ ಸೇರಿದ್ದ ನೀರನ್ನು ಹೊರ ತೆಗೆದಿದ್ದಾರೆ. ಅಲ್ಲದೇ ಅಸ್ವಸ್ಥ ಮಗುವನ್ನು ಆಸ್ಪತ್ರೆಗೆ ದಾಖಲಿಸಲು ನೆರವು ನೀಡಿದ್ದಾರೆ.
ಸಾವಿನ ದವಡೆಯಲ್ಲಿದ್ದ ಮಗುವನ್ನು ರಕ್ಷಿಸಿ. ಮಾನವೀಯತೆ ಮೆರೆದ ಶಿಕ್ಷಕ ಮಹೇಶ ಹಾಗೂ ಮಗುವಿನ ಪ್ರಾಣ ರಕ್ಷಿಸಿದ ಸಕಿನಾಬೇಂ ಅವರ ಸಮಯಪ್ರಜ್ಞೆಗೆ ಅರುಣ ಪಾಲಕರು ಹಾಗೂ ಸ್ಥಳೀಯರ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.