Advertisement
ಬೇಸಿಗೆ ರಜೆಗೆ ಪರ್ಯಾಯವೆಂದರೆ ಮನೆತುಂಬ ಮುಗಿಲೆತ್ತರಕ್ಕೆ ಏಳುವ ಮಕ್ಕಳ ಗುಲ್ಲು. ನಮ್ಮ ಮನೆಯ ಮಕ್ಕಳು ಸಾಲದ್ದಕ್ಕೆ, ಬೀದಿಯುದ್ದಗಲದ ಮನೆಗಳ ಮಕ್ಕಳೆಲ್ಲ ನಮ್ಮ ಮನೆಯಲ್ಲೇ ಆಟದ ಟೆಂಟ್ ಹಾಕುವುದು ಸಂಪ್ರದಾಯ. ಮನೆಯ ಹಾಲ್ ಅನ್ನೇ ಕ್ರಿಕೆಟ್ ಅಂಗಣವಾಗಿಸಿಕೊಂಡು, ಒಪ್ಪವಾಗಿದ್ದ ಬೆಡ್ ರೂಮನ್ನು ಅವರ ಆಟದ ಅಡುಗೆ ಮನೆಯಾಗಿಸಿಕೊಂಡು, ಓದುವ ಕೊಠಡಿಯನ್ನು ತಮ್ಮ ವಿಶ್ರಾಂತಿಧಾಮ ಮಾಡಿಕೊಂಡು ಥೇಟು ಕಿಷ್ಕಿಂಧಾ ಕಾಂಡವೇ ನಮ್ಮ ಮನೆಯಲ್ಲಿ ಘಟಿಸುತ್ತಿರುವ ಹಾಗೆ ಕಾಣುತ್ತಿರುತ್ತದೆ. ನಡುನಡುವೆ ವಾಲಿಸುಗ್ರೀವರ ಕಾಳಗ ನಡೆದರೂ ದೊಡ್ಡವರ್ಯಾರೂ ಅವರ ಸಂಗ್ರಾಮ ಬಿಡಿಸುವಂತಿಲ್ಲ. ಯಾಕೆಂದರೆ, ಈ ಕ್ಷಣ ಭುಸುಗುಟ್ಟುತ್ತಾ ಜಗಳವಾಡಿ, ಮರುಕ್ಷಣದಲ್ಲಿ ಪಕ್ಕಾ ಜೀವದ ಗೆಳೆಯರಂತೆ ಪೋಸು ಕೊಡುತ್ತಾ ಬಂದರೆ ಬೆಪ್ಪುತಕ್ಕಡಿಗಳಾಗುವ ಸರದಿ ನಮ್ಮದೇ. ಅಂಥಾ ಪೇಚಾಟವೇ ಬೇಡವೆಂದು; ಏನಾದರೂ ಮಾಡಿಕೊಳ್ಳಲಿ, ಸದ್ಯ ಮೊಬೈಲ್, ಟಿವಿ, ಕಂಪ್ಯೂಟರ್‌ಗಳಿಂದ ದೂರವಿದ್ದರೆ ಸಾಕಪ್ಪಾ ಅಂದುಕೊಂಡು, ಸುಮ್ಮನಿರುತ್ತಿದ್ದೆವು. ಆದರೆ, ಮರಿಸೈನ್ಯದ ಕಿತಾಪತಿಗಳು ಜಾಸ್ತಿಯಾದಷ್ಟೂ ‘ಉಸ್ಸಪ್ಪಾ, ಒಮ್ಮೆ ಶಾಲೆ ಶುರುವಾದರೆ ಸಾಕು. ಅದೆಷ್ಟು ದಿನ ರಜೆ ಕೊಡುತ್ತಾರೋ ಈಗೀಗ’ ಅಂದುಕೊಳ್ಳುವಷ್ಟರಲ್ಲೇ ಶಾಲೆ ಪುನರಾರಂಭವಾಗಿಬಿಟ್ಟಿತು.
Related Articles
ಆದರೆ, ಒಮ್ಮೆ ಮಕ್ಕಳು ಶಾಲೆಗೆ ಹೋದರೆ ಸಾಕಪ್ಪಾ ಎಂದು ಕಾಯುತ್ತಿದ್ದ ತಾಯಿಗೆ ಏಕಾಏಕಿ ಮನಸ್ಸು ಭಾರವಾಗುತ್ತದೆ. ಅದುವರೆಗೆ ಇಲ್ಲದ ಆತಂಕ ಕಾಡುತ್ತದೆ. ಮಗುವಿಗೆ ಕೊಂಚ ನೆಗಡಿಯಾದಂತಿತ್ತಲ್ಲ, ಕರವಸ್ತ್ರ ಕೊಟ್ಟಿದ್ದೆನೋ ಇಲ್ಲವೋ, ಆಕಸ್ಮಾತ್ ಟೀಚರಿನ ಸೆರಗಿಗೇ ಮೂಗು ಒರೆಸಿದರೇನು ಗತಿ! ಮಗನಿಗಿನ್ನೂ ಕೈಯ ಬೆರಳುಗಳಲ್ಲಿ ತುತ್ತು ಮಾಡಿ ತಿನ್ನುವುದು ಗೊತ್ತಿಲ್ಲ, ಚಮಚೆ ಹಾಕಿದ್ದೆನೋ ಇಲ್ಲವೋ… ಮನೆಯಲ್ಲಿ ಒಂದೊಂದು ತುತ್ತಿಗೂ ಸತಾಯಿಸುವ ಮಗಳು ಶಾಲೆಯಲ್ಲಿ ಬೇರೆ ಮಕ್ಕಳೊಡಗೂಡಿ ತಿಂದಾಳ್ಳೋ ಇಲ್ಲವೋ, ಆಯಾ ಸಹಾಯ ಮಾಡಿಯಾಳೇನೋ..ಇತ್ಯಾದಿ ಯೋಚನೆಗಳು ತಲೆಯೊಳಗೆ ಸಿಗ್ನಲ್ ತೆರೆದ ತಕ್ಷಣದ ರಸ್ತೆಯಂತಾಗುತ್ತವೆ.
Advertisement
ನೆನಪ ತುಣುಕುಗಳು ಅಲ್ಲಲ್ಲಿ..ಇನ್ನು ಮನೆಯೊಳಗಡೆ ಬಂದರೆ, ಹಾಲ್ ತುಂಬಾ ಅವರ ಆಟಿಕೆಗಳು, ಬರೆದು ಉಳಿಸಿ ಹೋದ ಪುಸ್ತಕಗಳು, ಚೆಲ್ಲಾಡಿದ ಪೇಪರ್… ಎಲ್ಲವನ್ನೂ ಎತ್ತಿಡೋಣವೆಂದರೆ ಊಹೂಂ, ಸುತಾರಾಂ ಮನಸ್ಸು ಬಾರದು. ಆ ಕೆಲಸವಷ್ಟೇ ಅಲ್ಲ, ಯಾವ ಕೆಲಸ ಮಾಡುವುದಕ್ಕೂ ಅಮ್ಮನಿಗೆ ತೋಚುವುದಿಲ್ಲ. ಅವಳ ಜೀವನದ ಚೈತನ್ಯವೆಲ್ಲ ಶಾಲೆಗೆ ಹೋಗಿ ಕುಳಿತಿವೆಯಲ್ಲ! ಖಾಲಿಗೂಡಿನೊಳಗೆ ತಾಯಿ ಹಕ್ಕಿ ಮಾತ್ರವೇ ಉಳಿಯಬೇಕು, ಬೆಳಗಿನಿಂದ ಸಂಜೆಯವರೆಗೆ. ಇದ್ದಕ್ಕಿದ್ದಂತೆ ಶೂನ್ಯ ಭಾವವೊಂದು ಅವಳನ್ನು ಆವರಿಸಿ ಬಿಡುತ್ತದೆ. ಮನೆಯಿಂದಾಚೆಗೆ ದುಡಿಯುವ ಅಮ್ಮಂದಿರಿಗೆ ಈ ನೋವಿನ ತೀವ್ರತೆ ಕಡಿಮೆಯಿದ್ದೀತು. ಆದರೆ ಪೂರ್ಣಾವಧಿಯ ಅಮ್ಮಂದಿರ ಸಂಕಟ ಹೇಳತೀರದು. ಶಾಲೆಯ ವಾತಾವರಣಕ್ಕೆ ಮತ್ತೆ ಹೊಂದಿಕೊಳ್ಳಲು ಮಕ್ಕಳು ಕಷ್ಟ ಪಟ್ಟಂತೆ, ಮನೆಯ ಖಾಲಿತನಕ್ಕೆ ಒಡ್ಡಿಕೊಳ್ಳಲು ಅಮ್ಮನೂ ಕಷ್ಟಪಡಬೇಕಾಗುತ್ತದೆ. ಎದುರಿನ ಸೈಟಿನಲ್ಲಿ ಮನೆ ಕಟ್ಟುವ ಕೆಲಸ ನಡೆಯುತ್ತಿದ್ದರೆ ಅಲ್ಲಿಯ ಸೆಕ್ಯೂರಿಟಿಯ ಸಣ್ಣ ಮಕ್ಕಳು “ಅಮ್ಮಾ’ ಎಂದರೂ ಈ ತಾಯಿಗೆ ತನ್ನ ಮಗುವೇ ಕರೆದಂತೆ ಭ್ರಮೆ. ಎಲ್ಲಾಡಿ ಬಂದೆ ಮುದ್ದು ರಂಗಯ್ನಾ… ಎನ್ನುತ್ತ ಬಾಗಿಲತ್ತ ಓಡುವಾಗ ಅತ್ತದ್ದು, ಕರೆದದ್ದು ತನ್ನ ಮಗುವಲ್ಲ ಎಂಬ ಅರಿವಾಗುತ್ತದೆ. ಆ ಅರಿವಿನೊಂದಿಗೊಂದು ಪ್ರಶ್ನೆ, ತಾನು ಮಕ್ಕಳನ್ನು ಮಿಸ್ ಮಾಡಿಕೊಂಡಷ್ಟು ಅವರು ಮಾಡಿಕೊಂಡಾರೇ? ಕಡೆಯ ಪಕ್ಷ ಅಮ್ಮ ಒಬ್ಬಳೇ ಮನೆಯಲ್ಲಿ ಕಾಯುತ್ತಿರುತ್ತಾಳೆ ಎಂಬುದಾದರೂ ನೆನಪಾದೀತೇ? ಗೂಡಿನಿಂದ ಹೊರಗೆ ಹಾರಿದ ಮರಿಹಕ್ಕಿಗಳಿಗೆ ಹೊರಜಗತ್ತಿನ ಹೊಸತನ ಕಾಯುತ್ತಿರುತ್ತದೆ. ಗೆಳೆಯರ ಬಳಗದೊಳಗೆ ಅವರು ಕರಗಿ ಹೋಗುತ್ತಾರೆ. ಸಂಗಡಿಗರಿಲ್ಲದಂತೆ ಒಂಟಿಯಾಗುವವಳು ಅಮ್ಮನೊಬ್ಬಳೇ. ಅಪ್ಪನಿಗಾದರೂ ಆಫೀಸು, ಕೆಲಸ ಎಂಬ ನೆಪಗಳಿವೆಯಲ್ಲ ತೊಡಗಿಸಿಕೊಳ್ಳುವುದಕ್ಕೆ. ಅನ್ನ ಸೇರದು
ಪೆಟ್ರೋಲ್ ಕಡಿಮೆಯಾದ ಗಾಡಿಯ ಹಾಗೆ ಅವಳು ಕೆಲಸ ಮುಗಿಸಿಕೊಂಡು ಊಟಕ್ಕೆ ಕುಳಿತರೆ ಮತ್ತೆ ಮಕ್ಕಳ ಚಿಂತೆ. ತಾನಿಲ್ಲಿ ಬಿಸಿಬಿಸಿಯಾಗಿ ಉಣ್ಣುವಾಗ ಮಕ್ಕಳು ಮಾತ್ರ ಬೆಳಗಿನ ಅದೇ ತಿಂಡಿಯನ್ನು ಹೇಗೆ ತಿನ್ನುತ್ತಾವೋ ಏನೋ! ಛೇ, ತಾನೇ ಬುತ್ತಿ ಕೊಂಡೊಯ್ದು ಕೊಡಬಹುದಿತ್ತು; ಶಾಲೆಯವರು ಗೇಟಿನಿಂದ ಒಳಗೆ ಸೇರಿಸಿಕೊಳ್ಳುವುದೇ ಇಲ್ಲವಲ್ಲ. ಒಬ್ಬರು ಶುರು ಮಾಡಿದರೆ ಎಲ್ಲರದ್ದೂ ಅದೇ ಕತೆಯಾಗುತ್ತದೆ, ಉಸ್ತುವಾರಿ ಕಷ್ಟ ಎಂಬ ಅವರ ಮಾತೂ ಸರಿಯಷ್ಟೇ! ಖಾಲಿ ದಿನವನ್ನು ಅದು ಹೇಗೋ ದೂಡಿ ಶಾಲೆ ಬಿಡುವ ಸಮಯಕ್ಕೆ ಕಾದಿದ್ದು, ಬಸ್ಸಿನಿಂದ ಮಕ್ಕಳು ಇಳಿಯುವುದಕ್ಕಿಂತ ಹದಿನೈದು ನಿಮಿಷ ಮೊದಲೇ ಗೇಟಿನ ಬಳಿ ಹೋದಾಳು ಅಮ್ಮ. ಯುನಿಫಾರ್ಮ್ನ ಇಸ್ತ್ರಿಯೆಲ್ಲಾ ಸೊರಗಿ, ಶೂ ಕಂದುಬಣ್ಣಕ್ಕೆ ತಿರುಗಿರುತ್ತದೆ. ಮಕ್ಕಳು ಆಟವಾಡಿ ದಣಿದುದರ ಸಂಕೇತವೆಂಬಂತೆ ಮುಖವೆಲ್ಲ ಕೆಂಪಾಗಿರುತ್ತದೆ. ಬ್ಯಾಗುಗಳನ್ನು ಅಮ್ಮನ ಹೆಗಲಿಗೆ ದಾಟಿಸುತ್ತಲೇ ಶಾಲೆಯ ಸಂಭ್ರಮವನ್ನು ಪಟಪಟನೆ ಒಪ್ಪಿಸುವ ಮಕ್ಕಳು, ಹೊಟ್ಟೆಗಿಷ್ಟು ಹಾಕಿ ಮತ್ತೆ ಆಟದ ಅಂಗಳ ಸೇರಿಕೊಳ್ಳುತ್ತವೆ. ಆಟ ಮುಗಿದ ಬಳಿಕ ಅವರದೇ ಟಿ.ವಿ. ಶೋಗಳು, ಇಲ್ಲವೆಂದಾದಲ್ಲಿ ಮುಗಿಯದ ಹೋಮ್ ವರ್ಕುಗಳು, ಅದರೊಂದಿಗೆ ಒತ್ತರಿಸಿ ಬರುವ ನಿದ್ದೆ. ಒಂಟಿತನವನ್ನೇ ಹೊದ್ದು ಮಲಗುವ ತಾಯಿ ಕಾಯುತ್ತಾಳೆ, ಮಕ್ಕಳಿಗೆ ಮತ್ತೆ ರಜೆ ಸಿಗುವುದು ಎಂದು? ಅಮ್ಮನಷ್ಟೇ ಅಲ್ಲ, ಅಪ್ಪಂದಿರೂ ಇದ್ದಾರೆ
ಈ ಸಂಕಟ ಕೇವಲ ಅಮ್ಮನದ್ದು ಮಾತ್ರವಲ್ಲ. ಮಕ್ಕಳನ್ನು ಶಾಲೆಯ ಗೇಟಿನವರೆಗೂ ಬಿಟ್ಟು ಹನಿಗಣ್ಣಾಗುವ ಅಪ್ಪಂದಿರೂ ಇದ್ದಾರೆ. ಸೆಸಿಲ್ ಡೇ ಲೆವಿಸ್ ಎಂಬ ಕವಿ, ತನ್ನ ಮಗ ಬೆಳೆಯುವುದನ್ನು ನೋಡಿ ಆನಂದ ಪಡುತ್ತಾ ಹದಿನೆಂಟು ವರ್ಷಗಳ ಹಿಂದೆ ಅವನಿನ್ನೂ ಐದರ ಕಂದನಾಗಿದ್ದಾಗ ಅವನನ್ನು ಶಾಲೆಗೆ ಕಳುಹಿಸಿದ ಮೊದಲ ದಿನವನ್ನು ನೆನಪಿಸಿಕೊಳ್ಳುತ್ತಾನೆ, “ವಾಕಿಂಗ್ ಅವೇ’ ಎಂಬ ತನ್ನ ಕವನದಲ್ಲಿ. ತನ್ನ ಕಕ್ಷೆಯಿಂದ ಕಳಚಿಕೊಂಡ ಉಪಗ್ರಹವೊಂದು ಎತ್ತಲೋ ಸಾಗಿದ ಹಾಗೆ, ಸಮವಸ್ತ್ರ ಧರಿಸಿದ ತನ್ನ ಮಗ ಅದೆಷ್ಟೋ ಪುಟಾಣಿ ಸೈನಿಕರ ನಡುವೆ ಸೇರಿಕೊಂಡು ತನ್ನಿಂದ ದೂರದೂರ ನಡೆಯುವುದನ್ನು ಕಂಡ ತಂದೆಯ ಹೃದಯ ನೋವಿನಿಂದಲೋ, ಸಂತಸದಿಂದಲೋ ಉಬ್ಬುತ್ತದೆ. ಅಂಜುತ್ತ, ಅಳುಕುತ್ತ ತನ್ನ ಮಗ ಒಂದೊಂದೇ ಹೆಜ್ಜೆ ಮುಂದಿಡಬೇಕಾದರೆ ಆ ತಂದೆಗೆ ತಾಯಿಗುತ್ಛದೊಳಗಿಂದ ಬೀಜವೊಂದು ಕಳಚಿಕೊಂಡು, ಏಕಾಂಗಿಯಾಗಿ, ಮೊಳಕೆಯೊಡೆಯುವುದಕ್ಕೆ ಬೇಕಾದ ಭೂಮಿಯನ್ನು ಅರಸುತ್ತಾ ಗಾಳಿಯಲ್ಲಿ ತೇಲಿ ಹೋದಂತೆ ಭಾಸವಾಗುತ್ತದೆ. ಬೆಳೆಯಬೇಕಾದರೆ ಆ ಅಗಲಿಕೆಯೆಂಬುದು ಅನಿವಾರ್ಯವೇ! ತನ್ನ ಬದುಕಿನಲ್ಲಿ ಅದೆಷ್ಟೋ ಬಗೆಯ ಅಗಲಿಕೆಗಳನ್ನು ನೋಡಿ, ಸಹಿಸಿ ಬಂದ ತಂದೆಗೆ ಈ ಅಗಲಿಕೆಯ ನೋವನ್ನು ಸಹಿಸಲಾಗುವುದಿಲ್ಲ. ಆದರೂ ದೂರ ನಡೆಯುವ ಆ ಪುಟ್ಟಹೆಜ್ಜೆಗಳಲ್ಲಿ ಮಗನ ಸ್ವಂತಿಕೆಯೆಂಬುದು ಬೆಳೆಯಲಿದೆ, ಮತ್ತು ಹಾಗೆ ಹೋಗಗೊಡುವುದರಲ್ಲಿ ತಂದೆಯಾದವನ ಪ್ರೀತಿ ಅಡಗಿದೆಯೆಂಬುದನ್ನು ಭಗವಂತನಷ್ಟು ಚೆನ್ನಾಗಿ ಇನ್ನಾರೂ ಬರೆಯಲಾರರು ಎನ್ನುತ್ತಾನೆ ಕವಿ. ಆರತಿ ಪಟ್ರಮೆ