ಹೊಸದಿಲ್ಲಿ: ಬೀದಿ ನಾಯಿಗಳ ದಾಳಿಗೆ ಒಂದೂವರೆ ವರ್ಷದ ಹೆಣ್ಣು ಮಗುವೊಂದು ಮೃತಪಪಟ್ಟಿರುವ ಘಟನೆ ದೆಹಲಿಯ ತುಘಲಕಾಬಾದ್ ಪ್ರದೇಶದಲ್ಲಿ ನಡೆದಿದೆ.
ದಿವಂಶಿ ಮೃತ ಮಗು. ಶನಿವಾರ (ಫೆ.24 ರಂದು) ಈ ಘಟನೆ ನಡೆದಿದೆ. ಮಗು ಮನೆಯಿಂದ ಹೊರಗೆ ಬಂದಾಗ ಬೀದಿಯಲ್ಲಿನ ಮೂರು ನಾಯಿಗಳು ಮಗುವಿನ ಮೇಲೆ ಏಕಾಏಕಿ ದಾಳಿ ನಡೆಸಿ ಘಾಸಿಗೊಳಿಸಿದೆ.
ಬೀದಿನಾಯಿಗಳು ದಾಳಿ ಮಾಡಿದ ನಂತರ ಒಂದೂವರೆ ವರ್ಷದ ದಿವಂಶಿಯ ಕಾಲು ಮತ್ತು ಮುಖದ ಮೇಲೆ ಗಂಭೀರ ಗಾಯಗಳಾಗಿತ್ತು. ಪರಿಣಾಮ ಮಗುವಿಗೆ ತೀವ್ರತರದ ಗಾಯಗಳಾಗಿತ್ತು. ಮಗುವಿನ ಕಿರುಚಾಟ ಕೇಳಿ ಕುಟುಂಬಸ್ಥರು ನಾಯಿಗಳನ್ನು ಓಡಿಸಿದ್ದಾರೆ. ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಆಕೆ ಮೃತಪಟ್ಟಿದ್ದಾಳೆ ಎಂದು ವೈದ್ಯರು ಘೋಷಿಸಿದ್ದಾರೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಘಟನೆಯ ಬಳಿಕ ಸ್ಥಳೀಯ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಲವರು ಬೀದಿನಾಯಿಗಳಿಗೆ ಪ್ರತಿದಿನ ಆಹಾರವನ್ನು ನೀಡುತ್ತಾರೆ. ಇದರಿಂದ ಈ ನಾಯಿಗಳು ಹೆಚ್ಚಾಗಿ ಮನೆಯತ್ತ ಬರುತ್ತದೆ. ಈ ಹಿಂದೆ ಇದರ ಬಗ್ಗೆ ಕ್ರಮಕ್ಕೆ ಆಗ್ರಹಿಸಿದ್ದರೂ ಯಾವ ಕ್ರಮವನ್ನು ಅಧಿಕಾರಿಗಳು ಕೈಗೊಳ್ಳಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.