ಗುಂಡ್ಲುಪೇಟೆ(ಚಾಮರಾಜನಗರ): ಬಂಡೀಪುರ-ವಯನಾಡು ರಸ್ತೆಯಲ್ಲಿ ಹಗಲಲ್ಲೇ ಆನೆ ಮರಿಗೆ ದ್ವಿಚಕ್ರ ವಾಹನ ಸವಾರರು ಕೀಟಲೆ ಮಾಡಿರುವ ವಿಡಿಯೋವೊಂದು ವೈರಲ್ ಆಗಿದ್ದು, ಮಾಜಿ ಸಿಎಂ ಡಿ.ವಿ.ಸದಾನಂದಗೌಡ ಸೇರಿ ಹಲವರು ಟ್ವೀಟ್ ಮಾಡಿ ಆಕ್ರೋಶ ಹೊರ ಹಾಕಿದ್ದಾರೆ.
ಬಂಡೀಪುರ ರಾತ್ರಿ ಸಂಚಾರಕ್ಕೆ ಅವಕಾಶ ಕೊಡಬೇಕೆಂದು ಸಂಸದೆ ಪ್ರಿಯಾಂಕಾ ಗಾಂಧಿ ಒತ್ತಾಯಿಸುತ್ತಿರುವ ಸಂದರ್ಭದಲ್ಲೇ ಬಂಡೀಪುರ-ವಯನಾಡು ಮಾರ್ಗವಾಗಿ ಕೇರಳ ರಸ್ತೆಯಲ್ಲಿ ಸಂಚರಿಸುತ್ತಿರುವ ವಾಹನ ಸವಾರರು ರಸ್ತೆಯಲ್ಲಿ ಆನೆ ಮರಿಯೊಂದನ್ನು ಕಂಡು ಪರಸ್ಪರ ಮಾಹಿತಿ ವಿನಿಮಯ ಮಾಡಿಕೊಂಡಿದ್ದಾರೆ.
ನಂತರ ಎರಡು ಬೈಕ್ ಸವಾರರು ವಾಪಸ್ ಆನೆ ಮರಿ ಬಳಿ ಬಂದು ಕೀಟಲೆ ಮಾಡಿದ್ದಾರೆ. ಈ ವೇಳೆ ಆನೆ ಗಾಂಬರಿಗೊಂಡು ಸವಾರರ ಮೇಲೆರಗಲು ಮುಂದಾದಾಗ ವೇಗದಲ್ಲಿ ವಾಹನ ಚಾಲನೆ ಮಾಡಿಕೊಂಡು ತೆರಳಿದ್ದಾರೆ.
ಈ ವಿಡಿಯೋವನ್ನು ಟ್ಯಾಗ್ ಮಾಡಿ ಎಕ್ಸ್ ನಲ್ಲಿ ಟ್ವೀಟ್ ಮಾಡಿರುವ ಮಾಜಿ ಸಿಎಂ ಡಿ.ವಿ.ಸದಾನಂದಗೌಡ, ಬಂಡೀಪುರದಲ್ಲಿ ರಾತ್ರಿ ಸಂಚಾರ ನಿರ್ಬಂಧ ತೆರವುಗೊಳಿಸಲು ರಾಷ್ಟ್ರೀಯ ಕಾಂಗ್ರೆಸ್ ಮುಂದಾಗಿದೆ. ರಾತ್ರಿ ಸಂಚಾರಕ್ಕೆ ಅವಕಾಶ ಕೊಟ್ಟರೇ ಪ್ರಾಣಿಗಳಿಗೆ ತೊಂದರೆಯಾಗಲಿದೆ ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ಹಲವು ಮಂದಿ ಪುಷ್ಟಿ ನೀಡಿ ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.