ಕನಕಪುರ: ತಾಲೂಕಿನ ಹಾಲು ಉತ್ಪನ್ನ ಘಟದಲ್ಲಿ ತಯಾರಾಗುವ ಉತ್ಪನ್ನಗಳನ್ನು ವಿದೇಶಕ್ಕೆ ರಫ್ತು ಮಾಡಲು ಕೇಂದ್ರ ಸರ್ಕಾರ ಅನುಮತಿ ಕೊಟ್ಟಿದೆ ಎಂದು ಬಮೂಲ್ ಅಧ್ಯಕ್ಷ ನರಸಿಂಹಮೂರ್ತಿ ತಿಳಿಸಿದರು.
ತಾಲೂಕಿನ ಕಸಬಾ ಹೋಬಳಿಯ ಶಿವನಹಳ್ಳಿ ಬಿಳಿಯ ಹಾಲು ಉತ್ಪನ್ನ ಘಟಕ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೇಂದ್ರದ ಅಧಿಕಾರಿಗಳ ತಂಡ ತಾಲೂಕಿನ ಹಾಲು ಉತ್ಪನ್ನ ಘಟಕ್ಕೆ ಭೇಟಿ ನೀಡಿ ಹಾಲಿನ ಉತ್ಪನ್ನ ಪರಿಶೀಲಿಸಿದೆ. ಇಲ್ಲಿನ ಉತ್ಪನ್ನಗಳು ವಿದೇಶಗಳಿಗೆ ಪೂರೈಸುವ ಗುಣಮಟ್ಟ ಹೊಂದಿವೆ ಎಂದು ವರದಿ ನೀಡಿದ್ದರು ಎಂದರು.
220 ಕೋಟಿ ವೆಚ್ಚದಲ್ಲಿ ಹೆಚ್ಚುವರಿ ಘಟಕ: ಪ್ರಸ್ತುತ 19 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದ್ದು, ಮುಂದಿನ ದಿನಗಳಲ್ಲಿ 21ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುವ ನಿರೀಕ್ಷೆಯಿದೆ. ಜೂನ್, ಜುಲೈ ತಿಂಗಳಲ್ಲಿನ ಹೆಚ್ಚುವರಿ ಹಾಲನ್ನು ಪೂನ ಘಟಕದಲ್ಲಿ ಉತ್ಪನ್ನವಾಗಿ ಪರಿವರ್ತಿಸಲಾಗುತ್ತಿತ್ತು. ಸಾಗಣೆ ಮತ್ತು ಉತ್ಪನ್ನ ವೆಚ್ಚದ ಹೊರೆ ತಗ್ಗಿಸಲು ಕನಕಪುರದಲ್ಲಿ ಹೆಚ್ಚುವರಿ ಘಟಕ ನಿರ್ಮಿಸಲು ಕಾರ್ಯಕಾರಿಣಿ ಮಂಡಳಿ ಚಿಂತನೆ ಮಾಡಿತ್ತು. 220 ಕೋಟಿ ವೆಚ್ಚದಲ್ಲಿಸ 6 ಲಕ್ಷ ಲೀಟರ್ ಸಾಮರ್ಥ್ಯದ ಹಾಲನ್ನು ಪೌಡರ್ ಆಗಿ ಪರಿವರ್ತಿಸುವ ಘಟಕ ಹಾಗೂ 19 ಕೋಟಿ ರೂ. ವೆಚ್ಚದಲ್ಲಿ ಬೆಣ್ಣೆ, ಇತರೆ ಉತ್ಪನ್ನಗಳಿಗೆ ಗೋದಾಮು ನಿರ್ಮಿಸಲು ಈಗಾಗಲೇ ಡಿಪಿಆರ್ ಸಿದ್ದಪಡಿಸಿದ್ದು ಟೆಂಡರ್ ಹಂತಕ್ಕೆ ತಲುಪಿದೆ ಎಂದರು.
ಸರ್ಕಾರ ಪ್ರತಿ ಲೀಟರ್ ಹಾಲಿಗೆ 5 ರೂ.ಪ್ರೋತ್ಸಹಧನ ನೀಡುತ್ತಿದೆ. ಮಾಜಿ ಸಿಎಂ ಎಚ್ .ಡಿ.ಕುಮಾರಸ್ವಾಮಿ ತಮ್ಮ ಆಡಳಿತಾವಧಿಯಲ್ಲಿ 1ರೂ. ಹೆಚ್ಚಳ ಮಾಡುವುದಾಗಿ ನೀಡಿದ್ದ ಭರಸವೆ ಈಡೇರಲಿಲ್ಲ. ಬಿಜೆಪಿ ಸರ್ಕಾರ 1ರೂ. ಪ್ರೋತ್ಸಹಧನ ಹೆಚ್ಚಳ ಮಾಡಿದರೆ ಹೈನುಗಾರಿಕೆ ಮತ್ತಷ್ಟು ಸದೃಢ ಹಾಗೂ ಯುವಜನತೆ ಹೈನುಗಾರಿಕೆಯಲ್ಲಿ ತೊಡಗಿಸಿಕೊಳ್ಳಲು ಸಹಕಾರಿಯಾಗಲಿದೆ. ಸರ್ಕಾರ 1 ರೂ. ಪ್ರೋತ್ಸಾಹಧನ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.
ಇದನ್ನೂ ಓದಿ :ಮನೆಗೆ ಬೆಂಕಿ: ಲಕ್ಷ ರೂ. ನಗದು, ಗೃಹೋಪಯೋಗಿ ವಸ್ತು ಆಹುತಿ
ಇದೇ ವೇಳೆ ಕನಕಪುರ ಘಟಕದ ಮುಖ್ಯಸ್ಥರಾದ ಶ್ರೀನಿವಾಸ ಮೂರ್ತಿ, ಚನ್ನಕೇಶವ, ಉಮಾಮಹೇಶ್ವರ, ಮೋಹನ್ ಕುಮಾರ್, ಭಾಗ್ಯಮ್ಮ, ಮಂಜುನಾಥ್, ಲತಾ ಅವರನ್ನು ಸನ್ಮಾನಿಸಲಾಯಿತು. ಬಮೂಲ್ ವ್ಯವಸ್ಥಾಪಕ ನಿರ್ದೇಶಕ ಸ್ವಾಮಿ, ಹಿರಿಯ ನಿರ್ದೇಶಕ ರಾಜ್‌ಕುಮಾರ್ ಹಾಗೂ ಘಟಕದ ಅಧಿಕಾರಿಗಳಿದ್ದರು.