Advertisement

ಬಾಬೂಜಿ- ಅಂಬೇಡ್ಕರ್‌ ಜಯಂತಿ: ಪೂರ್ವಭಾವಿ ಸಭೆ

04:24 PM Apr 01, 2022 | Team Udayavani |

ರೋಣ: ಹಸಿರು ಕ್ರಾಂತಿಯ ಹರಿಕಾರ ಡಾ|ಬಾಬು ಜಗಜೀವನರಾಂ ಹಾಗೂ ಸಂವಿಧಾನ ಶಿಲ್ಪಿ ಡಾ|ಬಿ. ಆರ್‌.ಅಂಬೇಡ್ಕರ್‌ ಅವರ ಜಯಂತ್ಯುತ್ಸವ ಕುರಿತು ಪಟ್ಟಣದ ತಹಶೀಲ್ದಾರ್‌ ಕಾರ್ಯಲಯದಲ್ಲಿ ಗುರುವಾರ ನಡೆದ ಪೂರ್ವಭಾವಿ ಸಭೆಗೆ ಬೆರಳೆಣಿಕೆಯಷ್ಟು ಅಧಿಕಾರಿಗಳು ಹಾಜರಾದ ಹಿನ್ನೆಲೆಯಲ್ಲಿ ದಲಿತ ಮುಖಂಡರು ಬೇಸರ ವ್ಯಕ್ತಪಡಿಸಿದರು.

Advertisement

ಕೆಲ ಅಧಿಕಾರಿಗಳು ತಮ್ಮ ಕಚೇರಿ ಸಹಾಯಕರನ್ನು ಸಭೆಗೆ ಕಳುಹಿಸಿದ್ದನ್ನು ಗಮನಿಸಿದ ದಲಿತ ಮುಖಂಡರು, ಕೆಲ ಅಧಿಕಾರಿಗಳು ಮನುವಾದಿಗಳಂತೆ ವರ್ತಿಸುತ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೇ, ಸಭೆಗೆ ಗೈರಾದ ಅಧಿಕಾರಿಗಳ ಮೇಲೆ ಕ್ರಮಕ್ಕೆ ಒತ್ತಾಯಿಸಿದರು. ಸಭೆ ಆರಂಭವಾಗುತ್ತಿದಂತೆ ಪ್ರಮುಖ ಅಧಿಕಾರಿಗಳು ಗೈರಾಗಿರುವುದನ್ನು ಗಮನಿಸಿದ ದಲಿತ ಮುಖಂಡರು, ತಹಶೀಲ್ದಾರ್‌ ಜೆ.ಬಿ. ಜಕ್ಕನಗೌಡ್ರ ಅವರಿಗೆ ಗೈರಾದ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

ಈ ಹಿಂದೆ ಮಹರ್ಷಿ ವಾಲ್ಮೀಕಿ ಜಯಂತಿ ಸಭೆಗೆ ಗೈರಾದ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಿರಿ. ಆದರೆ ಯಾವ ಕ್ರಮ ಕೈಗೊಂಡಿದ್ದೀರಿ. ಎಷ್ಟು ಅಧಿಕಾರಿಗಳಿಗೆ ನೋಟಿಸ್‌ ನೀಡಿದ್ದೀರಿ ತೋರಿಸಿ ಎಂದರು. ಆಗ ತಹಶೀಲ್ದಾರ್‌ ಜೆ.ಬಿ.ಜಕ್ಕನಗೌಡ್ರ ಅವರು, ಗೈರಾದ ಅಧಿಕಾರಿಗಳಿಗೆ ಕೂಡಲೇ ಕಾರಣ ಕೇಳಿ ನೋಟಿಸ್‌ ನೀಡಿ, ಸೋಮವಾರದೊಳಗೆ ಮಾಹಿತಿ ನೀಡಬೇಕು. ಇದೆ ವೇಳೆ ತಪ್ಪು ಮಾಹಿತಿ ನೀಡಿ ಜಾರಿಕೊಳ್ಳಲು ಯತ್ನಿಸಿದ ಅಧಿಕಾರಿಗಳ ಮೇಲೆ ಕ್ರಮಕ್ಕೆ ಜಿಲ್ಲಾಧಿಕಾರಿಗಳಿಗೆ ಲಿಖೀತ ದೂರು ನೀಡಲಾಗುವುದು ಎಂದು ಭರವಸೆ ನೀಡಿದ ಬಳಿಕ ಸಭೆ ಆರಂಭವಾಯಿತು.

ಅದ್ಧೂರಿ ಜಯಂತಿಗೆ ಸಿದ್ಧತೆ: ಕಳೆದ ಮೂರು ವರ್ಷದಿಂದ ಕೊರೊನಾ ಹಿನ್ನೆಲೆಯಲ್ಲಿ ಉಭಯ ಮಹನೀಯರ ಜಯಂತಿಯನ್ನು ಅದ್ಧೂರಿಯಾಗಿ ಮಾಡಿಲ್ಲ. ಈ ಬಾರಿ ಕೊರೊನಾ ಸಮಸ್ಯೆಯಿಲ್ಲ. ಆದ್ದರಿಂದ ಅದ್ಧೂರಿ ಆಚರಣೆಗೆ ತಾಲೂಕು ಆಡಳಿತ ಸಿದ್ಧತೆ ನಡೆಸಬೇಕು. ಆಯಾ ಇಲಾಖೆ ಅಧಿಕಾರಿಗಳಿಗೆ ಒಂದೊಂದು ಜವಾಬ್ದಾರಿ ವಹಿಸಿ, ಅಚ್ಚುಕಟ್ಟಾಗಿ ಯಾವದೇ ಸಮಸ್ಯೆ ಉದ್ಭವವಾಗದಂತೆ ಅರ್ಥಪೂರ್ಣವಾಗಿ ಜಯಂತಿ ಆಚರಣೆಗೆ ಪೂರ್ವ ಸಿದ್ಧತೆ ಮಾಡಿಕೊಳ್ಳಬೇಕೆಂದು ದಲಿತ ಮುಖಂಡರು ಆಗ್ರಹಿಸಿದರು.

ತಹಶೀಲ್ದಾರ್‌ ಜೆ.ಬಿ.ಜಕ್ಕನಗೌಡ್ರ, ತಾಪಂ ಇಒ ಸಂತೋಷ ಪಾಟೀಲ ಮಾತನಾಡಿ, ಡಾ|ಬಾಬು ಜಗಜೀವನರಾಂ ಮತ್ತು ಡಾ|ಬಿ.ಆರ್‌.ಅಂಬೇಡ್ಕರ್‌ ಅವರ ಜಯಂತಿಯನ್ನು ಔಚಿತ್ಯಪೂರ್ಣವಾಗಿ ಆಚರಿಸಲು ತಾಲೂಕು ಆಡಳಿತ ಸಿದ್ಧವಿದೆ. ಈ ನಿಟ್ಟಿನಲ್ಲಿ ಎಲ್ಲರ ಸಹಕಾರ ಅತೀ ಮುಖ್ಯವಾಗಿದೆ ಎಂದರು.

Advertisement

ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ತಾಲೂಕು ಸಹಾಯಕ ನಿರ್ದೇಶಕ ಭೀಮಾಶಂಕರ ಬಿರಾದಾರ, ಡಾ.ಎಚ್‌.ಬಿ.ಹುಲಗಣ್ಣವರ, ಸಿಡಿಪಿಒ ಬಿ.ಎಂ.ಮಾಳೆಕೊಪ್ಪ, ಕೆ.ಎ.ಹಾದಿಮನಿ, ಸಹಾಯಕ ಕೃಷಿ ನಿರ್ದೇಶಕ ರವೀಂದ್ರಗೌಡ ಪಾಟೀಲ, ಪ್ರಕಾಶ ಹೊಸಳ್ಳಿ, ಮೌನೇಶ ಹಾದಿಮನಿ, ಶರಣು ಪೂಜಾರ, ಮಂಜು ನಾಗರಾಜ, ಶರಣಪ್ಪ ದೊಡ್ಡಮನಿ, ಬಸವಂತಪ್ಪ ತಳವಾರ, ದೇವೇಂದ್ರಪ್ಪ ಕೊಳ್ಳಪ್ಪನವರ, ಹನಮಂತಪ್ಪ ಪೂಜಾರ, ಪುರಸಭೆ ಸದಸ್ಯ ಸಂತೋಷ ಕಡಿವಾಲ, ವೀರಪ್ಪ ತೆಗ್ಗಿನಮನಿ, ಹೇಮಂತ ಕಡಿಯವರ, ಮುತ್ತಣ್ಣ ಜೋಗಣ್ಣವರ, ಮಜುರಪ್ಪ ಶಾಂತಗೇರಿ, ಮಲ್ಲು ಮಾದರ, ಸಲ್ಮಾ ಕಣವಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next