ಹೊಳೆಆಲೂರ: ಸಕಲ ಸಮಾಜಗಳೊಂದಿಗೆ ಅನಾದಿ ಕಾಲದಿಂದಲೂ ವಿಶ್ವಾಸದಿಂದ ಬಾಳಿಕೊಂಡು ಬಂದಿರುವ ವಿಶ್ವಕರ್ಮರು ಬದಲಾದ ಕಾಲಮಾನಕ್ಕೆ ತಕ್ಕಂತೆ ಶಿಕ್ಷಣ, ಸಂಘಟನೆ, ಹೋರಾಟದೊಂದಿಗೆ ಸರಕಾರದ ಸಕಲ ಸವಲತ್ತುಗಳನ್ನು ಪಡೆದುಕೊಂಡು ಸದೃಢರಾಗಬೇಕು ಎಂದು ರಾಜ್ಯ ವಿಶ್ವಕರ್ಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಾಬು ಪತ್ತಾರ ಸಲಹೆ ನೀಡಿದರು.
ಗ್ರಾಮದ ವಿಶ್ವಕರ್ಮ ವಿಕಾಸ ಸಂಸ್ಥೆ ಹೊಳೆಆಲೂರ, ಗಾಯತ್ರಿ ಮಹಿಳಾ ಮಂಡಳ ಹಾಗೂ ವಿಶ್ವಕರ್ಮ ತರುಣ ಸಂಘದ ಸಹಯೋಗದಲ್ಲಿ ಯಚ್ಚರೇಶ್ವರ ವಿದ್ಯಾ ಸಂಸ್ಥೆಯ ರಂಗ ಮಂಟಪದಲ್ಲಿ ದಿ.ಸಾವಿತ್ರಿಬಾಯಿ ವೀರಪ್ಪ ಪತ್ತಾರ ಅವರ ಸ್ಮರಣಾರ್ಥ ಭಾನುವಾರ ಹಮ್ಮಿಕೊಂಡಿದ್ದ ಉಚಿತ ಸಾಮೂಹಿಕ ಉಪನಯನ, ಶೋಭಾ ಯಾತ್ರೆ ಹಾಗೂ ಧಾರ್ಮಿಕ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ವಿಶ್ವಕರ್ಮ ಸಮಾಜ ರಾಮಾಯಣ, ಮಹಾಭಾರತ ಕಾಲದಿಂದಲೂ ತನ್ನ ಬುದ್ಧಿ ಶಕ್ತಿ ಮತ್ತು ಪರಸ್ಪರ ಸಹ ಬಾಳ್ವೆಯ ಚಿಂತನೆಯಿಂದ ನಾಡಿನ ಇತಿಹಾಸ, ಕಲೆ, ವಾಸ್ತು ಶಿಲ್ಪ, ಸಾಹಿತ್ಯ, ಸಂಸ್ಕೃತಿ, ಪರಂಪರೆಯಲ್ಲಿ ಸಮಾಜಕ್ಕೆ ತನ್ನದೇ ಆದ ಕೊಡುಗೆ ನೀಡುತ್ತಾ ಬಂದಿದೆ. ಆದರೂ ಇತ್ತೀಚೆಗೆ ಸಂಘಟನೆಯ ಕೊರತೆ ಎದುರಿಸುತ್ತಿದೆ. ಸಮಾಜ ಮೈಮರೆತು ಶಿಕ್ಷಣ, ಸಂಘಟನೆ, ಹೋರಾಟ ಮನೋಭಾವ ಕಳೆದುಕೊಂಡರೆ ನಾವು ಇತಿಹಾಸದ ಪುಟ ಸೇರಬೇಕಾಗುತ್ತದೆ. ಮುಂಬರುವ ದಿನಗಳಲ್ಲಿ ಮುಖ್ಯ ಮಂತ್ರಿಗಳ ಮನವೊಲಿಸಿ ಸಮಾಜದ ಶ್ರೇಯೋಭಿವೃದ್ಧಿಗೆ ಹೆಚ್ಚು ಅನುದಾನ ಪಡೆದುಕೊಂಡು ರಾಜ್ಯದ ಪ್ರತಿ ತಾಲೂಕು ಕೇಂದ್ರದಲ್ಲಿ ಕೌಶಲ್ಯ ಅಭಿವೃದ್ಧಿ ಹಾಗೂ ಮಹಿಳಾ ಸ್ವಸಹಾಯ ಸಂಘಗಳಿಗೆ ಸ್ವ ಉದ್ಯೋಗ ಕೈಗೊಳ್ಳಲು ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.
ಸಾನ್ನಿಧ್ಯ ವಹಿಸಿದ್ದ ಚಿಕ್ಕಬಳ್ಳಾಪೂರದ ಶಿವಾತ್ಮಾನಂದ ಸರಸ್ವತಿ ಸ್ವಾಮಿಗಳು ಮಾತನಾಡಿ, ವಿಜ್ಞಾನದ ಆವಿಷ್ಕಾರದ ಫಲವಾಗಿ ಜಗತ್ತು ಬಹಳಷ್ಟು ಕಿರಿದಾಗುತ್ತಿದೆ. ಆದರೆ, ನಾವು ವಿಶಾಲ ಚಿಂತನೆ ಮೈಗೂಡಿಸಿಕೊಂಡು ಸಕಲ ಸಮಾಜದ ಉತ್ತಮ ಅಂಶಗಳನ್ನು ಅಳವಡಿಸಿಕೊಂಡು ಪರಸ್ಪರ ವಿಶ್ವಾಸ, ಸಾಮರಸ್ಯದಿಂದ ಬೆಳೆಯಬೇಕಾಗಿದೆ ಎಂದು ಹೇಳಿದರು.
ಬೆಳಗ್ಗೆ 9 ಗಂಟೆಗೆ 101 ವಟುಗಳಿಗೆ ಉಚಿತ ಸಾಮೂಹಿಕ ಉಪನಯನ, ನಂತರ ಸಕಲ ವಾದ್ಯ ಮೇಳದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಶೋಭಾ ಯಾತ್ರೆ ಜರುಗಿತು.
ಕಾರ್ಯಕ್ರಮದ ಸಾನ್ನಿಧ್ಯವನ್ನು ಹೊಳೆಆಲೂರಿನ ಯಚ್ಚರೇಶ್ವರ ಶ್ರೀಗಳು, ಬಾಗಲಕೋಟೆಯ ಗುರುಲಿಂಗ ಸ್ವಾಮಿಗಳು, ನವಲಗುಂದದ ವೀರೇಂದ್ರ ಸ್ವಾಮಿಗಳು, ಮುರನಾಳದ ಜಗನ್ನಾಥ ಸ್ವಾಮಿಗಳು ವಹಿಸಿದ್ದರು. ವಿಶ್ವಕರ್ಮ ವಿಕಾಸ ಸಂಸ್ಥೆ ಅಧ್ಯಕ್ಷ ಪಾಂಡುರಂಗ ಪತ್ತಾರ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಯಚ್ಚರೇಶ್ವರ ವಿದ್ಯಾ ಸಂಸ್ಥೆಯ ಅಧ್ಯಕ್ಷ ಎ.ಎನ್.ಬಡಿಗೇರ, ನಿವೃತ್ತ ಶಿಕ್ಷಕ ಬಿ.ಆರ್.ಬಡಿಗೇರ, ರಥ ಶಿಲ್ಪಿ ಬಸವರಾಜ ಬಡಿಗೇರ, ಬೆಂಗಳೂರಿನ ಸಮಾಜದ ಮುಖಂಡ ದ್ಯಾಮಣ್ಣ ಬಡಿಗೇರ, ಬಾಗಲಕೋಟೆ ಜಿಲ್ಲೆಯ ಡಿ.ಎಂ. ಮನ್ವಾಚಾರ್ಯ, ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ರಾಜಗೋಪಾಲ ಕಡ್ಲಿಕೊಪ್ಪ, ನಿವೃತ್ತ ತಹಶೀಲ್ದಾರ್ ಕೆ.ಬಿ.ಬಡಿಗೇರ, ಬದಾಮಿ ತಾಲೂಕು ಅಧ್ಯಕ್ಷ ಪ್ರಹ್ಲಾದ ಅಕ್ಕಸಾಲಿಗರ, ಜಿಲ್ಲಾ ಮಹಿಳಾ ಮಂಡಳದ ಶಿವಲೀಲಾ ಬಡಿಗೇರ, ಸಂಘದ ಕಾರ್ಯದರ್ಶಿ ಮೌನೇಶ ಬಡಿಗೇರ, ಮಹಿಳಾ ಮಂಡಳದ ಗೌರವ ಅಧ್ಯಕ್ಷೆ ರಾಧಾ ಪತ್ತಾರ, ಅಧ್ಯಕ್ಷೆ ಭಾರತಿ ಬಡಿಗೇರ, ಕಾರ್ಯದರ್ಶಿ ಮೀನಾಕ್ಷಿ ಬಡಿಗೇರ, ಸಂತೋಷ ಬಡಿಗೇರ, ರಾಘವೇಂದ್ರ ಬಡಿಗೇರ ಉಪಸ್ಥಿತರಿದ್ದರು.