ಕನ್ನಡ ಚಿತ್ರರಂಗದಲ್ಲಿ ನಟಿಯಾಗಿ ವಿವಿಧ ಪಾತ್ರಗಳ ಮೂಲಕ ಪ್ರೇಕ್ಷಕರ ಮನಗೆದ್ದಿದ್ದ ಸುಮನ್ ನಗರ್‌ಕರ್ ಈಗ ನಿರ್ಮಾಪಕಿಯಾಗಿ ಬಡ್ತಿ ಪಡೆದುಕೊಂಡಿದ್ದಾರೆ. ಹೌದು, “ಸುಮನ್ ನಗರ್‌ಕರ್ ಪ್ರೊಡಕ್ಷನ್ಸ್’ ಹೆಸರಿನಲ್ಲಿ ತಮ್ಮದೆ ಆದ ಪ್ರೊಡಕ್ಷನ್ ಹೌಸ್ ಶುರು ಮಾಡಿರುವ ಸುಮನ್ ನಗರ್‌ಕರ್, “ಬಬ್ರೂ’ ಚಿತ್ರದ ಮೂಲಕ ನಿರ್ಮಾಪಕಿಯಾಗುತ್ತಿದ್ದಾರೆ. ಇನ್ನೊಂದು ವಿಶೇಷವೆಂದರೆ, “ಬಬ್ರೂ’ ಚಿತ್ರದ ಸಂಪೂರ್ಣ ಚಿತ್ರೀಕರಣ ಅಮೆರಿಕಾದಲ್ಲೇ ನಡೆದಿದ್ದು, ಕನ್ನಡದ ಮತ್ತು ವಿದೇಶದ ಹಲವು ಕಲಾವಿದರು ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಮುಗಿಸಿ ತೆರೆಗೆ ಬರಲು ಸಿದ್ಧತೆ ನಡೆಸುತ್ತಿರುವ “ಬಬ್ರೂ’ ಚಿತ್ರದ ಪೋಸ್ಟರ್ ಮತ್ತು ಟೀಸರ್ ಇತ್ತೀಚೆಗೆ ಬಿಡುಗಡೆಯಾಗಿದೆ. ನಟ ಯಶ್ “ಬಬ್ರೂ’ ಚಿತ್ರದ ಪೋಸ್ಟರ್ ಅನ್ನು ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು.
ಇದೇ ವೇಳೆ ಮಾತನಾಡಿದ ಯಶ್, “ಕನ್ನಡ ಚಿತ್ರರಂಗದ ಮಾರುಕಟ್ಟೆ ಅಮೆರಿಕಾದಲ್ಲಿ ಇನ್ನೂ ವಿಸ್ತರಿಸಬೇಕು ಅನ್ನೋದು “ಗಜಕೇಸರಿ’ ಚಿತ್ರದ ರಿಲೀಸ್ ವೇಳೆ ಅಲ್ಲಿಗೆ ಭೇಟಿ ನೀಡಿದಾಗ ತಿಳಿಯಿತು. ಇಲ್ಲಿನಂತೆ ಕೆಲಸದವರು ಅಲ್ಲಿ ಸಿಗುವುದಿಲ್ಲ. ಅಲ್ಲಿಗೆ ಹೋದವರು ನಾವೇ ಕೆಲಸ ಮಾಡಬೇಕಾಗುತ್ತದೆ. ಅದರಂತೆ ತಂಡದವರು ಎಲ್ಲಾವನ್ನು ನಿರ್ವಹಿಸಿರುವುದು ಹೊಸತೆನಿಸುವುದಿಲ್ಲ. “ಬಬ್ರೂ’ ಕ್ಲಿಪ್ಪಿಂಗ್ಸ್ ನೋಡಿದ್ದೇನೆ. ಚಿತ್ರತಂಡದ ಪ್ರಯತ್ನ ತುಂಬ ಚೆನ್ನಾಗಿದೆ. ಚಿತ್ರದಲ್ಲಿ ಹೊಸದೇನೊ ಕಾಣಿಸುತ್ತದೆ’ ಎಂದು ಚಿತ್ರತಂಡದ ಕಾರ್ಯವನ್ನು ಪ್ರಶಂಸಿಸಿದರು.
ನವ ನಿರ್ದೇಶಕ ಸುಜಯ್ ರಾಮಯ್ಯ “ಬಬ್ರೂ’ ಚಿತ್ರಕ್ಕೆ ಮೊದಲ ಬಾರಿಗೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ತಮ್ಮ ಚೊಚ್ಚಲ ಚಿತ್ರದ ಬಗ್ಗೆ ಮಾತನಾಡುವ ಸುಜಯ್, “ನಮ್ಮ ಚಿತ್ರದ ಸಂಪೂರ್ಣ ಚಿತ್ರೀಕರಣ ವಿದೇಶದಲ್ಲಿ ನಡೆಸಿದ ಕಾರಣ “ಬಬ್ರೂ’ ಚಿತ್ರವನ್ನು ಕನ್ನಡದ ಪ್ರಥಮ ಹಾಲಿವುಡ್ ಚಿತ್ರ ಅಂತ ಪರಿಗಣಿಸಬಹುದು. ಕೆಲವು ಚಿತ್ರಗಳಲ್ಲಿ ಕಥೆ ವಿದೇಶದಲ್ಲಿ ಶುರುವಾಗಿ ನಂತರ ಸ್ವದೇಶಕ್ಕೆ ಶಿಫ್ಟ್ ಆಗುತ್ತದೆ. ಆದರೆ ಈ ಚಿತ್ರದಲ್ಲಿ ಸಂಪೂರ್ಣ ಕಥೆ ಅಮೆರಿಕಾದಲ್ಲಿಯೇ ನಡೆಯುತ್ತದೆ. ಹಾಗಾಗಿ ಚಿತ್ರದ ಕಥೆಗೆ ತಕ್ಕಂತೆ ಅಮೆರಿಕಾ ಪರಿಸರ, ಅಲ್ಲಿನ ಸುಂದರ ತಾಣಗಳಲ್ಲಿ ಶೂಟ್ ಮಾಡಲಾಗಿದೆ. ಅಮೆರಿಕಾದಲ್ಲಿ ನಡೆಯುವ ಇಬ್ಬರು ಭಾರತೀಯರ ಜರ್ನಿ ಈ ಚಿತ್ರದಲ್ಲಿದೆ. ಅಂತಿಮವಾಗಿ ಈ ಜರ್ನಿಯಲ್ಲಿ ಏನಾಗುತ್ತದೆ, ಇಬ್ಬರೂ ತಮ್ಮ ಗುರಿಯನ್ನು ತಲುಪುತ್ತಾರಾ? ಅನ್ನೋದೆ ಚಿತ್ರದ ಕ್ಲೈಮ್ಯಾಕ್ಸ್’ ಎಂದು ಚಿತ್ರದ ಬಗ್ಗೆ ವಿವರಣೆ ನೀಡಿದರು.
ಇನ್ನು ಡಾ. ರಾಜಕುಮಾರ್ ಅಭಿನಯದ “ಬಬ್ರುವಾಹನ’ ಚಿತ್ರದ ಪ್ರೇರಣೆಯಿಂದ ನಿರ್ಮಾಪಕಿ ಸುಮನ್ ನಗರ್‌ಕರ್ ಮತ್ತು ತಂಡ ಚಿತ್ರಕ್ಕೆ “ಬಬ್ರೂ’ ಎನ್ನುವ ಹೆಸರಿಟ್ಟಿದೆಯಂತೆ. ಚಿತ್ರದ ಬಗ್ಗೆ ಮಾತನಾಡುವ ಸುಮನ್ ನಗರ್‌ಕರ್, “ಇಬ್ಬರು ಭಾರತೀಯರು ಪರಿಚಯವಾಗಿ ನಂತರ “ಬಬ್ರೂ’ ಎನ್ನುವ ಕಾರಿನಲ್ಲಿ ಮೆಕ್ಸಿಕೋದಿಂದ ಕೆನಡಾವರೆಗೆ ಪ್ರಯಾಣ ಬೆಳೆಸುತ್ತಾರೆ. ಈ ವೇಳೆ ರೈತನೊಬ್ಬ ಕಾರಿಗೆ ಸೇರಿಕೊಳ್ಳುತ್ತಾನೆ. ಕಾಕತಾಳೀಯವೆನ್ನುವಂತೆ ಆ ಕಾರು ಪೊಲೀಸರಿಗೂ, ದುರುಳರಿಗೂ ಬೇಕಾಗಿರುತ್ತದೆ. ಅದು ಏಕೆ, ಹೇಗೆ ಅನ್ನೋದೇ ಈ ಚಿತ್ರ. ಗ್ರಾಂಡ್‌ಕಾನ್ಯನ್, ಡೆತ್‌ವ್ಯಾಲಿ, ಜಿಯಾನ್, ಅವೆನ್ಯೂ ಆಫ್ ಜೈನ್ಸ್ ಮಾರ್ಗ ಮಧ್ಯೆ ಬರುವ ಸುಂದರ ತಾಣಗಳನ್ನು ಚಿತ್ರದಲ್ಲಿ ಸೆರೆ ಹಿಡಿಯಲಾಗಿದೆ. ಸದ್ಯ ಚಿತ್ರದ ಪ್ರಮೋಶನ್ ಕೆಲಸಗಳು ನಡೆಯುತ್ತಿದ್ದು, ಆದಷ್ಟು ಬೇಗ ಚಿತ್ರವನ್ನು ಪ್ರೇಕ್ಷಕರ ಮುಂದೆ ತರುವ ಯೋಚನೆಯಿದೆ’ ಎಂದರು. “ಬಬ್ರೂ’ ಚಿತ್ರದಲ್ಲಿ ಸುಮನ್ ನಗರ್‌ಕರ್, ಮಹೀ ಹೀರೇಮಠ, ರೇ ತೋಸ್ತಾಡೊ, ಸನ್ನಿ ಮೋಜ, ಗಾನಭಟ್, ಪ್ರಕೃತಿ ಕಶ್ಯಪ್ ಮೊದಲಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಚಿತ್ರಕ್ಕೆ ಸುಮುಖ-ಸುಜಯ್ ರಾಮಯ್ಯ ಛಾಯಾಗ್ರಹಣವಿದೆ. ವರುಣ್ ಶಾಸ್ತ್ರೀ ಸಂಭಾಷಣೆ ಬರೆದಿದ್ದಾರೆ. ಪೂರ್ಣಚಂದ್ರ ತೇಜಸ್ವಿ “ಬಬ್ರೂ’ ಚಿತ್ರದ ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ಸದ್ಯ ಟೀಸರ್ ಮತ್ತು ಪೋಸ್ಟರ್ ಮೂಲಕ ಹೊರಬಂದಿರುವ “ಬಬ್ರೂ’ ತೆರೆಮೇಲೆ ಹೇಗಿರಲಿದೆ ಅನ್ನೋದು ಇದೇ ವರ್ಷಾಂತ್ಯಕ್ಕೆ ಗೊತ್ತಾಗುವ ಸಾಧ್ಯತೆ ಇದೆ.