ಪಯಣದಲ್ಲಿ ಸಾಗೋ ಕಥೆಗಳೆಂದರೆ ಪ್ರೇಕ್ಷಕರಲ್ಲೊಂದು ಆಕರ್ಷಣೆ ಸದಾ ಇದ್ದೇ ಇರುತ್ತದೆ. ಬದುಕೂ ಒಂದು ಪಯಣದ ಸಾಮ್ಯತೆ ಹೊಂದಿರೋ ಅಚ್ಚರಿಯಾಗಿರುವ ಕಾರಣದಿಂದ ಇಂಥಾ ಕಥೆಗಳಿಗಾಗಿ ಪ್ರೇಕ್ಷಕರು ತಹ ತಹಿಸುತ್ತಾರೆ. ಇಂಥಾದ್ದೇ ರೋಚಕ ಪಯಣದ ಕಥೆಯನ್ನೊಳಗೊಂಡಿರುವ ಬಬ್ರೂ ಚಿತ್ರ ಇದೇ ಡಿಸೆಂಬರ್ ೬ರಂದು ರಾಜ್ಯಾದ್ಯಂತ ತೆರೆಗಾಣುತ್ತಿದೆ. ಈ ಚಿತ್ರದಲ್ಲಿ ರೋಚಕ ಕಥೆಯಿದೆ ಎಂಬ ವಿಚಾರ ಈಗಾಗಲೇ ಟ್ರೇಲರ್ ಮೂಲಕ ಪ್ರೇಕ್ಷಕರಿಗೆಲ್ಲ ಮನದಟ್ಟಾಗಿದೆ. ಒಂದೇ ದಿಕ್ಕಿನ ಇಬ್ಬರ ಪಯಣ, ಅಲ್ಲೆದುರಾಗೋ ಅನಿರೀಕ್ಷಿತ ಘಟನಾವಳಿಗಳ ಜೀವಾಳ ಅಡಗಿಸಿಟ್ಟುಕೊಂಡಿರೋ ಬಬ್ರೂ ಮತ್ತೊಂದಷ್ಟು ಬೆರಗುಗಳನ್ನು ತನ್ನೊಳಗೆ ಬಚ್ಚಿಟ್ಟುಕೊಂಡಿದ್ದಾನೆ.
ಸಜಯ್ ರಾಮಯ್ಯ ನಿರ್ದೇಶನ ಮಾಡಿರುವ ಈ ಚಿತ್ರ ಪೂರ್ತಿಯಾಗಿ ಅಮೆರಿಕದಲ್ಲಿಯೇ ಚಿತ್ರೀಕರಣಗೊಂಡಿರೋ ವಿಚಾರ ಪ್ರಧಾನ ಆಕರ್ಷಣೆಯಂತೆ ಎಲ್ಲೆಡೆ ಹರಿದಾಡುತ್ತಿದೆ. ಸಾಮಾನ್ಯವಾಗಿ ಅಮೆರಿಕದಲ್ಲಿ ಚಿತ್ರೀಕರಣ ನಡೆಸಬೇಕು, ಹಾಡುಗಳನ್ನಾದರೂ ಅಲ್ಲಿನ ವಾತಾವರಣದಲ್ಲಿ ಸೆರೆ ಹಿಡಿಯ ಬೇಕು ಎಂಬುದು ಪ್ರತೀ ಸಿನಿಮಾ ಸೃಷ್ಟಿಕರ್ತರ ಅಭಿಲಾಶೆಯಾಗಿರುತ್ತದೆ. ಒಂದು ವೇಳೆ ಅದಕ್ಕೆ ಅವಕಾಶ ಸಿಕ್ಕರೂ ಒಂದೆರಡು ಹಾಡುಗಳನ್ನು ಚಿತ್ರೀಕರಿಸಿಕೊಳ್ಳುವಷ್ಟರಲ್ಲಿಯೇ ತೃಪ್ತಿ ಪಟ್ಟುಕೊಳ್ಳಬೇಕಾಗುತ್ತದೆ. ಹಾಗಿರುವಾಗ ಬಬ್ರೂ ಅಮೆರಿಕದಲ್ಲಿಯೇ ಚಿತ್ರೀಕರಿಸಿಕೊಂಡಿದೆ ಎಂದರೆ ಸಹಜವಾಗಿಯೇ ಅದರತ್ತ ಅಚ್ಚರಿ ಮೂಡಿಕೊಳ್ಳುತ್ತದೆ.
ಇದು ಅಮೆರಿಕದಲ್ಲಿ ಚಿತ್ರೀಕರಣಗೊಂಡಿರೋದರ ಜೊತೆಗೆ ಈವರೆಗೆ ಯಾವ ಸಿನಿಮಾಗಳಲ್ಲಿಯೂ ಕಾಣಿಸಿಕೊಳ್ಳದಂಥೇ ಅಮೆರಿಕೆಯ ಪ್ರದೇಶಗಳನ್ನು ಸೆರೆಯಾಗಿಸಿಕೊಂಡಿದೆಯಂತೆ. ಇದು ಹೇಳಿ ಕೇಳಿ ಅಮೆರಿಕದಲ್ಲೇ ನೆಲೆಸಿರುವವರು ಸೇರಿ ರೂಪಿಸಿರುವ ಚಿತ್ರ. ಅವರಿಗೆಲ್ಲ ಅಲ್ಲಿನ ಪ್ರತೀ ಪ್ರದೇಶಗಳೂ ಚಿರಪರಿಚಿತ. ಬೇರೆ ಸಿನಿಮಾಗಳ ಚಿತ್ರೀಕರಣವೆಂದರೆ ಒಂದಷ್ಟು ವಿಶಿಷ್ಟ ಕಟ್ಟಡಗಳನ್ನು, ಕೆಲವೇ ಕೆಲ ಪ್ರದೇಶಗಳನ್ನು ಮಾತ್ರವೇ ಸೆರೆ ಹಿಡಿಯಲಾಗುತ್ತದೆ. ಆದರೆ ಅಮೆರಿಕದಲ್ಲಿ ಕಣ್ಮನ ತಣಿಸುವ ಬೇರೆ ಪ್ರದೇಶಗಳೂ ಇವೆ ಅನ್ನೋದು ಬಬ್ರೂ ನೋಡುವ ಪ್ರತಿಯೊಬ್ಬರಿಗೂ ಮನದಟ್ಟಾಗಲಿದೆ. ಈ ಚಿತ್ರದಲ್ಲಿ ಲೋಕೇಶ್ ಬಿ.ಎಸ್ ಅಸೋಸಿಯೇಟ್ ಡೈರೆಕ್ಟರ್ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಯುಗ ಕ್ರಿಯೇಷನ್ಸ್ ಹಾಗೂ ಸುಮನ್‌ನಗರ್‌ಕರ್ ಪೊಡ್ರಕ್ಷನ್ಸ್ ಬ್ಯಾನರಿನಡಿಯಲ್ಲಿ ಬಬ್ರೂ ನಿರ್ಮಾಣಗೊಂಡಿದೆ. ಇಲ್ಲಿ ಸುಮನ್ ನಗರ್‌ಕರ್ ಮತ್ತು ಮಹಿ ಹಿರೇಮಠ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಸನ್ನಿ ಮೋಜಾ, ರೇ ಟೊಸ್ಟಾದೋ, ಪ್ರಕೃತಿ ಕಶ್ಯಪ್, ಗಾನಾ ಭಟ್ ಮುಂತಾದವರ ತಾರಾಗಣ ಈ ಚಿತ್ರಕ್ಕಿದೆ.