Advertisement

ಬಬಿಯಾ ಸುರಕ್ಷಿತ: ಜಾಲತಾಣ ಸುದ್ದಿ ಸುಳ್ಳು

09:12 AM Jan 13, 2019 | Team Udayavani |

ಕುಂಬಳೆ : ಸರೋವರ ಕ್ಷೇತ್ರವೆಂದೇ ಪ್ರಸಿದ್ಧ್ದವಾಗಿರುವ ಜಿಲ್ಲೆಯ ಪ್ರಸಿದ್ಧ ದೇವಾಲಯವಾದ ಅನಂತಪುರ ಶ್ರೀ ಅನಂತಪದ್ಮನಾಭ ದೇವಾಲಯದ ಪ್ರಧಾನ ಆಕರ್ಷಣೆಯಾದ ‘ಬಬಿಯಾ’ ಮೊಸಳೆ ನಿಧನವಾಗಿದೆ ಎಂದು ಶುಕ್ರವಾರದಿಂದ ಸಾಮಾಜಿಕ ಜಾಲತಾಣ ಗಳಲ್ಲಿ ವ್ಯಾಪಕ ಪ್ರಮಾಣದಲ್ಲಿ ಸುದ್ದಿಗಳು ಪ್ರಸಾರವಾಗುತ್ತಿದ್ದು, ಇದು ಸುಳ್ಳು ಎಂದು ತಿಳಿದುಬಂದಿದೆ.

Advertisement

ಶ್ರೀ ಕ್ಷೇತ್ರ ಅನಂತಪುರದ ಆಡಳಿತ ಮಂಡಳಿ ನೂತನ ಅಧ್ಯಕ್ಷ ಎಂ.ವಿ. ಮಹಾಲಿಂಗೇಶ್ವರ ಭಟ್ ಅವರು ಈ ಬಗ್ಗೆ ಪ್ರಕಟನೆಯೊಂದನ್ನು ಹೊರಡಿಸಿದ್ದು, ಶ್ರೀ ಕ್ಷೇತ್ರದ ಮೊಸಳೆ ಆರೋಗ್ಯಪೂರ್ಣವಾಗಿದೆ. ವೃಥಾ ಸುಳ್ಳು ಮಾಹಿತಿಗಳನ್ನು ಆಧುನಿಕ ಮಾಧ್ಯಮಗಳ ಮೂಲಕ ಹಬ್ಬಿಸಿ ಭಕ್ತರ ಭಾವನೆಗಳನ್ನು ಗೊಂದಲಗೊಳಿಸುವ ಹುನ್ನಾರ ಸುಳ್ಳು ಮಾಹಿತಿಯ ಹಿಂದೆ ಅಡಗಿದೆ. ಈ ಬಗ್ಗೆ ಸೈಬರ್‌ ಕ್ರೈಂ ವಿಭಾಗಕ್ಕೆ ದೂರು ದಾಖಲಿಸಲಾಗುವುದೆಂದು ತಿಳಿಸಿದ್ದಾರೆ.

ಜಾಲ ತಾಣದ ಸುಳ್ಳು ಪ್ರಸಾರಕರು
ಇತ್ತೀಚೆಗೆ ಸಾಮಾಜಿಕ ಜಾಲತಾಣಗಳ ಮೂಲಕ ಕಪೋಲಕಲ್ಪಿತ ಸುದ್ದಿಗಳನ್ನು ಪ್ರಸಾರಗೊಳಿಸುವ ಹುಚ್ಚು ತೀವ್ರ ಸ್ವರೂಪ ಪಡೆಯುತ್ತಿರುವುದು ಜನಸಾಮಾನ್ಯರ ಭೀತಿಗೆ ಕಾರಣವಾಗಿದೆ. ಉನ್ನತ ತಂತ್ರಜ್ಞಾನ ಆಧಾರಿತ ಇಂದಿನ ಸ್ಮಾರ್ಟ್‌ ಫೋನ್‌ ಯುಗದಲ್ಲಿ ಬೇಕಾದಂತೆ ಬೇಕಾದಲ್ಲಿ ಮನಸ್ಸಿನೊಳಗೆ ಬಂದಿರುವುದನ್ನು ಹಂಚುವ ಹುಚ್ಚು ಮನಸ್ಸುಗಳಿಂದ ತೊಂದರೆಗಳಾಗುತ್ತಿರುವುದು ಸಾಮಾಜಿಕ ಅಸಂತುಷ್ಟಿಗೆ ಕಾರಣವಾಗುತ್ತಿದೆ. ಸುದ್ದಿ, ಸುದ್ದಿಯ ಮಹತ್ವ, ಪ್ರಸಾರಗೊಳಿಸುವ ಕನಿಷ್ಠ ಅರಿವುಗಳಿಲ್ಲದ ಯುವ ಸಮೂಹ ಏನನ್ನೋ ಸಾಧಿಸುವ ಛಲವೆಂಬಂತೆ ಜಾಲ ತಾಣಗಳ ದುರುಪಯೋಗದಲ್ಲಿ ನಿರತವಾಗಿರುವುದು ಸೈಬರ್‌ ಕ್ರೈಂ ವಿಭಾಗದ ನಿದ್ದೆಗೆಡಿಸುತ್ತಿದೆ. ಈ ನಿಟ್ಟಿನಲ್ಲಿ ಸೈಬರ್‌ ಕ್ರೈಂ ವಿಭಾಗ ವ್ಯಾಪಕ ಪ್ರಮಾಣದ ಕಾನೂನು ಕಟ್ಟಳೆಗಳ ನಿರ್ವಹಣೆಗೆ ಮುಂದಾಗಿದೆ. ಹೊಸ ತಲೆಮಾರು ಜಾಗೃತವಾದಲ್ಲಿ ಭವಿಷ್ಯ ಸುಲಲಿತವಾದೀತು ಎಂಬುದಾಗಿ ಸೈಬರ್‌ ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next