ಬೆಂಗಳೂರು: ಬಿಜೆಪಿ ಆಡಳಿತ ನಡೆಸುತ್ತಿರುವ ಕೇಂದ್ರದಲ್ಲಿ ಹಾಗೂ ವಿವಿಧ ರಾಜ್ಯಗಳಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಆದರೆ, ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರ ಉತ್ತಮ ಆಡಳಿತ ನೀಡಿದ್ದು, ಸ್ವತ್ಛ ಆಡಳಿತದಲ್ಲಿ ಕರ್ನಾಟಕ ಇಡೀ ದೇಶದಲ್ಲಿ ಮೇಲ್ಪಂಕ್ತಿಯಲ್ಲಿದೆ ಎಂದು ಉತ್ತರ ಪ್ರದೇಶದ ಕಾಂಗ್ರೆಸ್ ಅಧ್ಯಕ್ಷ, ಸಂಸದ ರಾಜ್ ಬಬ್ಬರ್ ಹೇಳಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದ ಶೈಕ್ಷಣಿಕ, ಸಾಮಾಜಿಕ ವ್ಯವಸ್ಥೆ ಉತ್ತಮವಾಗಿದೆ. ಯುವ ಜನಾಂಗ ಶಾಂತ ಮತ್ತು ಸಮಚಿತ್ತವಾಗಿದೆ. ಕರ್ನಾಟಕದ ಈ ವಾತಾವರಣ ನೋಡಿದರೆ,ಸೆಲ್ಯೂಟ್ ಹೊಡೆಯಬೇಕೆನಿಸುತ್ತದೆ. ರಾಜ್ಯದ ಈ ಉತ್ತಮ ಸ್ಥಿತಿಗೆ ಸಿದ್ದರಾಮಯ್ಯನವರ ಆಡಳಿತ ಕಾರಣ ಎಂದು ಶ್ಲಾ ಸಿದರು.
ಇದೇ ವೇಳೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ವಿರುದ್ಧ ವಾಗ್ಧಾಳಿ ನಡೆಸಿದ ರಾಜ್‌ಬಬ್ಬರ್, ಉತ್ತರ ಪ್ರದೇಶ ಭ್ರಷ್ಟಾಚಾರದ ಕೂಪವಾಗಿದೆ. ಮುಖ್ಯಮಂತ್ರಿಯಾಗಿ ಅವರು ಹೇಳುವುದೆಲ್ಲ ಸುಳ್ಳು. ಭ್ರಷ್ಟಾಚಾರ ಮೆತ್ತಿಕೊಂಡ ಯಡ್ಡಿ-ರೆಡ್ಡಿ ಜೋಡಿ ಮತ್ತೆ ಒಂದಾಗಿದೆ. ಬಿಜೆಪಿಯವರದ್ದು ಎರಡು ನಾಲಿಗೆ, ಅವರ ಮಾತು ಮತ್ತು ಕೃತಿಯಲ್ಲಿ ಸಾಮ್ಯತೆ ಇರುವುದಿಲ್ಲ ಎಂದರು.
ಅಸ್ಸಾಂ ಮಾಜಿ ಮುಖ್ಯಮಂತ್ರಿ ತರುಣ್ ಗೊಗೋಯ್ ಮಾತನಾಡಿ, ಬಿಜೆಪಿ ಅಭಿವೃದ್ಧಿಯ ವಿರೋಧಿ. ಕಾಂಗ್ರೆಸ್‌ನಿಂದ ಮಾತ್ರ ಅಭಿವೃದ್ಧಿ ಸಾಧ್ಯ. ಬಿಜೆಪಿ ಮತ್ತು ಆರೆಸ್ಸೆಸ್ ದೇಶದಲ್ಲಿ ಒಡೆದ ಆಳುವ ನೀತಿ ಅನುಸರಿಸುತ್ತದೆ. ಇಂದು ಇಡೀ ದೇಶ ಸಂಕೀರ್ಣ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಸಂವಿಧಾನ ಮತ್ತು ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಎರಡು ಕ್ಷೇತ್ರಗಳಿಂದ ಸ್ಪರ್ಧಿಸುತ್ತಿರುವುದನ್ನು ನಾನು ಸ್ವಾಗತಿಸುತ್ತೇನೆ. ಮುಖ್ಯಮಂತ್ರಿ ಒಂದು ಕ್ಷೇತ್ರಕ್ಕೆ ಸಿಮೀತರಲ್ಲ, ಅವರು ಇಡೀ ರಾಜ್ಯಕ್ಕೆ ಸೇರಿದವರು. ಜನರ ಪ್ರೀತಿ, ವಿಶ್ವಾಸ ಮತ್ತು ಒತ್ತಾಯ ಅವರನ್ನು ಎರಡು ಕ್ಷೇತ್ರಗಳಿಂದ ಸ್ಪರ್ಧಿಸುವಂತೆ ಮಾಡಿದೆ. ಜನರ ಈ ಪ್ರೀತಿ, ವಿಶ್ವಾಸವೇ ಮತ್ತೂಮ್ಮೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುತ್ತದೆ.
-ರಾಜ್ ಬಬ್ಬರ್, ಕಾಂಗ್ರೆಸ್ ಸಂಸದ