ಹಿರೇಬಾಗೇವಾಡಿ : ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ರೈತ ನಾಯಕ, ಕೇಂದ್ರ ಮಾಜಿ ಸಚಿವ ಬಾಬಾಗೌಡ ಪಾಟೀಲ ಅವರ ಚಿಕ್ಕಬಾಗೇವಾಡಿ ನಿವಾಸಕ್ಕೆ ತೆರಳಿ ಚರ್ಚೆ ನಡೆಸಿ ಕಾಂಗ್ರೆಸ್ ಬೆಂಬಲಿಸುವಂತೆ ಮನವಿ ಮಾಡಿದರು.
ಭೇಟಿ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಡಿ.ಕೆ, ಶಿವಕುಮಾರ, ಕೇಂದ್ರ ಮಾಜಿ ಸಚಿವ, ರೈತ ಹೋರಾಟಗಾರ ಬಾಬಾಗೌಡ ಪಾಟೀಲ ಅವರನ್ನು ಭೇಟಿ ಮಾಡಲು ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ ವರಿಷ್ಠರು ಹೇಳಿದ್ದರು. ಹೀಗಾಗಿ ಅವರನ್ನು ಭೇಟಿ ಮಾಡಿದ್ದೇವೆ ಎಂದರು.
ರಾಷ್ಟ್ರದಲ್ಲಿ ರೈತರ ವಿರೋಧ ನೀತಿ ತಂದಿದ್ದಾರೆ. ಕೊರೊನಾ ಸಂದರ್ಭದಲ್ಲಿ ಬಿಜೆಪಿ ರೈತರ ಕೈ ಹಿಡಿದಿಲ್ಲ. ಮೂರು ಕ್ಷೇತ್ರದಲ್ಲಿ ನಡೆಯುತ್ತಿರುವ ಉಪಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಉತ್ತರ ನೀಡಲು ಜನರು ಸಜ್ಜಾಗಿದ್ದಾರೆ. ಕಾಂಗ್ರೆಸ್‌ಗೆ ಬೆಂಬಲ ನೀಡುವಂತೆ ರೈತ ಹೋರಾಟಗಾರರಿಗೆ ಮನವಿ ಮಾಡಿದ್ದೇನೆ ಎಂದು ಹೇಳಿದರು.
ರೈತರ ಹೋರಾಟ ವಿಫಲ ಆಗಬಾರದು. ಫಲ ಸಿಗಬೇಕು ಹೀಗಾಗಿ ಅವರ ಹೋರಾಟಕ್ಕೆ ಬೆಂಬಲ ನೀಡಿದ್ದೇವೆ. ನಮಗೂ ಬೆಂಬಲ ನೀಡಿ ಅಂತ ಕೇಳಿದ್ದೇನೆ ಎಂದರು. ಬಾಬಾಗೌಡ ಪಾಟೀಲ ಮಾತನಾಡಿ, ಬಿಜೆಪಿಯನ್ನು ಮನೆಗೆ ಕಳುಹಿಸಬೇಕು. ನಾವೆಲ್ಲರೂ ಒಂದುಗೂಡಬೇಕು. ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ ನೀಡುವ ಕುರಿತು ರೈತರ ಜೊತೆಗೆ ಸಭೆ ಮಾಡಿ ನಿರ್ಧರಿಸಲಾಗುವುದು ಎಂದು ಹೇಳಿದರು.
ಕೇಂದ್ರದ ಮಾಜಿ ಸಚಿವ ಕೆ.ಎಚ್ ಮುನಿಯಪ್ಪ, ಕಾಂಗ್ರೆಸ್ ಕಿಸಾನ್ ಘಟಕದ ರಾಜ್ಯಾಧ್ಯಕ್ಷ ಸಚಿನ ಮೀಗಾ ಉಪಸ್ಥಿತರಿದ್ದರು.