ಮುಂಬೈ: ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ದಿಕ್ ಅವರ ಪುತ್ರ ಝೀಶಾನ್ ಸಿದ್ದಿಕಿ ಅವರು ಶುಕ್ರವಾರ(ಅ.25) ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಬಣವನ್ನು ಸೇರ್ಪಡೆಗೊಂಡಿದ್ದಾರೆ.
ಅಜಿತ್ ಪವಾರ್ ಮತ್ತು ಸುನಿಲ್ ತಟ್ಕರೆ ಸಮ್ಮುಖದಲ್ಲಿ ಝೀಶಾನ್ ಎನ್‌ಸಿಪಿಗೆ ಸೇರ್ಪಡೆಗೊಂಡರು. ಇದರೊಂದಿಗೆ ವಿಧಾನಸಭೆ ಚುನಾವಣೆಗೂ ಮುನ್ನ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಗೆ ದೊಡ್ಡ ಹೊಡೆತ ಬಿದ್ದಂತಾಗಿದೆ.
ಕಳೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ ಆರೋಪದ ಮೇಲೆ ಸಿದ್ದಿಕಿ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಗಿತ್ತು ಆದರೆ ಈ ಆರೋಪವನ್ನು ಝೀಶಾನ್ ತಳ್ಳಿಹಾಕಿದ್ದರು, ಇದೀಗ ಎನ್‌ಸಿಪಿ ಗೆ ಸೇರ್ಪಡೆಗೊಂಡ ಝೀಶಾನ್ ಅವರಿಗೆ ಬಾಂದ್ರಾ ಪೂರ್ವ ಕ್ಷೇತ್ರದಿಂದ ಟಿಕೆಟ್ ನೀಡಿದೆ.
ಈ ಕುರಿತು ಹೇಳಿಕೆ ನೀಡಿದ ಝೀಶಾನ್ ‘ಇದು ನನಗೆ ಮತ್ತು ನನ್ನ ಕುಟುಂಬಕ್ಕೆ ಭಾವನಾತ್ಮಕ ದಿನವಾಗಿದೆ. ಈ ಕಷ್ಟದ ಸಮಯದಲ್ಲಿ ನನ್ನ ಮೇಲೆ ನಂಬಿಕೆ ಇಟ್ಟಿದ್ದಕ್ಕಾಗಿ ಅಜಿತ್ ಪವಾರ್, ಪ್ರಫುಲ್ ಪಟೇಲ್, ಸುನಿಲ್ ತಟ್ಕರೆ ಅವರಿಗೆ ನಾನು ಕೃತಜ್ಞನಾಗಿದ್ದೇನೆ. ನಾನು ಬಾಂದ್ರಾ ಪೂರ್ವದಿಂದ ನಾಮನಿರ್ದೇಶನಗೊಂಡಿದ್ದೇನೆ, ಎಲ್ಲ ಜನರ ಪ್ರೀತಿ ಮತ್ತು ಬೆಂಬಲದೊಂದಿಗೆ ನಾನು ಖಂಡಿತವಾಗಿಯೂ ವಂಡ್ರೆ ಪೂರ್ವವನ್ನು ಗೆಲ್ಲುತ್ತೇನೆ ಎಂದು ನನಗೆ ಖಾತ್ರಿಯಿದೆ, ”ಎಂದು ಅವರು ಹೇಳಿದರು.