ಬೆಂಗಳೂರು: ಚಿಕ್ಕಮಗಳೂರು ಜಿಲ್ಲೆಯ ವಿವಾದಿತ ಬಾಬಾ ಬುಡನ್‌ಗಿರಿಯ ದತ್ತಾತ್ರೇಯ ಪೀಠದಲ್ಲಿ ಹಿಂದು ಹಾಗೂ ಇಸ್ಲಾಂ ಧರ್ಮದ ಪದ್ಧತಿಯಂತೆ ಪೂಜಾ ವಿಧಿ ವಿಧಾನ ನೆರವೇರಿಸಲು ಎರಡೂ ಕೋಮಿನ ಅರ್ಚಕರನ್ನು ನೇಮಿಸುವ ಸಾಧ್ಯಸಾಧ್ಯತೆಗಳ ಕುರಿತು ಸರ್ಕಾರದೊಂದಿಗೆ ಚರ್ಚಿಸಿ ಮಾಹಿತಿ ನೀಡುವಂತೆ ಹೆಚ್ಚುವರಿ ಅಡ್ವೋಕೇಟ್ ಜನರಲ್ ಅವರಿಗೆ ಶುಕ್ರವಾರ ಹೈಕೋರ್ಟ್ ಮೌಖೀಕವಾಗಿ ಸೂಚನೆ ನೀಡಿತು.
ದತ್ತಾತ್ರೇಯ ಪೀಠದ ಪೂಜಾ ವಿಧಾನ ನೆರವೇರಿಸಲು ಮುಸ್ಲಿಂ ಮೌಲ್ವಿಯಾದ ಸೈಯದ್ ಗೌಸ್ ಮೊಹಿದ್ದೀನ್ ಅವರನ್ನು ನೇಮಿಸಿ ಧಾರ್ಮಿಕ ದತ್ತಿ ಇಲಾಖೆ ಆಯುಕ್ತರು ಮಾರ್ಚ್ 19ರಂದು ಹೊರಡಿಸಿದ್ದ ಆದೇಶ ಪ್ರಶ್ನಿಸಿ ಶ್ರೀಗುರು ದತ್ತಾತ್ರೇಯ ಪೀಠ ದೇವಸ್ಥಾನ ಸಂವಧìನಾ ಸಮಿತಿ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಬಿ.ವಿ. ನಾಗರತ್ನ ಅವರಿದ್ದ ಏಕಸದಸ್ಯ ಪೀಠ, ಕೋಮು ಸೌಹಾರ್ದತೆ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಎರಡೂ ಧರ್ಮಗಳ ಪದ್ದತಿಯಂತೆ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಲು ಉಭಯ ಕೋಮಿನವರನ್ನು ನೇಮಿಸುವ ಸಾಧ್ಯತೆಗಳ ಬಗ್ಗೆ ಸರ್ಕಾರದೊಂದಿಗೆ ಚರ್ಚಿಸಿ ಮಾಹಿತಿ ನೀಡುವಂತೆ ಹೆಚ್ಚುವರಿ ಅಡ್ವೋಕೇಟ್ ಜನರಲ್ ದಿನೇಶ್‌ರಾವ್ ಅವರಿಗೆ ಸೂಚಿಸಿ ಸೆ.26ಕ್ಕೆ ವಿಚಾರಣೆ ಮುಂದೂಡಿತು.
ಶುಕ್ರವಾರ ಅರ್ಜಿ ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಜಗದೀಶ್ ಬಾಳಿಗ ವಾದಿಸಿ, ದತ್ತಪೀಠದಲ್ಲಿ ಪೂಜಾ ವಿಧಿ ವಿಧಾನ ನೆರವೇರಿಸಲು ಮೌಲ್ವಿ ಸೈಯದ್ ಗೌಸ್ ಮೊಹಿದ್ದೀನ್ ಅವರನ್ನು ಸರ್ಕಾರ ನೇಮಿಸಿದೆ. ಅವರೇ ಹಿಂದು ಪೂಜಾ ವಿಧಾನಗಳನ್ನು ನೇರವೇರಿಸುವಂತಾಗಿದೆ. ತಮ್ಮ ಪದ್ಧತಿಯಂತೆ ಪೂಜೆ ಮಾಡುವ ಹಕ್ಕು ಹಿಂದು ಧರ್ಮದವರು ಹೊಂದಿದ್ದಾರೆ. ಹೀಗಾಗಿ ಹಿಂದು ಅರ್ಚಕರನ್ನು ನೇಮಿಸಲು ಕೋರಿದ ಮನವಿಯನ್ನು ಸರ್ಕಾರ ಪರಿಗಣಿಸಿಲ್ಲ ಎಂದು ದೂರಿದರು.ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳು, ಸರ್ಕಾರದ ಆದೇಶವು ಒಂದು ಕೋಮಿನವರ ಪರವಾಗಿದೆ ಎಂಬುದು ಮೇಲ್ನೋಟಕ್ಕೆ ತಿಳಿಯಲಿದೆ. ಸರ್ಕಾರ ನೇಮಿಸಿರುವ ವ್ಯಕ್ತಿಯೇ, ದತ್ತಪೀಠಕ್ಕೆ ಭೇಟಿ ನೀಡುವ ಎರಡು ವಿಭಿನ್ನ ಕೋಮಿನವರಿಗೆ ಪೂಜಾ ವಿಧಾನ ನೆರೆವೇರಿಸಿಕೊಡುತ್ತಾರೆ ಎಂಬುದಾಗಿ ಆ ಆದೇಶದಿಂದ ತಿಳಿಯಲಿದೆ. ಇದು ಸಮಂಜಸವಲ್ಲ ಹಾಗೂ ಇದು ಕೋಮು ಸೌಹಾರ್ದತೆಗೆ ಧಕ್ಕೆ ತರುವಂತಿದೆ ಎಂದರು.
ಅಲ್ಲದೆ, ದತ್ತಪೀಠದಲ್ಲಿ ಕೋಮು ಸೌಹಾರ್ದತೆ ಮೂಡಿಸುವ ಅಗತ್ಯವಿದೆ. ಇದೇ ಉದ್ದೇಶವನ್ನು ಸರ್ಕಾರವೂ ಹೊಂದಿದ್ದರೆ, ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗದಿರಲು ಸರ್ಕಾರವು ತನ್ನ ಹಿಂದಿನ ಆದೇಶ ಮಾರ್ಪಡಿಸಲು ಸಾಧ್ಯವಿದೆಯೇ? ಎರಡು ಕೋಮುಗಳ ಪದ್ಧತಿಯ ಪೂಜಾ ವಿಧಿ ವಿಧಾನ ನೆರೆವೇರಿಸಿಕೊಡಲು ಎರಡೂ ಕೋಮಿಗೆ ಸೇರಿದವರನ್ನು ನೇಮಿಸುವ ಸಾಧ್ಯತೆ ಬಗ್ಗೆ ಪರಿಶೀಲಿಸಿ ಮಾರ್ಗೋಪಾಯವನ್ನು ಸರ್ಕಾರವೇ ಕಂಡುಹಿಡಿಯಬೇಕು. ಈ ಬಗ್ಗೆ ಸರ್ಕಾರದೊಂದಿಗೆ ಚರ್ಚಿಸಿ ಮಾಹಿತಿ ಪಡೆದು ತಿಳಿಸುವಂತೆ ಹೆಚ್ಚುವರಿ ಅಡ್ವೋಕೇಟ್ ಜನರಲ್‌ಗೆ ತಿಳಿಸಿದರು.