ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ನಡುವೆಯೂ ಸಿಎಂ ಬದಲಾವಣೆ ಚರ್ಚೆ ನಡೆಯುತ್ತಲೇ ಇದೆ. ಸಚಿವ ಸಿ.ಪಿ.ಯೋಗೇಶ್ವರ್ ದೆಹಲಿ ಭೇಟಿ ಬಳಿಕ ಚರ್ಚೆ ಮತ್ತೆ ಜೋರಾಗಿದ್ದು, ಈ ಮಧ್ಯೆ ಸಿಎಂ ಯಡಿಯೂರಪ್ಪ ಪುತ್ರ, ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ದೆಹಲಿಗೆ ತೆರಳಿದ್ದಾರೆ
ವಿಜಯೇಂದ್ರ ದೆಹಲಿ ಭೇಟಿ ಭಾರಿ ಕುತೂಹಲಕ್ಕೆ ಕಾರಣವಾಗಿದೆ. ರಾಜಕೀಯ ಚಟುವಟಿಕೆಯಿಲ್ಲ, ಬೇರೆ ಕಾರಣಕ್ಕೆ ಬಂದಿದ್ದೇನೆ ಎಂದು ವಿಜಯೇಂದ್ರ ಹೇಳಿದರೂ, ಚರ್ಚೆಗಳು ಮಾತ್ರ ಆರಂಭವಾಗಿದೆ.
ಕೆಲ ದಿನಗಳ ಹಿಂದೆ ದೆಹಲಿಗೆ ಭೇಟಿ ನೀಡಿದ್ದ ಸಚಿವ ಯೋಗೇಶ್ವರ್, ನಂತರ ಇದು ಮೂರು ಪಕ್ಷಗಳ ಸರ್ಕಾರ ಎಂದಿದ್ದರು. ಅದಲ್ಲದೆ ವಿಜಯೇಂದ್ರ ಹಸ್ತಕ್ಷೇಪದ ಬಗ್ಗೆಯೂ ಕಿಡಿಕಾರಿದ್ದರು. ಇದರ ಬಳಿಕ ಹಿರಿಯ ನಾಯಕರೆಲ್ಲಾ ರಾಜ್ಯದಲ್ಲಿ ಸಿಎಂ ಬದಲಾವಣೆ ಇಲ್ಲ ಎಂದು ಒಕ್ಕೊರಲಿನಿಂದ ಹೇಳಿಕೆ ನೀಡಿದ್ದರು. ಇದೇ ವೇಳೆ ಸುಮಾರು 60 ಕ್ಕೂ ಹೆಚ್ಚು ಶಾಸಕರು ಸಹಿ ಸಂಗ್ರಹಿಸಿ, ಯೋಗೇಶ್ವರ್ ಅವರನ್ನು ಸಂಪುಟದಿಂದ ವಜಾ ಮಾಡಬೇಕೆಂಬ ಆಗ್ರಹವೂ ಕೇಳಿಬಂದಿತ್ತು.
ಇದನ್ನೂ ಓದಿ:ಪ್ರತಿಯೊಬ್ಬ ಅರ್ಹರಿಗೆ ಲಸಿಕೆ ನೀಡಲು ರಾಜ್ಯ ಸರಕಾರ ಬದ್ಧ: ಅಜಿತ್ ಪವಾರ್
ಈ ಮಧ್ಯೆ ವಿಜಯೇಂದ್ರ ರಾಷ್ಟ್ರ ರಾಜಧಾನಿಗೆ ಭೇಟಿ ನೀಡಿದ್ದು, ಹಲವು ಕುತೂಹಲಕ್ಕೆ ಕಾರಣವಾಗಿದೆ. ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ರನ್ನು ವಿಜಯೇಂದ್ರ ಭೇಟಿಯಾಗಲಿದ್ದಾರೆ ಎನ್ನಲಾಗಿದೆ. ಆದರೆ ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿಜಯೇಂದ್ರ, ಯಾವುದೇ ನಿಗದಿತ ರಾಜಕೀಯ ಭೇಟಿಯಲ್ಲ. ಸದ್ಯ ರಾಜ್ಯದಲ್ಲಿ ರಾಜಕೀಯ ಚಟುವಟಿಕೆಗಳು ನಡೆಯುತ್ತಿಲ್ಲ. ಬೇರೆ ಕಾರಣಗಳಿಗಾಗಿ ಬಂದಿದ್ದೇನೆ ಎಂದಿದ್ದಾರೆ.