Advertisement

B.Y. Vijayendra: ಮೋದಿ ಬಗ್ಗೆ ವ್ಯಂಗ್ಯ ಪೋಸ್ಟ್‌: ಬಿವೈವಿ ತಿರುಗೇಟು

10:46 AM Jan 17, 2024 | Team Udayavani |

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರ ಬಳಸಿ “ಪ್ರಧಾನಿಯ ಗಾಢ ನಿದ್ರೆ, ಕರ್ನಾಟಕದ ಅಭಿವೃದ್ಧಿಗೆ ಪ್ರಮುಖ ತೊಂದ್ರೆ’ ಎಂದು ಮುಖ್ಯಮಂತ್ರಿಗಳ ಸಾಮಾಜಿಕ ಜಾಲತಾಣದಲ್ಲಿ ವ್ಯಂಗ್ಯಭರಿತ ಚಿತ್ರಗಳನ್ನು ಪೋಸ್ಟ್‌ ಮಾಡಿದ್ದು ಇದಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಕಿಡಿ ಕಾರಿದ್ದಾರೆ.

Advertisement

ತನಗೆ ತಾನೇ ಪ್ರಚಾರ ಕೊಟ್ಟುಕೊಳ್ಳಲು ಹಾಗೂ ಬಿಜೆಪಿಗಾಗಿ ಪ್ರಚಾರ ಮಾಡಲು ಸದಾ ಎದ್ದಿರುವ ನರೇಂದ್ರ ಮೋದಿ, ಕರ್ನಾಟಕದ ಜ್ವಲಂತ ಸಮಸ್ಯೆಗಳ ಬಗ್ಗೆ ಯಾವಾಗಲೂ ತೂಕಡಿಸುತ್ತಿರುತ್ತಾರೆ. ಕರ್ನಾಟಕದ ಕಟು ವಾಸ್ತವಕ್ಕೆ ಸ್ಪಂದಿಸದ ಮೋದಿಯಿಂದ ಸದಾ ಪಲಾಯನ ಎಂದು ಜರಿದಿದ್ದು, ಅನುದಾನ ಕೊಡದ ಬಗ್ಗೆ, ಬರಪರಿಹಾರ ಬಿಡುಗಡೆ ಮಾಡದ ಬಗ್ಗೆ ಟೀಕಿಸಲಾಗಿದೆ.

ಬರಗಾಲದಿಂದ ರಾಜ್ಯದಲ್ಲಿ 30 ಸಾವಿರ ಕೋಟಿ ರೂ. ನಷ್ಟವಾಗಿದ್ದು, 18 ಸಾವಿರ ಕೋಟಿ ಪರಿಹಾರ ಕೇಳಿದ್ದರೂ ಕೊಟ್ಟಿಲ್ಲ. ಮೋದಿ ಮಂತ್ರವಿಷ್ಟು, ಕಡೆಗಣಿಸು, ನಿರ್ಲಕ್ಷಿಸು, ನಿದ್ರಿಸು, ಮತ್ತದನ್ನೇ ಪುನರಾವರ್ತಿಸು, ಬಿಜೆಪಿ ಸಂಸದರ ಮಂತ್ರ, ಬಾಯಿಗೆ ಬೀಗ ಹಾಕಿಕೊಂಡಿರು, ಮೋದಿಯದ್ದೇ ಜಪ ಮಾಡಿಕೊಂಡಿರು, ಕನ್ನಡಿಗರ ನಂಬಿಕೆಗೆ ದ್ರೋಹ ಬಗೆಯುತ್ತಿರುವ, ಮೋದಿ ನಿಶ್ಚಿಂತೆಯಿಂದ ನಿದ್ರಿಸಲು ಮತ್ತದನ್ನೇ ಪುನರಾವರ್ತಿಸು! ಎದ್ದೇಳಿ ಪ್ರಧಾನ ಮಂತ್ರಿಯವರೇ, ಕರ್ನಾಟಕದ ನ್ಯಾಯಯುತ ಪಾಲು ಕೊಡಬೇಕಾದ ಸಮಯವಿದು ಎಂದು ಟೀಕೆಗಳ ಸುರಿಮಳೆಗರೆದಿದ್ದಾರೆ.

ವಿಜಯೇಂದ್ರ ತಿರುಗೇಟು: ಇದಕ್ಕೆ ತಿರುಗೇಟು ನೀಡಿರುವ ವಿಜಯೇಂದ್ರ, ಸೂರ್ಯ ಮುಳುಗಿದರೆ ಕತ್ತಲೆ, ಚಂದ್ರ ಮೇಲೆದ್ದು ಬಂದರೆ ನಿದ್ರೆ. ಸೂರ್ಯ-ಚಂದ್ರರಿಬ್ಬರೂ ವಿಶ್ರಾಂತಿ, ಸುಖನಿದ್ರೆಗಳನ್ನು ಅನುಭವಿಸಿರಬಹುದು. ಆದರೆ, ತಮ್ಮ ಬದುಕಿನ ಪುಟದಲ್ಲಿ ವಿರಮಿಸುವ ಪದವನ್ನೇ ಕಾಣದ, ನಿದ್ರೆ ಸುಖವೇನೆಂದು ಅರಿಯದ ಒಬ್ಬ ತಪಸ್ವಿ ಆಡಳಿತಗಾರನನ್ನು ಈ ದೇಶ ಕಂಡಿದ್ದರೆ ಅದು ಮೋದಿ ಅವರು ಮಾತ್ರ. ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ನೋಡಿಕೊಳ್ಳುವ ನಿದ್ರೆ ಸಾಮ್ರಾಜ್ಯದ ಸಿದ್ದರಾಮಯ್ಯ ಅವರು ಮೋದಿಯವರ ಹೆಗಲ ಮೇಲೆ ತಮ್ಮ ನಿದ್ರೆ ಸುಖದ ಚಿತ್ರಣ ಸೃಷ್ಟಿಸಿ ವಿಕೃತ ಆನಂದ ಪಡೆಯಲು ಹೊರಟಿದ್ದಾರೆ ಎಂದು ಎಕ್ಸ್‌ ಖಾತೆಯಲ್ಲಿ ತಿರುಗೇಟು ಕೊಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next