ಬೆಳಗಾವಿ: ರಾಜ್ಯದಲ್ಲಿ ಹಿಜಾಬ್ ಮತ್ತು ಕೇಸರಿ ಶಾಲು ವಿವಾದ ಸೃಷ್ಟಿಸಿರುವ ಕಾಂಗ್ರೆಸ್ ಶಾಲಾ ಕಾಲೇಜು ವಿದ್ಯಾರ್ಥಿಗಳಲ್ಲಿ ವಿಷಬೀಜ ಬಿತ್ತುವ ಕೆಲಸ ಮಾಡುತ್ತಿದೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಗಂಭೀರ ಆರೋಪ ಮಾಡಿದರು.
ಬೆಳಗಾವಿಯಲ್ಲಿ ಮಂಗಳವಾರ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಇದು ಬಹಳ ದುರದೃಷ್ಟಕರ ಸಂಗತಿ. ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ಸಮವಸ್ತ್ರ ಧರಿಸಿ ಹೋಗುವದು ಮೊದಲಿನಿಂದಲೂ ಬಂದ ಪದ್ಧತಿ. ಸಮವಸ್ತ್ರ ಅಂದರೆ ಏನು ಎಂಬುದು ಹೆಸರಲ್ಲೇ ಗೊತ್ತಾಗುತ್ತದೆ. ಶಾಲೆಗಳಲ್ಲಿ ಎಲ್ಲರೂ ಸಮಾನವಾಗಿ ಯೋಚನೆ ಮಾಡಬೇಕು. ಜಾತಿ ವಿಚಾರ ಬರಬಾರದು, ಹಿಂದೂ ಮುಸ್ಲಿಂ ಎಂಬ ಭಾವನೆ ಬರಬಾರದು ಎಂದು ಹೇಳಿದರು.
ಶಾಲಾ ಕಾಲೇಜು ಆವರಣಕ್ಕೆ ಹೋದ ಸಂದರ್ಭದಲ್ಲಿ ವಿದ್ಯಾರ್ಥಿಗಳಾಗಿರಬೇಕು. ಹಿಜಾಬ್ ವಿಚಾರದಲ್ಲಿ ವಿಶೇಷವಾಗಿ ಕಾಂಗ್ರೆಸ್ ಮುಖಂಡರು ರಾಜಕಾರಣ ಮಾಡುತ್ತಿದ್ದಾರೆ. ಶಾಲಾ ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳಲ್ಲಿ ವಿಷಬೀಜ ಬಿತ್ತುವ ಕೆಲಸ ಮಾಡುತ್ತಿದ್ದಾರೆ ಇದು ಖಂಡನೀಯ ಎಂದು ಟೀಕಿಸಿದರು.
ಇದನ್ನೂ ಓದಿ:ತಾರಕಕ್ಕೇರಿದ ಹಿಜಾಬ್- ಕೇಸರಿ ವಿವಾದ: ಉಡುಪಿ ಎಂಜಿಎಂ ಕಾಲೇಜಿಗೆ ಅನಿರ್ಧಿಷ್ಟಾವಧಿ ರಜೆ ಘೋಷಣೆ
ಚುನಾವಣಾ ವರ್ಷದಲ್ಲಿ ಅಭಿವೃದ್ಧಿ ಕೆಲಸ ಇಲ್ಲದೇ ಬಿಜೆಪಿ ರಾಜಕಾರಣ ಮಾಡ್ತಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ರಾಜ್ಯ ಮತ್ತು ಕೇಂದ್ರದಲ್ಲಿ ಯಾವ ರೀತಿ ಅಭಿವೃದ್ಧಿ ಕೆಲಸ ಆಗುತ್ತಿದೆ ಎಂಬುದರ ಬಗ್ಗೆ ಮುಂದಿನ ಚುನಾವಣೆಯಲ್ಲಿ ಜನ ತೀರ್ಮಾನ ಮಾಡುತ್ತಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಾಧನೆ ಆಧಾರ ಮೇಲೆ ಚುನಾವಣೆ ಎದುರಿಸುತ್ತೇವೆ ಎಂದು ಹೇಳಿದರು.
ಹಿಜಾಬ್ ವಿಚಾರ ಇಟ್ಟುಕೊಂಡು ರಾಜಕಾರಣ ಮಾಡುವ ದುರುದ್ದೇಶ ಬಿಜೆಪಿಗಿಲ್ಲ. ಹಿಜಾಬ್ ವಿಚಾರದಲ್ಲಿ ರಾಜಕಾರಣ ಮಾಡುತ್ತಿರುವುದು ಕಾಂಗ್ರಸ್ ಪಕ್ಷದವರು. ಇದರಲ್ಲಿ ಬಿಜೆಪಿ ಮೂಗು ತೂರಿಸುವಂತಹ ಪ್ರಶ್ನೆಯೇ ಇಲ್ಲ ಎಂದು ತಿರುಗೇಟು ನೀಡಿದರು.