Advertisement

B.Y. ವಿಜಯೇಂದ್ರ ಮುಂದಿದೆ ಪಕ್ಷ ಸಂಘಟಿಸುವ ಹೊಣೆ

12:20 AM Nov 12, 2023 | Team Udayavani |

ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಪುತ್ರ ಬಿ.ವೈ.ವಿಜಯೇಂದ್ರ ಅವರನ್ನು ಬಿಜೆಪಿ ವರಿಷ್ಠರು ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿದ ಬಳಿಕ ರಾಜ್ಯ ರಾಜಕಾರಣದಲ್ಲಿ  ಬಿರುಸಿನ ಚಟುವಟಿಕೆ ಪ್ರಾರಂಭವಾಗಿದೆ. ಬಿಜೆಪಿ ಹಾಗೂ ಜೆಡಿಎಸ್‌ ಮುಖಂಡರು ವಿಜಯೇಂದ್ರ ಅವರಿಗೆ ಅಭಿನಂದನೆ ಸಲ್ಲಿಸಿ, ಪಕ್ಷ ಸಂಘಟಿಸುವಂತೆ ಸಲಹೆ-ಸೂಚನೆ ನೀಡಿದ್ದಾರೆ. ಕಾಂಗ್ರೆಸ್‌ ಮುಖಂಡರು ಬಿಜೆಪಿಗೆ ನೂತನ ರಾಜ್ಯಾಧ್ಯಕ್ಷರ ಆಯ್ಕೆ “ಹೊಸ ಬಾಟಲಿಯಲ್ಲಿ ಹಳೆ ವೈನ್‌ ‘ಇದ್ದಂತೆ ಎಂದು ವ್ಯಂಗ್ಯವಾಡಿದ್ದಾರೆ.

Advertisement

ವೀರಶೈವ-ಲಿಂಗಾಯತ ಸಮಾಜ ಬಿಜೆಪಿ ಜತೆಗೆ ನಿಲ್ಲುವರು

ಬೆಂಗಳೂರು: ವೀರಶೈವ -ಲಿಂಗಾಯತ ಸಮುದಾಯ ಬಿಜೆಪಿ ಜತೆಗೆ ಇನ್ನಷ್ಟು ಗಟ್ಟಿಯಾಗಿ ನಿಲ್ಲಲಿದ್ದು, ಲೋಕಸಭಾ ಚುನಾವಣೆಯಲ್ಲಿ ಅತಿ ಹೆಚ್ಚು ಕ್ಷೇತ್ರಗಳಲ್ಲಿ ಗೆದ್ದು ಪ್ರಧಾನಿ ನರೇಂದ್ರ ಮೋದಿಯವರ ಕೈ ಬಲಪಡಿಸಲಾಗುವುದು ಎಂದು ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಹೇಳಿದ್ದಾರೆ.

ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷರಾಗಿ ನೇಮಕ ಮಾಡುತ್ತಾರೆಂಬ ನಿರೀಕ್ಷೆ ನನಗೆ ಇರಲಿಲ್ಲ. ಬಿಜೆಪಿ ನಾಯಕರಾದ ಅಮಿತ್‌ ಶಾ, ನಡ್ಡಾ ಸೇರಿ ಈ ಆಯ್ಕೆ ಮಾಡಿದ್ದಕ್ಕೆ ಧನ್ಯವಾದಗಳು. ಎಲ್ಲರ ನಿರೀಕ್ಷೆಗೆ ತಕ್ಕಂತೆ ವಿಜಯೇಂದ್ರ ಕೆಲಸ ಮಾಡುತ್ತಾರೆ ಎಂದರು.

ನನ್ನನ್ನು ಹಾಗೂ ಲಿಂಗಾಯತ ಸಮುದಾಯವನ್ನು ಬಿಜೆಪಿ ಕಡೆಗಣಿಸಿದೆ ಎಂಬ ಪ್ರಶ್ನೆಯೇ ಉದ್ಭವಿಸು ವುದಿಲ್ಲ. ಎಲ್ಲ ಸಮಯದಲ್ಲೂ ನಮಗೆ ಬೆಂಬಲ ನೀಡಿದ್ದಾರೆ. ವಿಜಯೇಂದ್ರ ಅಧ್ಯಕ್ಷರಾದ ಬಳಿಕ ಸಮುದಾಯದ ಬೆಂಬಲ ಇನ್ನಷ್ಟು ಹೆಚ್ಚುತ್ತದೆ. ಲೋಕಸಭಾ ಚುನಾವಣೆಗಾಗಿ ರಾಜ್ಯದ ಉದ್ದಗಲಕ್ಕೂ ಪ್ರವಾಸ ಮಾಡುತ್ತೇನೆ. ಹೆಚ್ಚು ಸ್ಥಾನಗಳಲ್ಲಿ ಗೆದ್ದು ಮೋದಿಗೆ ಉಡುಗೊರೆ ನೀಡಬೇಕೆಂಬುದು ನನ್ನ ಅಪೇಕ್ಷೆ. ಮೋದಿಯವರನ್ನು ಇಡಿ ವಿಶ್ವವೇ ಕೊಂಡಾಡುತ್ತಿದೆ. ಅವರ ಹೆಸರಿನಲ್ಲಿ ನಾವು ಗೆಲುವು ಸಾಧಿಸಬೇಕು. ಅವರು ಮತ್ತೂಮ್ಮೆ ಪ್ರಧಾನಿಯಾಗಬೇಕು ಎಂದರು.

Advertisement

ನಗರ ಸಂಚಾರ

ವಿಜಯೇಂದ್ರ ನೇಮಕ ಬೆನ್ನಲ್ಲೇ ಇನ್ನಷ್ಟು ಚುರುಕುಗೊಂಡಿರುವ ಯಡಿಯೂರಪ್ಪ ಬೆಂಗಳೂರಿನ ದಾಸರಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರ ಅಧ್ಯಯನ ಪ್ರವಾಸ ನಡೆಸಿದರು. ಜನರ ಸಮಸ್ಯೆಗಳನ್ನು ಆಲಿಸಲು ನಾವು, ನೀವು ಇಬ್ಬರು ಜತೆಯಾಗಿ ಹೋಗೋಣ ಬನ್ನಿ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ಗೆ ಆಹ್ವಾನ ನೀಡಿದರು.

ಶಿವಕುಮಾರ್‌ ಅವರು ಬೆಂಗಳೂರು ಉಸ್ತುವಾರಿ ಸಚಿವರಾಗಿದ್ದಾರೆ. ಇಲ್ಲಿನ ರಸ್ತೆಗಳು ಹಾಳಾಗಿವೆ. ಕುಡಿಯುವ ನೀರಿನ ಸಮಸ್ಯೆ ಇದೆ. ಕೆರೆ ಹೂಳು ತುಂಬಿದೆ. ಅಭಿವೃದ್ಧಿಗೆ ಹಣ ಬಿಡುಗಡೆಯಾಗಿಲ್ಲ. ಈ ಎಲ್ಲ ವಿಚಾರಗಳ ಬಗ್ಗೆ ಶಿವಕುಮಾರ್‌ ಅವರನ್ನು ಪ್ರಶ್ನೆ ಮಾಡೋಣ. ಸುಮ್ಮನೆ ಸರಕಾರ ದಿನ ದೂಡುತ್ತಿದೆ. ಜನವಿರೋಧಿ ಕೆಲಸ ಮಾಡುತ್ತಿದ್ದು, ಆರ್ಥಿಕವಾಗಿ ದಿವಾಳಿಯಾಗಿದೆ ಎಂದು ಆರೋಪಿಸಿದರು.

ವಿಜಯೇಂದ್ರ ಮುಂದೆ ಬೆಟ್ಟದಂತಹ ಸವಾಲಿದೆ

ಮೈಸೂರು: ಬಿಜೆಪಿಯ ಹೊಸ ರಾಜ್ಯಾಧ್ಯಕ್ಷ ವಿಜಯೇಂದ್ರರ ಮುಂದೆ ಬೆಟ್ಟದಂತಹ ಸವಾಲಿದೆ. ಕಾಂಗ್ರೆಸ್‌ ಸರಕಾರ ಗ್ಯಾರಂಟಿ ಬಿರುಸಿನಲ್ಲಿ ಓಡುತ್ತಿದೆ. ಅದನ್ನೆಲ್ಲ ತಡೆಯಲು ಪಕ್ಷ ಸಂಘಟಿಸಬೇಕಿದೆ ಎಂದು ಸಂಸದ ವಿ.ಶ್ರೀನಿವಾಸ ಪ್ರಸಾದ್‌ ಸಲಹೆ ನೀಡಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  ಬಿಜೆಪಿಯಲ್ಲಿ ಮತ್ತೆ ಕುಟುಂಬ ರಾಜಕಾರಣ ಆರಂಭ ವಿಚಾರಕ್ಕೆ ಪ್ರತಿಕ್ರಿಯಿಸಿ, ಇಲ್ಲಿ ಕುಟುಂಬ ರಾಜಕಾರಣ ಪ್ರಶ್ನೆ ಇಲ್ಲ. ದೇವೇಗೌಡರು, ಸಿದ್ದರಾಮಯ್ಯ ಎಲ್ಲರೂ ಕುಟುಂಬ ರಾಜ ಕಾರಣ ಮಾಡಿ¨ªಾರೆ.  ಆದರೆ ಎಲ್ಲರೂ ಒಳ್ಳೆಯ ರಾಜಕಾರಣ ಮಾಡಲಿ ಎಂದರು.  ವಿಜಯೇಂದ್ರ  ನೇಮಕದಿಂದ ಲೋಕಸಭಾ ಚುನಾವಣೆಗೆ ಅನುಕೂಲವಾಗುತ್ತದೆ ಎಂದು ಈಗಲೇ ಹೇಳಲು ಸಾಧ್ಯವಿಲ್ಲ. ಮೊದಲು ಅವರು ಪಕ್ಷ ಸಂಘಟನೆಗೆ ಒತ್ತು ನೀಡುವುದು ಮುಖ್ಯ ಎಂದರು.

ಮಾರ್ಚ್‌ನಲ್ಲಿ ರಾಜಕೀಯ ನಿವೃತ್ತಿ

2024ರ ಮಾ.17ಕ್ಕೆ ನಾನು ರಾಜಕೀಯದಿಂದ ನಿವೃತ್ತಿ ಘೋಷಿಸುತ್ತೇನೆ. ಅನಂತರ ನಾನು ಯಾವುದೇ ಪಕ್ಷದ ಪರವಾಗಿ ಪ್ರಚಾರ ಮಾಡುವುದಿಲ್ಲ. ಚುನಾವಣಾ ರಾಜಕೀಯಕ್ಕೆ ಬಂದು 50 ವರ್ಷವಾಗಲಿದೆ. ಅಂದೇ ಬೃಹತ್‌ ಕಾರ್ಯಕ್ರಮ ಮಾಡಿ ನಿವೃತ್ತಿ ಘೋಷಣೆ ಮಾಡುತ್ತೇನೆ. ಮುಂದೆ ಯಾವ ಪಕ್ಷಕ್ಕೂ ಸಲಹೆ ಸೂಚನೆ ನೀಡುವುದಿಲ್ಲ ಎಂದು ಹೇಳಿದರು.

ಮುಂದಿನ ಪ್ರಶ್ನೆ ವಿಪಕ್ಷ ನಾಯಕ ಯಾರು?

ರಾಜ್ಯ ವಿಧಾನಸಭೆ ಹಾಗೂ ಪರಿಷತ್‌ನ ವಿಪಕ್ಷ ನಾಯಕ ಯಾರಾಗುತ್ತಾರೆಂಬ ಪ್ರಶ್ನೆ ಈಗ ರಾಜಕೀಯ ವಲಯದಲ್ಲಿ ತೀವ್ರಗೊಂಡಿದೆ.

ಮುಂದಿನ ಶುಕ್ರವಾರ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಯಲಿದ್ದು, ಅಲ್ಲಿ ವೀಕ್ಷಕರ ಸಮ್ಮುಖದಲ್ಲಿ ವಿಪಕ್ಷ ನಾಯಕನ ಆಯ್ಕೆ ನಡೆಯಲಿದೆ. ಹಿರಿಯರಾದ ಬಸನಗೌಡ ಪಾಟೀಲ್‌ ಯತ್ನಾಳ್‌, ಆರ್‌.ಅಶೋಕ, ಆರಗ ಜ್ಞಾನೇಂದ್ರ ಜತೆಗೆ ಡಾ| ಸಿ.ಎನ್‌.ಅಶ್ವತ್ಥನಾರಾಯಣ, ವಿ.ಸುನಿಲ್‌ ಕುಮಾರ್‌, ಅರವಿಂದ ಬೆಲ್ಲದ್‌ ಆಕಾಂಕ್ಷಿಗಳಾಗಿದ್ದಾರೆ. ಜಾತಿ ಲೆಕ್ಕಾಚಾರವನ್ನು ಗಣನೆಗೆ ತೆಗೆದುಕೊಂಡರೆ ಲಿಂಗಾಯತರಿಗೆ ಎರಡು ಆಯಕಟ್ಟಿನ ಸ್ಥಾನ ನೀಡುವ ಸಾಧ್ಯತೆ ಕಡಿಮೆ. ಹೀಗಾಗಿ ಯತ್ನಾಳ್‌ ಹಾಗೂ ಬೆಲ್ಲದ್‌ ಸಾಧ್ಯತೆ ಕ್ಷೀಣ. ಒಕ್ಕಲಿಗ ಸಮುದಾಯಕ್ಕೆ ಆದ್ಯತೆ ನೀಡಿದರೆ ಆರ್‌.ಅಶೋಕ ಅಥವಾ ಡಾ| ಸಿ.ಎನ್‌.ಅಶ್ವತ್ಥನಾರಾಯಣ ಅವರಿಗೆ ಅದೃಷ್ಟ ಒಲಿಯಬಹುದು. ಆದರೆ ಜೆಡಿಎಸ್‌ ಮೈತ್ರಿಯಿಂದ ಹಳೆ ಮೈಸೂರು ಭಾಗದ ಒಕ್ಕಲಿಗ ಮತ ಸೆಳೆಯಬಹುದೆಂದು ಕೊಂಡರೆ ಹಿಂದುಳಿದ ವರ್ಗಕ್ಕೆ ಸೇರಿದ ಕಾರ್ಕಳ ಶಾಸಕ ವಿ.ಸುನೀಲ್‌ ಕುಮಾರ್‌ ಆಯ್ಕೆ ಸಾಧ್ಯತೆ ಹೆಚ್ಚಿದೆ. ಇನ್ನು ವಿಧಾನ ಪರಿಷತ್ತಿನಲ್ಲಿ ಹಿಂದುಳಿದ ವರ್ಗಕ್ಕೆ ಸೇರಿದ ಕೋಟ ಶ್ರೀನಿವಾಸ್‌ ಪೂಜಾರಿ ಹಾಗೂ ಛಲವಾದಿ ನಾರಾಯಣಸ್ವಾಮಿ ಹೆಸರು ಮುನ್ನೆಲೆಯಲ್ಲಿದೆ. ವಿಧಾನಸಭೆಯಲ್ಲಿ ಸುನಿಲ್‌ ಕುಮಾರ್‌ ವಿಪಕ್ಷ ನಾಯಕರಾದರೆ ಮೇಲ್ಮನೆಗೆ ಛಲವಾದಿ ನೇಮಕ ಹೆಚ್ಚಿದೆ.

ವರಿಷ್ಠರೊಂದಿಗೆ ಮಾತುಕತೆ ಬಳಿಕ ಪದಗ್ರಹಣ ದಿನ ನಿಗದಿ

ಬಿಜೆಪಿ ರಾಜ್ಯಾಧ್ಯಕ್ಷರಾಗಿ ಆಯ್ಕೆಗೊಂಡ ಬಳಿಕ ಬಿ.ವೈ. ವಿಜಯೇಂದ್ರ   ಅವರು ಸಂಘದ ಹಿರಿಯರು, ವಿವಿಧ ಮಠಾಧೀಶರು ಹಾಗೂ ದೇಗುಲ ದರ್ಶನ ಮಾಡುತ್ತಿದ್ದಾರೆ.

ಶನಿವಾರ ಬೆಳಗ್ಗೆ ಕೇಶವ ಕೃಪಾಕ್ಕೆ ಭೇಟಿ ನೀಡಿದ್ದ ವಿಜಯೇಂದ್ರ, ರಾತ್ರಿ ವೇಳೆಗೆ ವಿಜಯನಗರದ  ಶ್ರೀಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿ ಡಾ|  ಶ್ರೀನಿರ್ಮಲಾನಂದನಾಥ ಸ್ವಾಮೀಜಿ ಅವರ ಆಶೀರ್ವಾದ ಪಡೆದರು.

ರವಿವಾರ ಬೆಳಗ್ಗೆ 9.30ಕ್ಕೆ ತುಮಕೂರಿನ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ, ಡಾ| ಶಿವಕುಮಾರ ಸ್ವಾಮೀಜಿ ಅವರ ಗದ್ದುಗೆ ದರ್ಶನ ಪಡೆಯಲಿದ್ದಾರೆ. ಸಿದ್ದಲಿಂಗ ಸ್ವಾಮೀಜಿ ಅವರಿಂದ ಆಶೀರ್ವಾದ ಪಡೆಯ ಲಿದ್ದಾರೆ. ನಂತರ ಎಡೆಯೂರು ಸಿದ್ದಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ.

ವಾರಾಂತ್ಯದೊಳಗೆ ಅಧಿಕಾರ ಸ್ವೀಕಾರ, ಶಾಸಕಾಂಗ ಸಭೆ

ದೀಪಾವಳಿ ಹಬ್ಬದ ಬಳಿಕ ಪಕ್ಷದ ಅಧ್ಯಕ್ಷರ ಪದಗ್ರಹಣಕ್ಕೆ ತಯಾರಿ ನಡೆಯುತ್ತಿದ್ದು, ವಾರಾಂತ್ಯದೊಳಗಾಗಿ ಕಾರ್ಯಕ್ರಮ ಆಯೋಜಿಸುವ ಚರ್ಚೆಗಳು ಇವೆ. ಮಠಾಧೀಶರ ಆಶೀರ್ವಾದ ಪಡೆದು ಬಂದ ಬಳಿಕ, ಪಕ್ಷದ ವರಿಷ್ಠರೊಂದಿಗೆ ಸಮಾಲೋಚಿಸಿ ಪದಗ್ರಹಣ ದಿನಾಂಕ ನಿಗದಿಪಡಿಸುವ ಚಿಂತನೆಯಲ್ಲಿ ವಿಜಯೇಂದ್ರ ಇದ್ದು, ಬಳಿಕ ಶಾಸಕಾಂಗ ಪಕ್ಷದ ಸಭೆಯೂ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next