ಲಕ್ಷ್ಮೇಶ್ವರ: ಪಕ್ಷ ನೀಡಿರುವ ಉಪಾಧ್ಯಕ್ಷ ಸ್ಥಾನವನ್ನು ಸಂತೋಷದಿಂದಲೇ ನಿರ್ವಹಿಸುತ್ತಿದ್ದೇನೆ. ಒಂದು ವೇಳೆ ರಾಜ್ಯಾಧ್ಯಕ್ಷ ಸ್ಥಾನದ ಜವಾಬ್ದಾರಿ ನೀಡಿದರೆ ಸಮರ್ಥವಾಗಿ ನಿಭಾಯಿಸುತ್ತೇನೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.
ತಾಲೂಕಿನ ಮುಕ್ತಿಮಂದಿರ ಧರ್ಮಕ್ಷೇತ್ರಕ್ಕೆ ಸೋಮವಾರ ಭೇಟಿ ನೀಡಿದ ವೇಳೆ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಬಿಎಸ್‌ವೈ ಯಾವುದೇ ಉನ್ನತ ಸ್ಥಾನ ಸಿಗುತ್ತದೆಯೆಂಬ ನಿರೀಕ್ಷೆಯಲ್ಲಿರಲಿಲ್ಲ. ಇದನ್ನು ಉನ್ನತ ಸ್ಥಾನ ಎನ್ನುವುದಕ್ಕಿಂತ, ದೊಡ್ಡ ಜವಾಬ್ದಾರಿ ಎನ್ನುವುದು ಸೂಕ್ತ. ಅವರ ಮೂಲಕ ನನಗೆ ರಾಜ್ಯಾಧ್ಯಕ್ಷ ಸ್ಥಾನ ಸಿಗಲಿರುವ ಕುರಿತು ಚರ್ಚೆ ನಡೆದಿರುವ ಬಗ್ಗೆ ಗೊತ್ತಿಲ್ಲ ಎಂದರು.
ಮಾಂಸ ಸೇವಿಸಿ ದೇವಸ್ಥಾನಕ್ಕೆ ಹೋಗುತ್ತೇನೆ ಎನ್ನುವುದು ಭಂಡತನದ ಹೇಳಿಕೆ ತಾವು ಬಯಸಿದ್ದನ್ನು ತಿನ್ನುವ ಸ್ವಾತ೦ತ್ರ್ಯ ಎಲ್ಲರಿಗೂ ಇದೆ. ಆದರೆ ಮಾಂಸ ತಿಂದು ದೇವಸ್ಥಾನಕ್ಕೆ ಹೋಗುತ್ತೇನೆ ಎನ್ನುವುದು ಭಂಡತನ ಹಾಗೂ ಇದನ್ನು ಯಾರೂ ಒಪ್ಪುವುದಿಲ್ಲ. ರಾಜಕಾರಣಿಗಳ ಹೇಳಿಕೆಯಿಂದ ಜನರ ಧಾರ್ಮಿಕ ಭಾವನೆಗಳಿಗೆ ಘಾಸಿಯಾಗಬಾರದು ಎಂದರು.
ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ ಅನೇಕ ಅಗ್ರಗಣ್ಯ ನಾಯಕರಿದ್ದಾರೆ. ಯಡಿಯೂ ರಪ್ಪ ಅವರು ರಾಜ್ಯದ ರಾಜಕೀಯ ಇತಿಹಾಸದಲ್ಲಿ ಎಲ್ಲ ಜಾತಿ-ವರ್ಗದ ಜನರೂ ಮೆಚ್ಚಿರುವ ಧೀಮಂತ ನಾಯಕ. ಅವರಿಗೆ ಇಂದು ಅಧಿಕಾರವಿಲ್ಲದಿದ್ದರೂ ಅಪಾರ ಬೆಂಬಲ ಇದೆ. ಅವರು ಅಧಿಕಾರದಲ್ಲಿದ್ದಾಗ ಎಲ್ಲ ಸಮಾಜ, ವರ್ಗಕ್ಕೂ ತಾರತಮ್ಯವಿಲ್ಲದೆ ನ್ಯಾಯ ಒದಗಿಸಿದ್ದಾರೆ ಎಂದು ಹೇಳಿದರು.
ಆದರೆ ಸಿದ್ದರಾಮಯ್ಯ ಅವರು ಮತ್ತೊಮ್ಮೆ ಅಧಿಕಾರಕ್ಕೆ ಬಾರದಿರುವ ವಾತಾವರಣ ಸೃಷ್ಟಿಯಾದಾಗ, ಹಿಂದೆಯೂ ಜಾತಿ-ಜಾತಿಗಳ ನಡುವೆ ವಿಷಬೀಜ ಬಿತ್ತುವ ಕೆಲಸ ಮಾಡಿದ್ದರು. ಅದು ಯಶಸ್ವಿಯಾಗಲಿಲ್ಲ. ಈಗ ವೀರ ಸಾವರ್ಕರ್‌ರಂತಹ ಹೋರಾಟಗಾರರು, ಧೀಮಂತ ಕ್ರಾಂತಿಕಾರಿಗಳನ್ನು ರಸ್ತೆಗೆ ತಂದು ಅವರಿಗೆ ಅವಮಾನ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಇದು ಯಾರಿಗೂ ಶೋಭೆ ತರುವ ಕೆಲಸವಲ್ಲ ಎಂದರು.