Advertisement

ಮಸ್ಕಿ ಕಣದಲ್ಲಿ ವಿಜಯೇಂದ್ರ ಟೀಂ ಪರ್ಯಟನೆ

07:37 PM Apr 05, 2021 | Team Udayavani |

ಸಿಂಧನೂರು: ಪ್ರಮುಖ ನಾಯಕರು ಬಿಜೆಪಿ ಪರ ಪ್ರಚಾರ ನಡೆಸಿರುವ ಬೆನ್ನಲ್ಲೇ ಕಳೆದೊಂದು ವಾರದಿಂದ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಟೀಂ ಪ್ರತ್ಯೇಕವಾಗಿ ಕ್ಷೇತ್ರ ಪರ್ಯಟನೆಗಿಳಿದಿವೆ.

Advertisement

ನಗರದ ವಿನಯ ರೆಸಿಡೆನ್ಸಿ ಹಾಗೂ ಇತರೆ ಕಡೆಗಳಲ್ಲಿ ಬೀಡು ಬಿಟ್ಟಿರುವ ಯುವಕರ ತಂಡ ಬೆಳಗಾಗುತ್ತಲೇ ಕ್ಷೇತ್ರದ ಹಳ್ಳಿಗಳತ್ತ ಪ್ರಯಾಣ ಬೆಳೆಸುತ್ತಿದೆ. ಆರೇಳು ಯುವಕರಿರುವ ಪ್ರತ್ಯೇಕ ಗುಂಪು ಸಭೆ ನಡೆಸಿ, ಬೇಕು-ಬೇಡಗಳನ್ನು ಕೇಳಿ ಪಟ್ಟಿ ಮಾಡಿಕೊಳ್ಳುವ ಕೆಲಸ ನಡೆಸಿದೆ. ಅಲ್ಲಿನ ಸ್ಥಳೀಯ ಮುಖಂಡರು, ಕಾರ್ಯಕರ್ತರನ್ನು ಒಗ್ಗೂಡಿಸಿ ಬಿಜೆಪಿ ಪರ ಪ್ರಚಾರ ಕೆಲಸ ಮಾಡುವಂತೆ ಮನವಿ ಮಾಡುವುದರ ಜತೆಗೆ ಅವರ ಅಸಮಾಧಾನ, ಬೇಡಿಕೆಗಳ ಪಟ್ಟಿ ಮಾಡಿಕೊಂಡು ವಿಜಯೇಂದ್ರ ಅವರಿಗೆ ತಲುಪಿಸಲಾಗುತ್ತಿದೆ.

ಹೇಗಿದೆ ಕಾರ್ಯಾಚರಣೆ?:

ಮಸ್ಕಿ ವಿಧಾನಸಭೆ ಕ್ಷೇತ್ರದ ಪಂಚಾಯಿತಿವಾರು ವಿಜಯೇಂದ್ರ ಅವರ ತಂಡ ನಿಯೋಜಿಸಲಾಗಿದೆ. ಪ್ರತಿನಿತ್ಯ ಹಳ್ಳಿಗಳಲ್ಲಿ ಸಂಚರಿಸುವ ಈ ತಂಡಗಳು ಸಂಜೆಯೊತ್ತಿಗೆ ತಮ್ಮ ವರದಿ ಸಿದ್ಧಪಡಿಸಿ, ನಾಯಕರಿಗೆ ಒಪ್ಪಿಸುವ ಕೆಲಸ ಮಾಡುತ್ತಿವೆ. ತಾಲೂಕಿನ 4ನೇ ಮೈಲ್‌ಕ್ಯಾಂಪ್‌, ವಿರೂಪಾಪುರ, ಏಳುಮೈಲ್‌ ಕ್ಯಾಂಪ್‌ ಸೇರಿದಂತೆ ಇತರೆ ಕಡೆಗಳಲ್ಲಿ ಈ ತಂಡ ಸಭೆ ನಡೆಸಿದೆ. ಹಾಸನ, ಶಿವಮೊಗ್ಗ, ಶಿಕಾರಿಪುರ, ತುಮಕೂರು, ಬೆಂಗಳೂರು, ಚಿಕ್ಕಮಗಳೂರು ಸೇರಿದಂತೆ ರಾಜ್ಯದ ವಿವಿಧ ಮೂಲೆಗಳಿಂದ ಬಂದಿರುವ ಯುವಕರು ಈ ತಂಡದಲ್ಲಿದ್ದಾರೆ. ಬಿಜೆಪಿ ಹಾಗೂ ಆರ್‌ಎಸ್‌ಎಸ್‌ನ ಬೆಂಬಲಿಗರೇ ಇದರಲ್ಲಿರುವುದು ಗಮನಾರ್ಹ.

ಗೌಪ್ಯ ಕಾರ್ಯತಂತ್ರ:

Advertisement

ಈಗಾಗಲೇ ಎರಡು ಕಡೆಗಳಲ್ಲಿ ಉಪ ಚುನಾವಣೆ ಉಸ್ತುವಾರಿ ನಿರ್ವಹಿಸಿರುವ ವಿಜಯೇಂದ್ರ ಅವರ ರಾಜಕೀಯ ತಂತ್ರದ ಭಾಗವಾಗಿ ಈ ತಂಡಗಳು ಕೆಲಸ ಮಾಡುತ್ತಿವೆ ಎಂಬುದು ಗುಟ್ಟಾಗಿ ಉಳಿದಿಲ್ಲ. ಮಾಧ್ಯಮಗಳಿಗೆ ಹಾಗೂ ಸ್ಥಳೀಯ ಮುಖಂಡರೊಂದಿಗೆ ಅಷ್ಟಾಗಿ ಬೆರೆಯದ ಇವರು, ತಾವೇ ನೇರವಾಗಿ ವಾಹನಗಳಲ್ಲಿ ತೆರಳಿ ಮಾತುಕತೆ ನಡೆಸುತ್ತಿರುವುದು ವಿಶೇಷ. ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಅಧ್ಯಯನ ನಡೆಸುವುದರ ಜತೆಗೆ ಅಲ್ಲಿನ ಮುಖಂಡರ ಮೊಬೈಲ್‌ ನಂಬರ್‌ ಪಡೆಯುತ್ತಾರೆ.

ಗ್ರಾಪಂವಾರು ತಮ್ಮದೇ ತಂಡ ಸಂಗ್ರಹಿಸಿದ ವರದಿಯನ್ನು ಆಧರಿಸಿ ನೇರವಾಗಿ ವಿಜಯೇಂದ್ರ ಅವರೇ ಕೆಲವು ಮುಖಂಡರನ್ನು ಸಂಪರ್ಕಿಸುತ್ತಿದ್ದಾರೆ. ಸಣ್ಣಪುಟ್ಟ ಅಸಮಾಧಾನ, ಬೇಡಿಕೆಗಳಿದ್ದರೆ ಅವುಗಳನ್ನು ಈಡೇರಿಸುವುದರ ಜತೆಗೆ ತಾವಿದ್ದಲ್ಲಿಗೆ ಕರೆಯಿಸಿಕೊಂಡು ಅವರ ಮನವೊಲಿಸುವ ಕೆಲಸ ಮಾಡುತ್ತಾರೆಂದು ಅವರ ಆಪ್ತರು ಹೇಳುತ್ತಾರೆ. ಮಾಧ್ಯಮ ಸಂಪರ್ಕದಿಂದ ದೂರವೇ ಉಳಿದಿರುವ ಈ ಟೀಂಗಳು ತಮ್ಮದೇ ರೀತಿಯಲ್ಲಿ ಕಾರ್ಯತಂತ್ರ ಹೆಣೆಯುತ್ತಿವೆ.

ಯಮನಪ್ಪ ಪವಾರ 

Advertisement

Udayavani is now on Telegram. Click here to join our channel and stay updated with the latest news.

Next