ಬಳ್ಳಾರಿ: ಬಿಜೆಪಿ ಪಕ್ಷದ ದೊಡ್ಡ ಶಕ್ತಿಯಾದ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರನ್ನು ಪಕ್ಷದಿಂದ ಸೈಡ್ ಲೈನ್ ಮಾಡುವ ಮಾತೇ ಇಲ್ಲ ಎಂದು ಸಾರಿಗೆ, ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಸ್ಪಷ್ಟಪಡಿಸಿದರು.
ನಗರದ ಜಿಪಂ ಸಭಾಂಗಣದಲ್ಲಿ ಬುಧವಾರ ಕೆಡಿಪಿ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿ.ಎಸ್‌ಯಡಿಯೂರಪ್ಪನವರು ನಾಲ್ಕು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ. ಅವರು ಪಕ್ಷದ ದೊಡ್ಡ ಶಕ್ತಿ. ಅವರ ಶಕ್ತಿ ಕುಗ್ಗಿಸುವ ಕೆಲಸ ಪಕ್ಷದಲ್ಲಿ ಎಂದೂ ನಡೆಯುವುದಿಲ್ಲ. ಎಂಥ ಪರಿಸ್ಥಿತಿಯಲ್ಲೂ ಬಿಎಸ್ ವೈ ಅವರನ್ನು ಕೈ ಬಿಡಲ್ಲ. ಅವರನ್ನು ಸೈಡ್ ಲೈನ್ ಮಾಡುವ ಮಾತೇ ಇಲ್ಲ.
ಮುಂದೆಯೂ ಸಹ ಅವರು ಪಕ್ಷದಲ್ಲಿ ಇರುತ್ತಾರೆ. ಅವರ ಶಕ್ತಿ ಕುಗ್ಗಿಸುವ ಕೆಲಸ ಬಿಜೆಪಿ ಯಾವತ್ತೂ ಮಾಡಲ್ಲ ಎಂದು ರಾಮುಲು ಸ್ಪಷ್ಟಪಡಿಸಿದರು.
ವಿಧಾನಸಭೆ ಚುನಾವಣೆ ಹತ್ತಿರ ಇರುವ ಕಾರಣ ಬಿಎಸ್ ವೈ ಪುತ್ರ ವಿಜಯೇಂದ್ರರಿಗೆ ಎಂಎಲ್ ಸಿ ಟಿಕೇಟ್ ಕೊಟ್ಟಿಲ್ಲ. ಬಿಜೆಪಿ ಸಾಮಾಜಿಕ ನ್ಯಾಯಕ್ಕೆ ಬದ್ದವಾದ ಪಕ್ಷ. ವಿಜಯೇಂದ್ರ ಅವರನ್ನು ಗುರುತಿಸುವ ಕೆಲಸ ಪಕ್ಷ ಮಾಡಲಿದೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ವಿಜಯೇಂದ್ರರಿಗೆ ಅವಕಾಶ ಕಲ್ಪಿಸಬೇಕೆಂದು ಪಕ್ಷದ ಚಿಂತನೆಯಾಗಿದೆ ಎಂದ ಸಚಿವ ರಾಮುಲು, ವಿಜಯೇಂದ್ರ ಕೇವಲ ವಿಧಾನ ಪರಿಷತ್ ಗೆ ಇರಬೇಕೆಂದು ಆಸೆ ಪಟ್ಟಿಲ್ಲ. ಶಾಸಕರಿಂದ ಆಯ್ಕೆಯಾಗೊದು ಬೇಡ, ಅವರು ಜನರ ಮಧ್ಯದಿಂದ ಆಯ್ಕೆಯಾಗಬೇಕು. ಬಿಎಸ್ ವೈ ಹೋರಾಟವನ್ನು ಪಕ್ಷ ಮರೆಯೋದಿಲ್ಲ ಎಂದರು.
ಇದನ್ನೂ ಓದಿ : ಕಾಂಗ್ರೆಸ್ ಪಕ್ಷವೇ ನಾಶವಾಗುತ್ತೆ ಎಂಬ ಭಯ ಪಕ್ಷದ ನಾಯಕರಿಗೆ ಕಾಡತೊಡಗಿದೆ : ಬಿ.ಸಿ. ನಾಗೇಶ್
Related Articles
ಪಕ್ಷದಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಬಗ್ಗೆ ಉನ್ನತ ಗೌರವವಿದೆ. ವಿಜಯೇಂದ್ರ ಭವಿಷ್ಯದಲ್ಲಿ ಬಿಜೆಪಿಗೆ ಉತ್ತಮ ನಾಯಕರಾಗಲಿದ್ದು,
ಜನರಿಂದ ಆಯ್ಕೆಯಾಗಿ ಪಕ್ಷಕ್ಕೆ ದೊಡ್ಡ ಶಕ್ತಿಯಾಗಿ ಹೊರಹೊಮ್ಮಲಿದ್ದಾರೆ. ಅವರು ವಿಧಾನಸಭೆಗೆ ಬಂದರೆ ರಾಜ್ಯದ ಎಲ್ಲ ಜಿಲ್ಲೆಗಳಿಗೂ ಅನುಕೂಲವಾಗಲಿದೆ. ಹಾಗಾಗಿ ಅವರನ್ನು ವಿಧಾನ ಪರಿಷತ್ ಬದಲಿಗೆ, ವಿಧಾನಸಭೆಗೆ ಅಂತ ಪಕ್ಷ ಯೋಚನೆ ನಡೆಸುತ್ತಿದೆ ಎಂದವರು ತಿಳಿಸಿದರು.