ಬಳ್ಳಾರಿ : ರಾಜ್ಯ ವಿಧಾನಸಭೆ ಚುನಾವಣೆಗೆ ಇನ್ನೂ ಒಂದು ವರ್ಷ ಬಾಕಿ ಇರುವ ಹಿನ್ನೆಲೆಯಲ್ಲಿ ಬಳ್ಳಾರಿ/ವಿಜಯನಗರ ಅವಳಿ ಜಿಲ್ಲೆಗಳಲ್ಲಿ ರಾಜಕೀಯ ಚಟುವಟಿಕೆ ಬಿರುಸುಗೊಂಡಿವೆ.
ಹಾಲಿ ಶಾಸಕರಿಗೆ ಗೆಲುವಿನ ಜತೆಗೆ ಟಿಕೆಟ್ ಕಸರತ್ತು, ಇನ್ನು ಕೆಲವರು ತಾವಿರುವ ಪಕ್ಷ ಬಿಟ್ಟು ಮತ್ತೂಂದು ಪಕ್ಷದತ್ತ ಕಣ್ಣು ಹಾಯಿಸುತ್ತಿರುವ ಪ್ರಸಂಗಗಳು ನಡೆಯುತ್ತಿವೆ. ಕೆಲವು ದಿನಗಳ ಹಿಂದಷ್ಟೇ ರೆಡ್ಡಿ ಸಹೋದರರು ನೂತನ ವಿಜಯನಗರ ಜಿಲ್ಲೆಯ ಹರಪನಹಳ್ಳಿ ಪಟ್ಟಣದಲ್ಲಿ ಜನ್ಮದಿನದ ನೆಪದಲ್ಲಿ ಭರ್ಜರಿ ಸಮಾವೇಶ ಮಾಡಿ, ರಾಜಕೀಯ ಶಕ್ತಿ ಪ್ರದರ್ಶನ ಮಾಡಿದ್ದಾರೆ. ಈ ಮೂಲಕ ಬಿಜೆಪಿಯಲ್ಲಿ ಮತ್ತೆ ರೆಡ್ಡಿ ಸಹೋದರರು ಪಾರುಪತ್ಯ ಮೆರೆಯುವ ಇಂಗಿತ ವ್ಯಕ್ತಪಡಿಸಿದ್ದು, ಒಗ್ಗಟ್ಟು ಪ್ರದರ್ಶಿಸಿದ್ದಾರೆ.
ಗ್ರಾಮೀಣ ಕ್ಷೇತ್ರ: ಹಾಲಿ ಉಸ್ತುವಾರಿ ಸಚಿವ ಬಿ. ಶ್ರೀರಾಮುಲು, ಕಳೆದ ಬಾರಿ ಮೊಳಕಾಲ್ಮೂರು ಕ್ಷೇತ್ರದಿಂದ ಸ್ಪ ರ್ಧಿಸಿದ್ದರು. ಈ ಬಾರಿ ಪುನಃ ತವರು ಜಿಲ್ಲೆಯಿಂದ ಸ್ಪಧಿ ìಸಲು ಚಿಂತನೆ ನಡೆಸಿ ದ್ದಾರೆ. ಮೂಲಗಳ ಪ್ರಕಾರ ಪಕ್ಷದ ವರಿಷ್ಠರು ಬಳ್ಳಾರಿ ಗ್ರಾಮೀಣ ಕ್ಷೇತ್ರದಿಂದ ಸ್ಪ ರ್ಧಿಸುವಂತೆ ಸೂಚಿಸಿದ್ದಾರೆ. ಸೂಕ್ತ ಕ್ಷೇತ್ರ ಹುಡುಕಾಟದಲ್ಲಿ ತೊಡಗಿದ್ದಾರೆ. ಸಂಡೂರು, ಕೂಡ್ಲಿಗಿ, ಕಂಪ್ಲಿ, ಬಳ್ಳಾರಿ ವಿಧಾನಸಭಾ ಕ್ಷೇತ್ರಗಳಲ್ಲಿ ರಾಮುಲು ಹೆಸರು ಕೇಳಿಬರುತ್ತಿದ್ದು, ಅಧಿಕೃತವಾಗಿ ಯಾವ ಕ್ಷೇತ್ರದಿಂದ ಸ್ಪ ರ್ಧಿಸಲಿದ್ದಾರೆ ಎಂಬುದು ಸದ್ಯದ ಮಟ್ಟಿಗೆ ಗೌಪ್ಯವಾಗಿದೆ. ಇನ್ನು ಇದೆ ಬಳ್ಳಾರಿ ಗ್ರಾಮಾಂತರ ಕ್ಷೇತ್ರದಿಂದ ಸಚಿವ ಬಿ. ಶ್ರೀರಾಮುಲು, ರೆಡ್ಡಿ ಬಳಗದ ಮಾಜಿ ಆಪ್ತ ಶಾಸಕ ಬಿ.ನಾಗೇಂದ್ರ ಇಬ್ಬರೂ ಸ್ಪ ರ್ಧಿಸುವ ಅನಿವಾರ್ಯತೆ ಸೃಷ್ಟಿಯಾದರೆ ನಾಗೇಂದ್ರ ಪಕ್ಕದ ಸಿರುಗುಪ್ಪ ಕ್ಷೇತ್ರದತ್ತ ವಾಲುವ ಸಾಧ್ಯತೆಗಳನ್ನು ಸಹ ಅಲ್ಲಗಳೆಯುವಂತಿಲ್ಲ.
ವಿಜಯನಗರ ಕ್ಷೇತ್ರ: ಹೊಸಪೇಟೆ ಶಾಸಕ, ಸಚಿವ ಆನಂದ್‌ಸಿಂಗ್ ಬಿಜೆಪಿ ತೊರೆಯಲಿದ್ದಾರೆ ಎಂಬ ವದಂತಿಗೆ ಈಚೆಗೆ ಹೊಸಪೇಟೆ ಯಲ್ಲಿ ಎರಡು ದಿನಗಳ ರಾಜ್ಯಮಟ್ಟದ ಬಿಜೆಪಿ ಕಾರ್ಯಕಾರಿಣಿ ಸಭೆಯನ್ನು ಅದ್ದೂರಿಯಾಗಿ ಆಯೋಜಿಸುವ ಮೂಲಕ ತೆರೆ ಎಳೆದಿದ್ದಾರೆ. ಆದರೆ ಮಾಜಿ ಶಾಸಕ ಎಚ್.ಆರ್.ಗವಿಯಪ್ಪ, ಹೊಸಪೇಟೆ ಉಪಚುನಾವಣೆಯಲ್ಲಿ ಸ್ಪ ರ್ಧಿಸದೆ ಇದ್ದು ತಪ್ಪು ಮಾಡಿದ್ದೇನೆಂದು ಹೇಳುವ ಮೂಲಕ ಮುಂದಿನ ಚುನಾವಣೆ ಯಲ್ಲಿ ಸ್ಪರ್ಧೆ ಖಚಿತ ಎಂಬ ಸಂದೇಶ ರವಾನಿಸಿದ್ದು, ಎರಡು ದಿನಗಳ ಕಾರ್ಯಕಾರಿಣಿ ಸಭೆಯಲ್ಲಿ ಎಲ್ಲೂ ಕಾಣಿಸಿಕೊಳ್ಳದೆ ಪರೋಕ್ಷವಾಗಿ ಪಕ್ಷ ತೊರೆಯುವ ಮುನ್ಸೂಚನೆ ನೀಡಿದ್ದಾರೆ. ಇನ್ನು ಮುಂದೆ ಜನರ ಮಧ್ಯೆ ಇರುತ್ತೇನೆ. ಜನರಿಂದ ದೂರ ಹೋಗಲ್ಲ ಎಂದಿದ್ದು, ವಿಜಯನಗರ ರಾಜಕಾರಣ ದಲ್ಲಿ ಕ್ಷಿಪ್ರ ಬದಲಾವಣೆಯ ಮುನ್ಸೂಚನೆ ನೀಡಿದೆ. ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ್ ಸಹೋದರ ರಾಜಶೇಖರ್ ಹಿಟ್ನಾಳ್ ಹೊಸಪೇಟೆ ಯಲ್ಲಿ ಮನೆ ಮಾಡಿಕೊಂಡು ಸ್ಥಳೀಯ ಕಾಂಗ್ರೆಸ್ ಮುಖಂಡರ ಜತೆ ಬಾಂಧವ್ಯ ಬೆಳೆಸುವ ಪ್ರಯತ್ನದಲ್ಲಿದ್ದು, ವಿಜಯನಗರ ಕ್ಷೇತ್ರದಿಂದ ಸ್ಪರ್ಧಿಸುವ ಕುರಿತು ಚಿಂತನೆ ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ.
ಹೊಸಮುಖ ಅನಿವಾರ್ಯ: ವಿಜಯನಗರ ಜಿಲ್ಲೆಯ ಹರಪನಹಳ್ಳಿಯಲ್ಲಿ ಕಾಂಗ್ರೆಸ್‌ನ ಎಂ.ಪಿ.ರವೀಂದ್ರ, ಸಂಡೂರಿನಲ್ಲಿ ಬಿಜೆಪಿಯ ರಾಘವೇಂದ್ರ ಕಳೆದ ಬಾರಿ ಸ್ಪ ರ್ಧಿಸಿ ಪರಾಭವಗೊಂಡಿದ್ದ ಈ ಇಬ್ಬರು ಅಭ್ಯರ್ಥಿಗಳು ನಿಧನಹೊಂದಿದ್ದಾರೆ. ಈ ಕ್ಷೇತ್ರಗಳಲ್ಲಿ ಹೊಸಮುಖ ಅನಿವಾರ್ಯವಾಗಿದೆ. ಹರಪನಹಳ್ಳಿಯಲ್ಲಿ ರವೀಂದ್ರ ಅವರ ಸಹೋದರಿಯರ ನಡುವೆ ಟಿಕೆಟ್‌ಗಾಗಿ ಪೈಪೋಟಿ ಏರ್ಪಟ್ಟಿದ್ದು, ಸಂಡೂರು ಕ್ಷೇತ್ರದಲ್ಲಿ ಹೊಸ ಅಭ್ಯರ್ಥಿಗಾಗಿ ಹುಡುಕಾಟ ನಡೆದಿದ್ದು, ಪಕ್ಷದ ಕೆಲವು ಕಾರ್ಯಕರ್ತರು ರಾಘವೇಂದ್ರರ ಪತ್ನಿಗೆ ಟಿಕೆಟ್ ನೀಡುವಂತೆ ಮುಖಂಡರಲ್ಲಿ ಮನವಿ ಮಾಡಿದ್ದಾರೆ. ಇನ್ನು ಇದೇ ಕ್ಷೇತ್ರದಿಂದ ಕಳೆದ ಬಾರಿ ಜೆಡಿಎಸ್ ಅಭ್ಯರ್ಥಿಯಾಗಿದ್ದ ಅರಸಿಕೆರೆ ಕೊಟ್ರೇಶ್ ಈ ಬಾರಿ ಕಾಂಗ್ರೆಸ್‌ನತ್ತ ಮುಖ ಮಾಡಿದ್ದಾರೆ ಎನ್ನಲಾಗುತ್ತಿದೆ.
– ವೆಂಕೋಬಿ ಸಂಗನಕಲ್ಲು