ಬೆಂಗಳೂರು: “ಲೋಕಸಭೆ ಚುನಾವಣೆಯನ್ನು ಮೋದಿ ಹೆಸರಿನಲ್ಲಿ ಗೆಲ್ಲುವುದು ಸುಲಭ. ಆದರೆ ರಾಜ್ಯದ ಚುನಾವಣೆ ಅಷ್ಟು ಸುಲಭವಲ್ಲ” ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ನೀಡಿದ್ದ ಹೇಳಿಕೆ ಈ ಹಿಂದೆ ಭಾರಿ ಚರ್ಚೆಗೆ ಕಾರಣವಾಗಿತ್ತು. ಬಿಜೆಪಿ ಕಾರ್ಯಕಾರಿಣಿಯಲ್ಲೂ ಅವರು ಇದೇ ಬಗೆಯ ಮಾತಾಡಿರುವುದು ರಾಜಕೀಯ ವಲಯದಲ್ಲಿ ಭಾರಿ ಸದ್ದು ಮಾಡುತ್ತಿದೆ.
ಬಿಜೆಪಿಯ ಆಂತರಿಕ ಮೂಲಗಳ ಪ್ರಕಾರ ಹೊಸಪೇಟೆಯಲ್ಲಿ ಎರಡು ದಿನಗಳ ಕಾಲ ನಡೆದ ಕಾರ್ಯಕಾರಿಣಿಯ ಹೈಲೆಟ್ಸ್ ಎಂದರೆ ಅದು ಯಡಿಯೂರಪ್ಪ ಹಾಗೂ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರ ಹೈವೋಲ್ಟೇಜ್ ಭಾಷಣ. ಇಬ್ಬರೂ ಕೂಡಾ ಪಕ್ಷ ಸಂಘಟನೆ ದೃಷ್ಟಿಯಿಂದಲೇ ಹಲವು ವಿಚಾರಗಳನ್ನು ಮುಂದಿಟ್ಟಿದ್ದಾರೆ. ಆದರೆ ಯಡಿಯೂರಪ್ಪ ಉಲ್ಲೇಖಿಸಿರುವ “ಭ್ರಮೆಯ ಪೊರೆ ಕಳಚಿ” ಎಂಬ ಪದ ಪ್ರಯೋಗ ಮಾಡಿದ್ದೇಕೆ? ಎಂಬುದು ಹಲವರಲ್ಲಿ ಚರ್ಚೆ ಹುಟ್ಟು ಹಾಕಿದೆ.
ಯಡಿಯೂರಪ್ಪ ವರಿಷ್ಠರನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಮಾತು ಹೇಳಿದರೆ? ರಾಜ್ಯದಲ್ಲಿರುವ ತಮ್ಮ ವಿರೋಧಿಗಳಿಗೆ ಬಿಸಿ ತಟ್ಟಿಸಲು ಹೇಳಿದರೆ? ಅಥವಾ ಮುಂದಿನ ಚುನಾವಣೆಯಲ್ಲಿ ನನ್ನ ಅನಿವಾರ್ಯತೆ ಇದೆ ಎಂಬುದನ್ನು ಮರೆಯಬೇಡಿ ಎಂದು ಸೂಚ್ಯವಾಗಿ ಹೇಳಿದರೆ? ಎಂಬ ಪ್ರಶ್ನೆ ಉದ್ಭವವಾಗಿದೆ.
ಇದನ್ನೂ ಓದಿ:ಸಂಪುಟದ ಬಗ್ಗೆ ದೆಹಲಿಯಲ್ಲೇ ಅಂತಿಮ ನಿರ್ಧಾರ: ಸಿಎಂ ಬೊಮ್ಮಾಯಿ
ಚುನಾವಣೆಯನ್ನು ಗೆದ್ದೇ ಬಿಟ್ಟೆವು ಎಂಬ ಭ್ರಮೆಯಿಂದ ಮೊದಲು ಈಚೆ ಬನ್ನಿ. ಭ್ರಮೆಯ ಪೊರೆ ಕಳಚಿ. ತಳಹಂದಲ್ಲಿ ಬೇರೆಯದೇ ಆದ ವಾತಾವರಣ ಇದೆ ಎಂಬುದನ್ನು ಮರೆಯಬೇಡಿ. ಪರಿಶಿಷ್ಟ ಜಾತಿ ಹಾಗೂ ಪಂಗಡದ ಸಂಘಟನೆಗೆ ಒತ್ತು ಕೊಡಿ ಎಂದು ಅವರು ಪ್ರತಿಪಾದಿಸಿದ್ದು ಸರಕಾರದ ಯೋಜನೆಗಳು ಈ ವರ್ಗವನ್ನು ಇನ್ನಷ್ಟು ತಲುಪಬೇಕೆಂದು ಅಭಿಪ್ರಾಯಪಟ್ಟಿದ್ದಾರೆ.