Advertisement

ದಪ್ಪ ಚರ್ಮದ ಸರ್ಕಾರಕ್ಕೆ ಜನರೇ ಪಾಠ ಕಲಿಸುತ್ತಾರೆ..

11:35 PM May 12, 2017 | Karthik A |

ಸಿದ್ದರಾಮಯ್ಯ ಸರ್ಕಾರದ 4 ವರ್ಷದ ಆಡಳಿತವನ್ನು ಯಾವ ರೀತಿ ಪರಾಮರ್ಶೆ ಮಾಡುತ್ತೀರಿ?
ಸರ್ಕಾರದ ಮೊದಲ ಕೆಲಸ ಕಾನೂನು ಸುವ್ಯವಸ್ಥೆ ಕಾಪಾಡುವುದು. ಆದರೆ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ನಾಲ್ಕು ವರ್ಷಗಳಲ್ಲಿ 6521 ಕೊಲೆಗಳು ನಡೆದಿವೆ. ಆಡಳಿತ ವ್ಯವಸ್ಥೆ ಸಂಪೂರ್ಣ ಕುಸಿದಿದೆ. ಇಲಾಖೆಗಳಿಗೆ ನಿಗದಿಪಡಿಸಿರುವ ಅನುದಾನದ ಶೇ. 65ರಷ್ಟು ಕೂಡ ಖರ್ಚು ಮಾಡಿಲ್ಲ. ಭೀಕರ ಬರಗಾಲ ಇದ್ದರೂ ಪರಿಸ್ಥಿತಿ ನಿಭಾಯಿಸುವ ಪ್ರಯತ್ನಕ್ಕೆ ಮುಂದಾಗಿಲ್ಲ. ಜನರ ಸಂಕಷ್ಟ ಕೇಳುವ ಪರಿಸ್ಥಿತಿಯಲ್ಲಿ ಯಾರೂ ಇಲ್ಲ. ಇದು ಇವರ ಸರ್ಕಾರದ ಆಡಳಿತ ವೈಖರಿ.

Advertisement

ಕರ್ನಾಟಕ ನಾಲ್ಕು ವರ್ಷಗಳಲ್ಲಿ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ ಎಂದು ಮುಖ್ಯಮಂತ್ರಿಯವರು ಹೇಳಿದ್ದಾರಲ್ಲಾ?
ಕರ್ನಾಟಕವನ್ನು ಭ್ರಷ್ಟಾಚಾರದಲ್ಲಿ ನಂ. 1 ರಾಜ್ಯ ಎಂದು ಕರೆಸಿಕೊಳ್ಳುವ ಹೀನ ಸ್ಥಿತಿಗೆ ಮುಖ್ಯಮಂತ್ರಿಗಳು ತಳ್ಳಿದ್ದಾರೆ. ಈ ಸರ್ಕಾರ ಎಲ್ಲಾ ರಂಗಗಳಲ್ಲೂ ವಿಫ‌ಲವಾಗಿದೆ ಎಂದು ಹೇಳಲು ಇದಕ್ಕಿಂತ ಇನ್ನೇನು ಉದಾಹರಣೆ ಬೇಕು?

ಬಿಜೆಪಿ ಸರ್ಕಾರ ಭ್ರಷ್ಟಾಚಾರದಲ್ಲಿ ನಂ. 1 ಎಂದು ಸಿಎಂ ದೂರುತಿದ್ದಾರಲ್ಲಾ?
ಕಾಂಗ್ರೆಸ್‌ ಹೊರತುಪಡಿಸಿ ಬೇರೆ ಯಾರೂ ಬಿಜೆಪಿ ಸರ್ಕಾರವನ್ನು ಭ್ರಷ್ಟ ಸರ್ಕಾರ ಎಂದು ಹೇಳಿರಲಿಲ್ಲ. ಆದರೆ, ರಾಜ್ಯದ ಕಾಂಗ್ರೆಸ್‌ ಸರ್ಕಾರ ಭ್ರಷ್ಟಾಚಾರದಲ್ಲಿ ನಂ. 1 ಎಂದು ಹೇಳಿದ್ದು ಬಿಜೆಪಿಯವರಲ್ಲ, ಒಂದು ಸ್ವಯಂ ಸೇವಾ ಸಂಸ್ಥೆ. ಸಮೀಕ್ಷೆ ನಡೆಸಿದ 20 ರಾಜ್ಯಗಳ ಪೈಕಿ ಭ್ರಷ್ಟಾಚಾರದಲ್ಲಿ ಕರ್ನಾಟಕಕ್ಕೆ ಅತಿ ಹೆಚ್ಚು ಅಂದರೆ 77 ರೇಟಿಂಗ್‌ ನೀಡಲಾಗಿದೆ.

ಬಿಜೆಪಿಯವರಿಗೆ ಸುಳ್ಳು ಹೇಳುವುದೇ ಅಭ್ಯಾಸ ಎಂದು ಕಾಂಗ್ರೆಸ್‌ ನಾಯಕರು ಹೇಳ್ತಾರಲ್ಲಾ?
ಭೀಕರ ಬರಗಾಲ ಇರುವಾಗ ಸಚಿವರು ಸಹಜವಾಗಿ ಪ್ರವಾಸ  ಡಬೇಕು. ಆದರೆ, ಮುಖ್ಯಮಂತ್ರಿ, ಕೃಷಿ ಸಚಿವರು ಸೇರಿದಂತೆ ಯಾವ ಸಚಿವರು ಪ್ರವಾಸ ಮಾಡಿ ಪರಿಸ್ಥಿತಿ ಅವಲೋಕಿಸುತ್ತಿದ್ದಾರೆ? ಯಾವ ಅಧಿಕಾರಿಗಳು ಸ್ಥಳಕ್ಕೆ ತೆರಳಿದ್ದಾರೆ? ಕೇಂದ್ರ ಸರ್ಕಾರ ಬರ ಪರಿಹಾರಕ್ಕಾಗಿ 1685.52 ಕೋಟಿ ರೂ. ನೀಡಿದ್ದರೂ ಇನ್ನೂ ಸಮಾರು 700-800 ಕೋಟಿ ರೂ. ರೈತರ ಖಾತೆಗಳಿಗೆ ಹಾಕಿಲ್ಲ. 

ಬರ ನಿರ್ವಹಣೆಗೆ ಸರ್ಕಾರ ಏನೂ ಮಾಡಿಯೇ ಇಲ್ಲವಾ?
ನನ್ನ ಪ್ರಕಾರ ಅಲ್ಲ, ಜನರೂ ಇದನ್ನೇ ಹೇಳುತ್ತಿದ್ದಾರೆ. ಕೆಪಿಸಿಸಿಗೆ ಮುಂದಿನ ಅಧ್ಯಕ್ಷರು ಯಾರಾಗಬೇಕು ಎಂಬ ಗೊಂದಲದಲ್ಲಿ ಆಡಳಿತ ನಡೆಸುವವರು ಮುಳುಗಿದ್ದಾರೆಯೇ ಹೊರತು ರಾಜ್ಯ ಪ್ರವಾಸ ಮಾಡಿ ಬರ ಪರಿಸ್ಥಿತಿ ತಿಳಿಯುವ ಪ್ರಯತ್ನ ಮಾಡಿಲ್ಲ. ಕುಡಿಯುವ ನೀರಿನ ಸಮಸ್ಯೆ ಕಲ್ಪನೆ ಮಾಡಿಕೊಳ್ಳಲೂ ಸಾಧ್ಯವಾಗದ ಸ್ಥಿತಿಯಲ್ಲಿದೆ. ಜನರಿಗೆ ಮಾತ್ರವಲ್ಲ, ಪಶು-ಪಕ್ಷಿಗಳಿಗೂ ನೀರಿಲ್ಲ, ಜಾನುವಾರುಗಳಿಗೆ ಮೇವಿಲ್ಲ. ಇದಾವುದರ ಬಗ್ಗೆಯೂ ತಲೆಕೆಡಿಸಿಕೊಳ್ಳದೆ ಸರ್ಕಾರ ಕುಂಭಕರ್ಣ ನಿದ್ರೆಯಲ್ಲಿದೆ. ಇದನ್ನು ಬರ ನಿರ್ವಹಣೆ ಎನ್ನಲು ಸಾಧ್ಯವೇ? ಆದರೆ, ಬಿಜೆಪಿ ಸರ್ಕಾರ ಇದ್ದಾಗ ಸಚಿವರು ಮಾತ್ರವಲ್ಲ, ಅಧಿಕಾರಿಗಳು ಕೂಡ ಜಿಲ್ಲೆಗೆ ಭೇಟಿ ನೀಡುತ್ತಿದ್ದರು.

Advertisement

ಕರ್ನಾಟಕ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ ಎಂದು ಮುಖ್ಯಮಂತ್ರಿಯವರು ಹೇಳಿದ್ದರಲ್ಲಾ ?
ಅಭಿವೃದ್ಧಿಯಲ್ಲಿ ಕರ್ನಾಟಕ ನಂ.1 ಎಂದು ಹೇಳುತ್ತಿರುವುದು ಕಾಂಗ್ರೆಸ್‌ನವರು ಮಾತ್ರ. ಹಣ ಸದ್ಬಳಕೆಯಾಗುತ್ತಿಲ್ಲ ಎಂಬುದಕ್ಕೆ ಅಂಕಿ ಅಂಶಗಳ ಉತ್ತರ ನೀಡಲು ಸಿದ್ಧ. ಹಿಂದುಳಿದ ವರ್ಗದವರಿಗಾಗಿ ಇರುವ ದೇವರಾಜ ಅರಸು ಅಭಿವೃದ್ಧಿ ನಿಗಮದಲ್ಲಿ ಕಳೆದ 4 ವರ್ಷಗಳಲ್ಲಿ ಖರ್ಚಾಗಿರುವುದು ಕೇವಲ 740 ಕೋಟಿ ರೂ. ಮಾತ್ರ. ಪ್ರಧಾನಮಂತ್ರಿ ಆವಾಸ್‌ ಯೋಜನೆಯಡಿ ಕೇಂದ್ರದಿಂದ 2018 ಕೋಟಿ ರೂ. ಬಂದಿದ್ದರೂ ಕೇವಲ 568 ಕೋಟಿ ರೂ. ವೆಚ್ಚವಾಗಿದೆ. ಕೇಂದ್ರದ ಹಣ ಖರ್ಚು ಮಾಡಲೂ ಸಾಧ್ಯವಾಗದ ವಿಚಿತ್ರ ಪರಿಸ್ಥಿತಿ ಇದೆ. 

ಅನ್ನಭಾಗ್ಯ, ಕ್ಷೀರಭಾಗ್ಯ ಯೋಜನೆಗಳು ಸರ್ಕಾರದ ಸಾಧನೆಯಲ್ಲವೇ?
ಅನ್ನಭಾಗ್ಯ ಯೋಜನೆ ಕೇಂದ್ರ ಸರ್ಕಾರದ್ದು. 1.65 ಲಕ್ಷ ಮೆಟ್ರಿಕ್‌ ಟನ್‌ ಅಕ್ಕಿಯನ್ನು ಕಿಲೋ 32 ರೂ.ಗೆ ಖರೀದಿಸಿ 3 ರೂ.ಗೆ, 65 ಸಾವಿರ ಮೆಟ್ರಿಕ್‌ ಟನ್‌ ಗೋಧಿಯನ್ನು 22 ರೂ.ನಂತೆ ಖರೀದಿಸಿ 2 ರೂ.ಗೆ ರಾಜ್ಯ ಸರ್ಕಾರಕ್ಕೆ ಕೊಡುತ್ತಿದೆ. ಆದರೆ, ಕಾಂಗ್ರೆಸ್‌ನವರು ಅದೆಲ್ಲಾ ನಮ್ಮದೇ ಅಂತ ಬೊಬ್ಬೆ ಹೊಡೆಯುತ್ತಿದ್ದಾರೆ. 

ಜವಾಬ್ದಾರಿಯುತ ಪ್ರತಿಪಕ್ಷವಾಗಿ ಸರ್ಕಾರವನ್ನು ಎಚ್ಚರಿಸುವ ಕೆಲಸ ಮಾಡಬಹುದಿತ್ತು. ಆ ವಿಚಾರದಲ್ಲಿ ನೀವೂ ವಿಫ‌ಲರಾಗಿದ್ದೀರಾ?
ಸದನದ ಒಳಗೆ ನಮ್ಮವರು ಈ ವಿಚಾರ ಹೇಳಿದರೆ ಸ್ಪಂದಿಸುತ್ತಿಲ್ಲ. ನನ್ನ ಪ್ರವಾಸದ ವೇಳೆ ಮಾತ್ರವಲ್ಲದೆ, ಪಕ್ಷದ ಇತರೆ ಮುಖಂಡರು ಪ್ರವಾಸ ಮಾಡುವಾಗ ಅಂಕಿ ಅಂಶಗಳ ಸಹಿತ ಸರ್ಕಾರದ ವೈಫ‌ಲ್ಯಗಳನ್ನು ಬಿಚ್ಚಿಡುತ್ತಿದ್ದೇವೆ. ಆದರೆ, ದಪ್ಪ ಚರ್ಮದ ಕಾಂಗ್ರೆಸ್‌ ಸರ್ಕಾರ ಇದಾವುದಕ್ಕೂ ಕಿವಿಗೊಡುತ್ತಿಲ್ಲ. ಹೀಗಾಗಿ ಜನರೇ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸಲಿದ್ದಾರೆ.

ಪ್ರತಿಪಕ್ಷವಾಗಿ ಬಿಜೆಪಿ ರಾಜ್ಯದಲ್ಲಿ ಮಾಡಿರುವ ಕೆಲಸ ನಿಮಗೆ ತೃಪ್ತಿ ತಂದಿದೆಯೇ?
ಖಂಡಿತ, ಸದನದ ಒಳಗೆ ಮತ್ತು ಹೊರಗೆ ಸಾಕಷ್ಟು ಹೋರಾಟ ಮಾಡುತ್ತಿರುವ ಬಗ್ಗೆ ತೃಪ್ತಿ ಇದೆ. ಆದರೆ, ಇದು ದಪ್ಪಚರ್ಮದ ಸರ್ಕಾರ ಆಗಿರುವುದರಿಂದ ಯಾವುದಕ್ಕೂ ಸ್ಪಂದಿಸುತ್ತಿಲ್ಲ. ಏನು ಮಾಡಿದರೂ ನಡೆಯುತ್ತದೆ ಎಂಬ ಸರ್ವಾಧಿಕಾರಿ ಧೋರಣೆ, ಹೈಕಮಾಂಡ್‌ ಸುಮ್ಮನಿರುತ್ತದೆ ಎಂದು ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಕಾಂಗ್ರೆಸ್‌ ಸರ್ಕಾರ ಸುಮ್ಮನಿದ್ದರೆ ನಾವೇನು ಮಾಡಲು ಸಾಧ್ಯ?

— ಬಿ.ಎಸ್‌.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ 
– ಸಂದರ್ಶನ: ಪ್ರದೀಪ್‌ ಕುಮಾರ್‌ ಎಂ.

Advertisement

Udayavani is now on Telegram. Click here to join our channel and stay updated with the latest news.

Next