ಕಲಬುರಗಿ: ರೈತ ಹೋರಾಟದಲ್ಲಿ ತೊಡಗಿರುವ ರಾಕೇಶ್ ಟಿಕಾಯತ್ ವಿರುದ್ಧ ಪೊಲೀಸರು ದಾಖಲಿಸಿದ ಎಫ್ ಐಆರ್ ಗಳನ್ನು ವಜಾ ಮಾಡುವಂತೆ ಕೋರಿ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಲಾಗುವುದು ಎಂದು ಮಾಜಿ ಉಪಸಭಾಪತಿ ಬಿ.ಆರ್.ಪಾಟೀಲ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವಮೊಗ್ಗ ಮತ್ತು ಹಾವೇರಿಯಲ್ಲಿ ನಡೆದ ಮಹಾಪಂಚಾಯತ್ ಸಮಾವೇಶದಲ್ಲಿ ಟಿಕಾಯತ್ ಅವರು ಪ್ರಚೋದನಕಾರಿ ಭಾಷಣ ಮಾಡಿದ್ದಾರೆ ಎಂದು ಆಯಾ ಜಿಲ್ಲೆಯ ಪೊಲೀಸರು ಸ್ವಯಂಪ್ರೇರಿತವಾಗಿ ಎಫ್ಐಆರ್ ದಾಖಲಿಸಿದ್ದಾರೆ. ಇದು ಅತ್ಯಂತ ಖಂಡನೀಯ ಎಂದರು.
ಇದನ್ನೂ ಓದಿ:ಅವರೇನು ಕೊಚ್ಚಿ- ಕೊಲ್ಲಿ ಎಂದಿಲ್ಲ, ಟಿಕಾಯತ್ ವಿರುದ್ಧದ ಕೇಸು ರದ್ದಾಗಬೇಕು: ಎಚ್ ಡಿಕೆ ಆಗ್ರಹ
ಸಮಾವೇಶ ಮುಗಿದ ಎರಡು ದಿನಗಳ ನಂತರ ಎಫ್ ಐಆರ್ ಗಳು ದಾಖಲಾಗಿವೆ. ಹೀಗಾಗಿ ಈ ಎಫ್ ಐಆರ್ ಗಳು ದುರುದ್ದೇಶದಿಂದ ಕೂಡಿದ್ದು ಎಂಬುವುದು ಸ್ಪಷ್ಟವಾಗುತ್ತದೆ. ರೈತ ನಾಯಕರನ್ನು ಬೆದರಿಸುವ ಕಾರಣ ಸರ್ಕಾರ ಇಂತಹ ಕೆಲಸ ಮಾಡಿದೆ. ಆದ್ದರಿಂದ ಎರಡೂ ಎಫ್ ಐಆರ್ ಗಳನ್ನು ವಜಾ ಮಾಡಬೇಕೆಂದು ಬೆಂಗಳೂರು ಮತ್ತು ಧಾರವಾಡ ಹೈಕೋರ್ಟ್ ಪೀಠದಲ್ಲಿ ಅರ್ಜಿ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಮುಂದೆ ಬೆಳಗಾವಿಯಲ್ಲಿ ಮಹಾಪಂಚಾಯತ್ ನಡೆಯಬೇಕಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲೂ ಮಹಾಪಂಚಾಯತ್ ನಡೆಸುವ ಉದ್ದೇಶ ಇದೆ. ರಾಜ್ಯದಲ್ಲಿ ರೈತರ ಹೋರಾಟ ಪ್ರಬಲವಾಗಲಿದೆ ಮತ್ತು ರಾಷ್ಟ್ರೀಯ ರೈತ ನಾಯಕರು ರಾಜ್ಯಕ್ಕೆ ಬರಲಿದ್ದಾರೆ ಎಂಬ ಭೀತಿಯಿಂದ ಸರ್ಕಾರ ಇಂತಹ ಕೆಳಮಟ್ಟಕ್ಕೆ ಇಳಿದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.