Advertisement

ಲಕ್ಸಂಬರ್ಗ್‌ ಶೈತ್ಯ ಶ್ರೀರಕ್ಷೆ!

07:46 AM Dec 05, 2020 | mahesh |

ಹೊಸದಿಲ್ಲಿ: ಲಸಿಕೆಗಳ ಉತ್ಕೃಷ್ಟ ಸಂಗ್ರಾಹಕ ವ್ಯವಸ್ಥೆಗೆ ಖ್ಯಾತಿ ಪಡೆದ ಲಕ್ಸಂಬರ್ಗ್‌ನ “ಬಿ ಮೆಡಿಕಲ್‌ ಸಿಸ್ಟಮ್ಸ್‌’ ಸಂಸ್ಥೆ ಜತೆಗಿನ ಮಹತ್ವದ ಮಾತುಕತೆಗೆ ಭಾರತ ಸನ್ನದ್ಧವಾಗಿದೆ. ಕೋವಿಡ್ ಲಸಿಕೆ ಲಭ್ಯವಾದ ಬಳಿಕ ಭಾರತದಾದ್ಯಂತ ಸುಸಜ್ಜಿತ ಶೈತ್ಯಾಗಾರ ವ್ಯವಸ್ಥೆ ಕಲ್ಪಿಸುವ ಹೊಣೆಯನ್ನು ಪ್ರಧಾನಿ ಮೋದಿ “ಬಿ ಮೆಡಿಕಲ್‌ ಸಿಸ್ಟಮ್ಸ್‌’ಗೆ ವಹಿಸಿದ್ದರು. ಈ ಹಿನ್ನೆಲೆಯಲ್ಲಿ ಸಂಸ್ಥೆಯ ಇಬ್ಬರು ಉನ್ನತಾಧಿಕಾರಿಗಳು ಹೊಸದಿಲ್ಲಿ ತಲುಪಲಿದ್ದು, ಇವರೊಂದಿಗೆ ಹಿರಿಯ ಸರಕಾರಿ ಅಧಿಕಾರಿಗಳು, ವಿಜ್ಞಾನಿಗಳು ಮತ್ತು ರಾಜತಾಂತ್ರಿಕ ಅಧಿಕಾರಿಗಳು ಮಾತುಕತೆ ಆರಂಭಿಸಲಿದ್ದಾರೆ.

Advertisement

ಏನೇನು ಚರ್ಚೆ?: ಭಾರತ ಸಂಶೋಧಿಸುತ್ತಿರುವ ಲಸಿಕೆ ಜತೆಗೆ, ಕೇಂದ್ರ ಸರಕಾರ ಒಪ್ಪಂದ ಮಾಡಿಕೊಳ್ಳುವ ವಿದೇಶಿ ಲಸಿಕೆ ಸಂರಕ್ಷಣೆಗೆ ಅಗತ್ಯವಿರುವ ಶೈತ್ಯಾಗಾರಗಳು, ಅವುಗಳನ್ನು ನಿರ್ವಹಿಸುವ ಕುರಿತು ಸಭೆ ಚರ್ಚಿಸಲಿದೆ. ಅಗತ್ಯವಿರುವ ಸಾಗಾಟ ಬಾಕ್ಸ್‌ಗಳು, ಫ್ರೀಝರ್‌ಗಳ ಲೆಕ್ಕವನ್ನೂ ಸರಕಾರದ ಟೀಂ, ಲಕ್ಸಂಬರ್ಗ್‌ ಸಂಸ್ಥೆಯ ಮುಂದಿಡಲಿದೆ. ಈ ಇಬ್ಬರು ಅಧಿಕಾರಿಗಳು ಗುಜರಾತ್‌ನ ಝೈಡಸ್‌ ಕ್ಯಾಡೆಲಾ ಲಸಿಕೆ ಉತ್ಪಾದನ ಘಟಕಗಳಿಗೂ ಭೇಟಿ ನೀಡುವ ಸಾಧ್ಯತೆ ಇದೆ.

ಇದೇ ವೇಳೆ, ಜಗತ್ತಿನಲ್ಲೇ ಅತೀ ಹೆಚ್ಚು ಲಸಿಕೆ ಖರೀದಿಸುತ್ತಿರುವ ದೇಶವಾಗಿ ಭಾರತ ಹೊರಹೊಮ್ಮಿದೆ. 1.6 ಶತಕೋಟಿ ಡೋಸ್‌ ಲಸಿಕೆಯನ್ನು ಭಾರತ ಖರೀದಿಸಿ, 80 ಕೋಟಿ ಮಂದಿಗೆ ವಿತರಿಸಲಿದೆ ಎಂದು ಜಾಗತಿಕ ವಿಶ್ಲೇಷಕರು ಅಂದಾಜಿಸಿದ್ದಾರೆ.

ಅಗರ್ಭ ಶ್ರೀಮಂತರ ಸಾಲಿಗೆ “ಫೈಜರ್‌’ ಒಡೆಯ!
ಫೈಜರ್‌ ಲಸಿಕೆಗೆ ಬ್ರಿಟನ್‌ ಅನುಮೋದಿಸುತ್ತಿದ್ದಂತೆ ಅದರ ಪೋಷಕ ಸಂಸ್ಥೆ ಬಯೋನ್‌ಟೆಕ್‌ನ ಸಂಸ್ಥಾಪಕ ಯೂಗರ್‌ ಸಾಹಿನ್‌ ಜಗತ್ತಿನ ಟಾಪ್‌ 500 ಅಗರ್ಭ ಶ್ರೀಮಂತರ ಪಟ್ಟಿ ಸೇರಿದ್ದಾರೆ. ಬ್ಲೂಮ್‌ಬರ್ಗ್‌ ಬಿಲಿಯನೇರ್ಸ್‌ ಸೂಚ್ಯಂಕದ ಪಟ್ಟಿಯಲ್ಲಿ 5.1 ಬಿಲಿಯನ್‌ ಡಾಲರ್‌ ಒಡೆಯನಾದ ಜರ್ಮನಿಯ ಯೂಗರ್‌ ದಿಢೀರನೆ 493ನೇ ರ್‍ಯಾಂಕ್‌ಗೆ ಏರಿದ್ದಾರೆ. ಒಂದು ವಾರದಲ್ಲಿ ಬಯೋನ್‌ಟೆಕ್‌ ಷೇರುಗಳು ಶೇ.8ರಷ್ಟು ಏರಿಕೆ ಕಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next