Advertisement

ಸಂಘಟನೆ ಹೇಗಿರಬೇಕು ಎಂಬುದಕ್ಕೆ ಬಿಜೆಪಿ ಮಾನದಂಡ : ಬಿ.ಎಲ್‌ ಸಂತೋಷ್‌

07:49 PM Dec 15, 2021 | Team Udayavani |

ಉಡುಪಿ : ಸಂಘಟನೆ ಕಾರ್ಯವೈಖರಿ ಹೇಗಿರಬೇಕು ಎಂಬುದಕ್ಕೆ ಬಿಜೆಪಿ ಮಾನದಂಡವಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್‌ ಸಂತೋಷ್‌ ಹೇಳಿದರು.

Advertisement

ಬುಧವಾರ ಅಜ್ಜರಕಾಡು ಪುರಭವನದಲ್ಲಿ ಜರಗಿದ ಶಕ್ತಿ ಕೇಂದ್ರದ ಪ್ರಮುಖರ ಸಮಾವೇಶದಲ್ಲಿ ಅವರು ಮಾತನಾಡಿದರು.

ವ್ಯಕ್ತಿಗಳನ್ನು ಗೆಲ್ಲಿಸಲು ಬಿಜೆಪಿ ಕೆಲಸ ಮಾಡುತ್ತಿಲ್ಲ. ವ್ಯವಸ್ಥೆ ಹಾಗೂ ಸಮಾಜದ ಪರಿವರ್ತನೆ ತರುವುದು ಕಾರ್ಯಕರ್ತರ ಜವಾಬ್ದಾರಿ. ಕಳೆದ 70 ವರ್ಷಗಳಲ್ಲಿ ಸಿದ್ಧಾಂತದ ಆಧಾರದಲ್ಲಿ ಪಕ್ಷ ವ್ಯಾಪಕವಾಗಿ ಬೆಳೆದು ಬಂದಿದೆ. ಕುಟುಂಬ ರಾಜಕಾರಣ, ಭ್ರಷ್ಟಾಚಾರಗಳಿಂದ ಜನರು ಇತರೆ ಪಕ್ಷಗಳ ಮೇಲೆ ಸಂಶಯದಿಂದ ನೋಡುವಂತಾಯಿತು. ಕಾರ್ಯಕರ್ತರ ಪಕ್ಷವಾಗಿ ಬಿಜೆಪಿ ಬೆಳೆದಿದ್ದು, ಬೂತ್‌ ಮಟ್ಟದಲ್ಲಿ ಯುವಕರು, ಮಹಿಳೆಯರು ಕಾರ್ಯಕರ್ತರು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಸಾಮಾಜಿಕವಾಗಿ ಜನ ಸೇವೆ ಮಾಡುವರಿಗೆ ಪಕ್ಷ ತಳಮಟ್ಟದಿಂದ ಜವಬ್ದಾರಿ ವಹಿಸಿ ಅಧಿಕಾರ ನೀಡುತ್ತಿದೆ. ಹಾಗಾಗಿ ಇಂದು ಬಿಜೆಪಿಗೆ ಬಾಡಿಗೆ ಕಾರ್ಯಕರ್ತರು, ದುಡ್ಡು ಕೊಟ್ಟು ಜನರನ್ನು ಕರೆ ತರುವ ಪರಿಸ್ಥಿತಿ ಬಂದಿಲ್ಲ ಎಂದರು. ಪ್ರತೀ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡಾಗ ಮಾತ್ರ ನಮ್ಮ ತಳಹದಿ ವಿಸ್ತಾರಗೊಳ್ಳಲಿದೆ ಎಂದು ಪಕ್ಷದ ಮುಖಂಡರಿಗೆ ಸಲಹೆ ನೀಡಿದರು.

ನೀತಿ, ನಡವಳಿಕೆಯಿಂದ ಬಿಜೆಪಿ ಜನರಿಗೆ ಹತ್ತಿರ
ಕಾಂಗ್ರೆಸ್‌ ಅಧಿಕಾರದಲ್ಲಿದ್ದಾಗ ಸುಭಾಷ್‌ಚಂದ್ರ ಬೋಸ್‌, ದೀನ್‌ದಯಾಳ್‌ ಉಪಧ್ಯಾಯ, ಶ್ಯಾಮಪ್ರಸಾದ್‌ ಮುಖರ್ಜಿಯಂತ ಮಹನೀಯರು ಅಸಹಜವಾಗಿ ಸಾವನ್ನಪ್ಪಿದ್ದರು. ನೆಹರು ಸರಿಯಾದ ದಾರಿಯಲ್ಲಿ ದೇಶವನ್ನು ಕೊಂಡೊಯ್ಯುತ್ತಿಲ್ಲ ಎಂದು ಮನಗಂಡಾಗ, ಸ್ವಾತಂತ್ರ್ಯ ಕಾಲಘಟ್ಟದಲ್ಲಿ ಮುಸ್ಲಿಂ ತುಷ್ಟೀಕರಣ ನೀತಿ ತೀರ ಕಸಿವಿಸಿಗೊಂಡಾಗ ಜನ ಸಂಘ ಹುಟ್ಟಿಕೊಂಡಿತು. ಎಷ್ಟೋ ವರ್ಷ ಅಧಿಕಾರವಿಲ್ಲದಿದ್ದರೂ ಅನಂತರದ ದಿನಗಳಲ್ಲಿ ಜನತಾ ಪಕ್ಷ ನೀತಿ, ನಡವಳಿಕೆ ವಿಷಯದಲ್ಲಿ ಜನರಿಗೆ ಹತ್ತಿರವಾಯಿತು. ಜನರ ಮನಸ್ಸಿನಲ್ಲಿ ಇಂದಿಗೂ ರಾಷ್ಟ್ರೀಯತೆಯನ್ನು ಬಲವಾಗಿ ತುಂಬುವಲ್ಲಿ ಜನಸಂಘದ ಪಾತ್ರ ಮಹತ್ವದ್ದಾಗಿದೆ.

ಅಭಿವೃದ್ಧಿಗೆ ಸ್ಪಷ್ಟ ಮುಂದಾಲೋಚನೆ
ಸ್ಥಳೀಯಾಡಳಿತ ಜನಪ್ರತಿನಿಧಿಗಳು ಸರಕಾರದ ಅನುದಾನ ವ್ಯವಸ್ಥಿತವಾಗಿ ಸದ್ಬಳಕೆಯಾಗಬೇಕು. ಗುಣಮಟ್ಟದ ಅಭಿವೃದ್ಧಿ ಕಾರ್ಯಗಳ ಮೂಲಕ ಗಮನ ಸೆಳೆಯುವ ಯೋಜನೆ ರೂಪಿಸಬೇಕು. ದೇಶದ ಅಭಿವೃದ್ಧಿಗಾಗಿ ಸ್ಪಷ್ಟ ಮುಂದಾಲೋಚನೆ ಇಟ್ಟಿದ್ದೇವೆ. ಹಲವಾರು ವರ್ಷಗಳಿಂದ ಜಡಕಟ್ಟಿದ್ದ ವ್ಯವಸ್ಥೆ ತನ್ನ ಪಾಡಿಗೆ ತಾನೆ ಕೆಲಸ ಮಾಡಲು ಆರಂಭಿಸಿದೆ. ರೈತರು, ವಿದ್ಯಾರ್ಥಿಗಳು ಸೇರಿದಂತೆ ಆಧಾರ್‌ ಲಿಂಕ್‌ ಮೂಲಕ ಹಲವು ಯೋಜನೆಗಳ ಸಹಾಯಧನವನ್ನು ಒಂದು ರೂ. ಭ್ರಷ್ಟಾಚಾರ ಇಲ್ಲದೆ ನೇರ ಫ‌ಲಾನುಭವಿಗಳಿಗೆ ತಲುಪಿಸಲಾಗುತ್ತಿದೆ. ಕೇಂದ್ರ ಸರಕಾರ ಪ್ರತೀ ವರ್ಷ ಕಿಸಾನ್‌ ಸಮ್ಮಾನ್‌ ಯೋಜನೆ, 17 ಲಕ್ಷ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಸೇರಿ ವಿವಿಧ ಯೋಜನೆಗಳ ಫ‌ಲಾನುಭವಿಗಳಿಗೆ 3.75 ಲಕ್ಷ ರೂ. ಸಹಾಯಧನವನ್ನು ಡಿಬಿಟಿ ಮೂಲಕ ನೇರವಾಗಿ ಖಾತೆಗೆ ಜಮೆ ಮಾಡುತ್ತಿದೆ. ಈ ಹಿಂದೆ 500 ರೂ. ಮಾಸಾಶನ ಪಡೆಯಲು 50 ರೂ. ನೀಡಬೇಕಾದ ಪರಿಸ್ಥಿತಿ ಇತ್ತು ಎಂದರು.

Advertisement

ಇದನ್ನೂ ಓದಿ : ಉತ್ತರ ಕರ್ನಾಟಕ ಅಭಿವೃದ್ಧಿ: ಸರ್ಕಾರದಿಂದ ಮಲತಾಯಿ ಧೋರಣೆ

ಕೊಚ್ಚೆಗೆ ಕಲ್ಲು ಹೊಡೆದಂತೆ
ಸಿದ್ಧರಾಮಯ್ಯ ಅವರ ಟೀಕೆಗೆ ಉತ್ತರ ಕೊಡುವುದು ಕೊಚ್ಚೆಗೆ ಕಲ್ಲು ಹೊಡೆದಂತೆ, ಅವರ ಮಾತುಗಳಿಗೆ ಯಾರು ಉತ್ತರ ಕೊಡಬೇಕಾಗಿಲ್ಲ. ಪ್ರತಿ ಸಂದರ್ಭದಲ್ಲೂ ಕಾಂಗ್ರೆಸ್‌ ನಾಯಕರ ಪ್ರತಿಕ್ರಿಯೆಗೆ ಉತ್ತರಿಸಬೇಕಾಗಿಲ್ಲ. ಜನರು ನಮಗೆ ಮತ ನೀಡಿರುವುದು ಟೀಕೆ ಉತ್ತರಿಸುವುದಕ್ಕಲ್ಲ ಎಂದು ಬಿ.ಎಲ್‌ ಸಂತೋಷ್‌ ಹೇಳಿದರು. ನಾನು ಮಾರಾಟಕ್ಕಿಲ್ಲ ಎನ್ನುವುದು ರಾಜಕಾರಣಿಗೆ ಇರಬೇಕಾದ ಅತಿ ದೊಡ್ಡ ಗುಣ. ದ. ಕ, ಉಡುಪಿಯಲ್ಲಿ ಶೇ.99 ರಷ್ಟು ಜನಪ್ರತಿನಿಧಿಗಳು ತಾವು ಮಾರಾಟಕ್ಕಿಲ್ಲ ಅಂತ ತೋರಿಸಿಕೊಟ್ಟಿದ್ದು, ವಿಧಾನಪರಿಷತ್ತಿನ ಚುನಾವಣೆಯಲ್ಲಿ ಇದು ಸಾಬೀತಾಗಿದೆ. ನಾವು ಮಾರಾಟಕ್ಕಿಲ್ಲ, ದಾಕ್ಷಿಣ್ಯಕ್ಕೆ ಒಳಗಾಗುವುದಿಲ್ಲ, ಸಾರ್ವಜನಿಕ ವ್ಯವಸ್ಥೆಯಲ್ಲಿ ಇರುವರಿಗೆ ಈ ಬದ್ಧತೆ ಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್‌ ನಾಯಕ್‌ ಸ್ವಾಗತಿಸಿದರು, ಮಂಗಳೂರು ವಿಭಾಗ ಪ್ರಭಾರಿ ಉದಯ ಕುಮಾರ್‌ ಶೆಟ್ಟಿ ವೇದಿಕೆಯಲ್ಲಿದರು. ಬಿಜೆಪಿ ಪ್ರ. ಕಾರ್ಯದರ್ಶಿಗಳಾದ ಕುತ್ಯಾರು ನವೀನ್‌ ಶೆಟ್ಟಿ ವಂದಿಸಿದರು. ಸದಾನಂದ ಉಪ್ಪಿನಕುದ್ರು ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next