ಬೆಂಗಳೂರು: ರಾಜ್ಯ ಸರ್ಕಾರ ಬಿ-ಫಾರ್ಮ ಕೋರ್ಸ್‌ಗೆ 20:80ರ ಸರಾಸರಿಯಲ್ಲಿದ್ದ ಸೀಟು ಹಂಚಿಕೆ ಪ್ರಮಾಣವನ್ನು 50:50ಕ್ಕೆ ಮಾರ್ಪಾಡು ಮಾಡಿ ಹೊರಡಿಸಿದ್ದ ಆದೇಶಕ್ಕೆ ರಾಜ್ಯ ಹೈಕೋರ್ಟ್ ತಡೆಯಾಜ್ಞೆ ನೀಡಿರುವ ಹಿನ್ನೆಲೆಯ ಬಿ-ಫಾರ್ಮ ಕೋರ್ಸ್‌ಗೆ ಪ್ರವೇಶಾತಿ ತಾತ್ಕಾಲಿಕ ಸ್ಥಗಿತಗೊಂಡಿದೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಬಿ-ಫಾರ್ಮ ಕೋರ್ಸ್‌ಗೆ ಲಭ್ಯವಿರುವ ಸೀಟಿಗೆ ಕೌನ್ಸೆಲಿಂಗ್ ಹಾಗೂ ಆಪ್ಷನ್ ಎಂಟ್ರಿ ಕೂಡ ಅವಕಾಶ ನೀಡಿತ್ತು. ಈ ಮಧ್ಯೆ ಹೈಕೋರ್ಟ್ ತಡೆಯಾಜ್ಞೆ ನೀಡಿರುವುದರಿಂದ ಪ್ರಕ್ರಿಯೆ ಸದ್ಯ ಸ್ಥಗಿತಗೊಂಡಿದೆ. ಶೇ.20ರಷ್ಟು ಸರ್ಕಾರಿ ಕೋಟಾ ಹಾಗೂ ಶೇ.80ರಷ್ಟು ಖಾಸಗಿ ಕೋಟಾದ ಬದಲಿಗೆ ತಲಾ ಶೇ.50ರಷ್ಟು ಸರ್ಕಾರಿ ಹಾಗೂ ಖಾಸಗಿ ಕೋಟಾ ಮಾಡಿರುವುದರ ವಿರುದ್ಧ ಕೆಲವರು ಹೈಕೋರ್ಟ್ ಮೆಟ್ಟಿಲೇರಿದ್ದರು.
ಸರ್ಕಾರಿ ಕೋಟಾವನ್ನು ಶೇ.20ರಿಂದ ಶೇ.50ಕ್ಕೆ ಏರಿಕೆ ಮಾಡಿದ್ದರಲ್ಲಿ ಶೇ.30ರಷ್ಟು ಹೆಚ್ಚುವರಿಯಾಗಿದ್ದು, ಅದಕ್ಕೆ ಮಾತ್ರ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಕಳೆದ ವರ್ಷದಂತೆ 20:80ರ ಅನುಪಾತದಲ್ಲಿ ಸೀಟು ಹಂಚಿಕೆಗೆ ಅವಕಾಶ ನೀಡಬೇಕು ಎಂದು ಪ್ರಾಧಿಕಾರದ ಅಧಿಕಾರಿಗಳು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಆದರೆ, ಸರ್ಕಾರದಿಂದ ಈವರೆಗೆ ಪ್ರಾಧಿಕಾರಕ್ಕೆ ಯಾವುದೇ ಉತ್ತರ ಬಂದಿಲ್ಲ ಎಂದು ಮೂಲಗಳು ಸ್ಪಷ್ಟಪಡಿಸಿದೆ.
ಕೆಎಇ ಎದುರು ವಿದ್ಯಾರ್ಥಿಗಳ ಜಾತ್ರೆ: ನೀಟ್ ತೇರ್ಗಡೆಯಾಗಿರುವ ಅಭ್ಯರ್ಥಿಗಳ ದಾಖಲೆ ಪರಿಶೀಲನೆ ಸೋಮವಾರದಿಂದಲೇ ಆರಂಭವಾಗಿದ್ದು, ಹೊರ ರಾಜ್ಯದ ವಿದ್ಯಾರ್ಥಿಗಳು ಸೇರಿದಂತೆ ಕರ್ನಾಟಕದ ಬಹುತೇಕ ವಿದ್ಯಾರ್ಥಿಗಳು ಬೆಂಗಳೂರು ಕೇಂದ್ರ ಆಯ್ಕೆ ಮಾಡಿಕೊಂಡಿರುವುದರಿಂದ ಪರಿಶೀಲನೆ ವೇಳೆ ವಿದ್ಯಾರ್ಥಿಗಳ ಸಂಖ್ಯೆ ನಿರೀಕ್ಷೆಗೂ ಮೀರಿತ್ತು.
ಪರಿಶೀಲನೆ ತ್ವರಿತಗತಿಯಲ್ಲಿ ಆಗದ ಕಾರಣ ಮತ್ತು ಅನೇಕ ವಿದ್ಯಾರ್ಥಿಗಳಲ್ಲಿ ಸಮರ್ಪಕ ದಾಖಲೆ ಇಲ್ಲದ ಕಾರಣ ಕೆಇಎ ಅಧಿಕಾರಿಗಳು, ವಿದ್ಯಾರ್ಥಿಗಳು ಹಾಗೂ ಪೋಷಕರು ರಾತ್ರಿ ಪೂರ್ತಿ ಜಾಗರಣೆ ಮಾಡಿದ್ದಾರೆ. ರಾಜ್ಯದಲ್ಲಿ ಲಭ್ಯವಿರುವ ವೈದ್ಯಕೀಯ ಹಾಗೂ ದಂತವೈದ್ಯಕೀಯ ಸೀಟ್‌ಗೆ ನೀಟ್ ತೇರ್ಗಡೆಯಾದ ಸಾವಿರಾರು ವಿದ್ಯಾರ್ಥಿಗಳು ಪ್ರಾಧಿಕಾರದ ಸೂಚನೆಯಂತೆ ನೋಂದಣಿ ಮಾಡಿಕೊಂಡಿದ್ದರು.
ಹೊರ ರಾಜ್ಯದ ವಿದ್ಯಾರ್ಥಿಗಳಿಗೂ ಅವಕಾಶ ನೀಡಿರುವುದರಿಂದ ಅವರ ಸಂಖ್ಯೆಯೂ ಹೆಚ್ಚಿದೆ. ಸೋಮವಾರ ಬೆಳಗ್ಗೆ 8 ಗಂಟೆಗೆ ಆರಂಭವಾದ ದಾಖಲೆ ಪರಿಶೀಲನೆ ಪ್ರಕ್ರಿಯೆ ಮಂಗಳವಾರ ತಡರಾತ್ರಿ ತನಕವೂ ನಿರಂತವಾಗಿ ನಡೆದಿದೆ. ಹೊರ ರಾಜ್ಯ ಹಾಗೂ ಬೇರೆ ಬೇರೆ ಊರುಗಳಿಂದ ಬಂದಿರುವ ವಿದ್ಯಾರ್ಥಿಗಳು ಹಾಗೂ ಪಾಲಕರು ಸಾಕಷ್ಟು ಸಂಕಟ ಎದುರಿಸುವಂತಾಗಿದೆ.
ರಾಜ್ಯದ ವಿದ್ಯಾರ್ಥಿಗಳಿಗೆ ಮೀಸಲಿಟ್ಟಿರುವ ಸೀಟು ಹೊರ ರಾಜ್ಯದ ವಿದ್ಯಾರ್ಥಿಗಳಿಗೆ ಹಂಚಿಕೆಯಾಗುವುದಿಲ್ಲ. ದಾಖಲೆ ಪರಿಶೀಲನೆ ಜು.19ರ ತನಕವೂ ನಡೆಯಲಿದೆ. ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿರುವುದರಿಂದ ಮೊದಲೆರೆಡುದಿನ ಒತ್ತಡ ಜಾಸ್ತಿ.
-ಗಂಗಾಧರಯ್ಯ, ಆಡಳಿತಾಧಿಕಾರಿ, ಕೆಇಎ