ಸಿದ್ದಾಪುರ: ರೈತನ ಮಗನೊಬ್ಬ ಬಿ. ಎಡ್. ಪದವಿ ಪಡೆದು ಶಿಕ್ಷಕ ವೃತ್ತಿಗೆ ಹೋಗದೆ, ಕೃಷಿಯಲ್ಲಿ ಎನಾದರೂ ಸಾಧನೆ ಮಾಡಬೇಕೆಂಬ ಹಂಬಲದೊಂದಿಗೆ ಸಾವಯವ ಕೃಷಿಯಲ್ಲಿ ತೊಡಗಿಕೊಂದು ಸಾಧನೆ ಮಾಡಲು ಹೊರಟಿದ್ದಾರೆ.
ಕುಂದಾಪುರ ತಾಲೂಕಿನ ಹೊಸಂಗಡಿ ಗ್ರಾಮದ ಹೊಳೆ ಶಂಕರನಾರಾಯಣದ ಸಮೀಪದ ಬೆಚ್ಚಳ್ಳಿಯ ಕೃಷಿ ಕುಟುಂಬದಲ್ಲಿ ಹುಟ್ಟಿರುವ ರಾಜೇಂದ್ರ ಪೂಜಾರಿ ಅವರು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಬಿ.ಎಡ್. ಪದವಿ ಮುಗಿಸಿದ್ದಾರೆ. ಅವರಿಗೆ ಸರಕಾರಿ ಉದ್ಯೋಗ ಅರಸಿ ಬಂದರೂ, ಅದನ್ನು ಬಿಟ್ಟು ಕೃಷಿಯಲ್ಲಿ ಮುಂದುವರಿದಿದ್ದಾರೆ. ಪ್ರತಿ ಬುಧವಾರ ಸಿದ್ದಾಪುರ ಸಂತೆ ಮತ್ತು ಪ್ರತಿ ಶನಿವಾರ ಕುಂದಾಪುರ ಸಂತೆಯಲ್ಲಿ ತಾವು ಬೆಳೆದ ತರಕಾರಿ ಹಾಗೂ ಇತರ ಬೆಳೆಗಳನ್ನು ಮಾರುತ್ತಾರೆ.
ರಾಜೇಂದ್ರ ಪೂಜಾರಿ ಅವರ ತಂದೆ ಭೋಜ ಪೂಜಾರಿ ಹಾಗೂ ಅವರ ಕುಟುಂಬ ತರಕಾರಿ ಮತ್ತು ತೋಟಗಾರಿಕೆ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಯಾವುದೇ ರಸಾಯನಿಕ ಔಷಧಗಳನ್ನು ಬಳಸದೆ ಸಾವಯವ ಗೊಬ್ಬರಗಳ ಬಳಕೆ ಮಾಡಿ, ಈ ಮೂಲಕ ಉತ್ತಮವಾದ ಫಸಲು ಪಡೆಯುತ್ತಿದ್ದಾರೆ. ಅವರು ಬೆಚ್ಚಳ್ಳಿ ಮಾತ್ರವಲ್ಲದೆ ಕಾವ್ರಾಡಿ ಗ್ರಾಮದ ಮುಂಭಾರಿನಲ್ಲಿಯೂ ಕೃಷಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಸದ್ಯ ತಂದೆಯ ಕೃಷಿ ಕೈಂಕರ್ಯಕ್ಕೆ ಮಗನೂ ಮನಸ್ಸು ಮಾಡಿದ್ದು ಇತರ ಶಿಕ್ಷಿತ ವರ್ಗಕ್ಕೂ ಮಾದರಿಯಾಗಿದ್ದಾರೆ.
ರಾಜೇಂದ್ರ ಪೂಜಾರಿ ಅವರ ಇಡೀ ಕುಟುಂಬ ಸಾವಯವ ಕೃಷಿಯಲ್ಲಿ ತೊಡಗಿಸಿಕೊಂಡಿದ್ದು, ಈ ಮೂಲಕ ಉತ್ತಮ ಆದಾಯವನ್ನೂ ಗಳಿಸುತ್ತಿದ್ದಾರೆ. ತೋಟಗಾರಿಕೆ ಬೆಳೆಗಳಾದ ಅಡಿಕೆ, ತೆಂಗು, ಬಾಳೆ, ಚಿಕ್ಕು, ದುಡ್ಲೆಕಾಯಿ, ದಿವೆಲ್ಸಿನಕಾಯಿ, ಕಾಳು ಮೆಣಸು, ಕಬ್ಬು. ತರಕಾರಿ ಬೆಳೆಗಳಾದ ಸುವರ್ಣಗಡ್ಡೆ, ಮರಸನಗಡ್ಡೆ, ಅನಾನಸು, ಪಪ್ಪಾಯಿ, ನುಗ್ಗೆಕಾಯಿ, ಆಮ್ಟೆಕಾಯಿ ಇದರಲ್ಲಿ ಸಿಹಿ ಮತ್ತು ಹುಳಿ, ಮರಗೆಣಸು, ಕೆಸು, ಬೆಂಡೆ, ಪಡವಲಕಾಯಿ, ಅಲಸಂಡೆ, ಇಬ್ಬುಡ್ಲ, ಮುಳ್ಳುಸೌತೆ, ಹಾಗಲಕಾಯಿ, ಸಾಂಬರ್‌ಸೌತೆ, ಹರಿವೆೆ ಸೊಪ್ಪು ಇದರಲ್ಲಿ ಕೆಂಪು ಮತ್ತು ಬಿಳಿ, ಬಸಳೆ ಸೊಪ್ಪು, ಮೆಣಸು, ಬದನೆಕಾಯಿ, ಸಿಹಿ ಮತ್ತು ಬೂದು ಗುಂಬಾಳಕಾಯಿ, ತೊಂಡೆಕಾಯಿ, ಅವಡೆ, ಶುಂಠಿ ಇತ್ಯಾದಿಗಳನ್ನು ಇವರ ತೋಟದಲ್ಲಿ ನಾವು ಕಾಣಬಹುದಾಗಿದೆ.
– ಸತೀಶ್ ಆಚಾರ್ ಉಳ್ಳೂರ್